ADVERTISEMENT

ಅಮೆರಿಕ ಪಡೆಗಳು ತೆರಳಿದ ಬೆನ್ನಲ್ಲೇ ಸಂಪೂರ್ಣ ಸ್ವಾತಂತ್ರ್ಯ ಘೋಷಿಸಿಕೊಂಡ ತಾಲಿಬಾನ್

ಏಜೆನ್ಸೀಸ್
Published 31 ಆಗಸ್ಟ್ 2021, 2:28 IST
Last Updated 31 ಆಗಸ್ಟ್ 2021, 2:28 IST
ಕಾಬೂಲ್ ವಿಮಾನ ನಿಲ್ದಾಣ – ಎಎಫ್‌ಪಿ ಚಿತ್ರ
ಕಾಬೂಲ್ ವಿಮಾನ ನಿಲ್ದಾಣ – ಎಎಫ್‌ಪಿ ಚಿತ್ರ   

ಕಾಬೂಲ್: ಅಮೆರಿಕದ ಪಡೆಗಳು 20 ವರ್ಷಗಳ ಬಳಿಕ ಅಫ್ಗಾನಿಸ್ತಾನ ತೊರೆದ ಬೆನ್ನಲ್ಲೇ ತಾಲಿಬಾನ್ ಸಂಪೂರ್ಣ ಸ್ವಾತಂತ್ರ್ಯ ಘೋಷಿಸಿಕೊಂಡಿದೆ.

‘ಅಮೆರಿಕದ ಯೋಧರು ಕಾಬೂಲ್ ವಿಮಾನ ನಿಲ್ದಾಣ ತೊರೆದಿದ್ದಾರೆ. ನಮ್ಮ ದೇಶವೀಗ ಸಂಪೂರ್ಣ ಸ್ವತಂತ್ರಗೊಂಡಿದೆ’ ಎಂದು ತಾಲಿಬಾನ್ ವಕ್ತಾರ ಜಬಿಯುಲ್ಲಾ ಮುಜಾಹಿದ್ ಹೇಳಿದ್ದಾರೆ.

ಆಗಸ್ಟ್ 30ರ ಗಡುವು ಮುಗಿಯುತ್ತಿದ್ದಂತೆಯೇ, ಅಫ್ಗಾನಿಸ್ತಾನದಿಂದ ತೆರವು ಕಾರ್ಯಾಚರಣೆ ಮುಗಿದಿದೆ ಎಂದು ಅಮೆರಿಕ ಘೋಷಿಸಿತ್ತು.

ಸೋಮವಾರ ಮಧ್ಯರಾತ್ರಿ ವೇಳೆಗೆ ಅಮೆರಿಕ ಯೋಧರನ್ನೊಳಗೊಂಡ ಕೊನೆಯ ವಿಮಾನ ಕಾಬೂಲ್‌ನಿಂದ ನಿರ್ಗಮಿಸಿದ ಕೂಡಲೇ ತಾಲಿಬಾನ್ ಹೋರಾಟಗಾರರು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆ ನಡೆಸಿದ್ದಾರೆ.

ನೂರಕ್ಕೂ ಹೆಚ್ಚು ಅಮೆರಿಕನ್ನರು ಅಫ್ಗಾನಿಸ್ತಾನದಲ್ಲಿ ಬಾಕಿ!

ಅಂತಿಮ ಹಂತದ ತೆರವು ಕಾರ್ಯಾಚರಣೆ ಹೊರತಾಗಿಯೂ ಅಮೆರಿಕದ ನೂರಕ್ಕೂ ಹೆಚ್ಚು ಮಂದಿ ಅಫ್ಗಾನಿಸ್ತಾನದಲ್ಲಿ ಉಳಿದುಕೊಂಡಿದ್ದಾರೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹೇಳಿದ್ದಾರೆ.

ಬಾಕಿ ಉಳಿದವರನ್ನು ಅಮೆರಿಕಕ್ಕೆ ಕರೆಸಿಕೊಳ್ಳಲು ಎಲ್ಲ ರೀತಿಯಲ್ಲಿ ಪ್ರಯತ್ನಿಸಲಾಗುವುದು. ಅಫ್ಗಾನಿಸ್ತಾನದ ನೆರೆ ರಾಷ್ಟ್ರಗಳ ಜತೆ ಮಾತುಕತೆ ನಡೆಸಿ ಅಮೆರಿಕನ್ನರ ಸುರಕ್ಷಿತ ವಾಪಸಾತಿಗೆ ಕ್ರಮ ಕೈಗೊಳ್ಳಲಾಗುವುದು. ಕಾಬೂಲ್ ವಿಮಾನ ನಿಲ್ದಾಣದಿಂದ ವಿಮಾನಗಳ ಸಂಚಾರ ಪುನರಾರಂಭಗೊಂಡ ನಂತರ ಅವರನ್ನು ಕರೆಸಿಕೊಳ್ಳಲಾಗುವುದು ಎಂದು ಬ್ಲಿಂಕೆನ್ ಹೇಳಿದ್ದಾರೆ. ಕಾಬೂಲ್‌ನಲ್ಲಿ ರಾಯಭಾರ ಕಚೇರಿಯನ್ನು ಮುಚ್ಚಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.