ADVERTISEMENT

ಅಫ್ಗಾನ್: ವಿರೋಧಿಗಳಿಗಾಗಿ ಮನೆ ಮನೆಗೆ ನುಗ್ಗಿ‌ ಶೋಧ ಆರಂಭಿಸಿದ ತಾಲಿಬಾನ್ ಉಗ್ರರು

ವಿಶ್ವಸಂಸ್ಥೆಯ ಗುಪ್ತಚರ ವರದಿಯೊಂದರಲ್ಲಿ ಉಲ್ಲೇಖ

ಏಜೆನ್ಸೀಸ್
Published 20 ಆಗಸ್ಟ್ 2021, 9:20 IST
Last Updated 20 ಆಗಸ್ಟ್ 2021, 9:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಾಬೂಲ್‌: ತಾಲಿಬಾನ್‌ ಉಗ್ರರು ತಮ್ಮ ವಿರೋಧಿಗಳು ಹಾಗೂ ಅವರ ಕುಟುಂಬದವರಿಗಾಗಿ ಮನೆ ಮನೆಯನ್ನು ಶೋಧಿಸಿದ್ದಾರೆ ಎಂಬ ವಿಶ್ವಸಂಸ್ಥೆಯ ಗುಪ್ತಚರ ವಿಭಾಗ ಮಾಹಿತಿಯ ಹಿನ್ನೆಲೆಯಲ್ಲಿ ಅಫ್ಗಾನಿಸ್ತಾನದ ನಾಗರಿಕರು ತೀವ್ರ ಭಯಗ್ರಸ್ಥರಾಗಿದ್ದಾರೆ.

‘ಈ ಹಿಂದಿನ ಅಫ್ಗಾನಿಸ್ತಾನದ ಆಡಳಿತದಲ್ಲಿ ಅಮೆರಿಕ ಮತ್ತು ನ್ಯಾಟೊ ಪಡೆಗಳೊಂದಿಗೆ ಕೆಲಸ ಮಾಡಿದ ಜನರನ್ನು ಪತ್ತೆ ಮಾಡಲು ತಾಲಿಬಾನ್ ಉಗ್ರರು ಮನೆ ಮನೆಗೆ ನುಗ್ಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಅಪಾಯ ಮೌಲ್ಯಮಾಪನ ಸಲಹೆಗಾರರೊಬ್ಬರು ಸಿದ್ಧಪಡಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ವರದಿಯನ್ನು ವಿಶ್ವಸಂಸ್ಥೆಗೆ ಗೌಪ್ಯ ಮಾಹಿತಿಯನ್ನು ಪೂರೈಸುವ ‘ಸೆಂಟರ್ ಫಾರ್ ಗ್ಲೋಬಲ್ ಅನಾಲಿಸಿಸ್‌' ಸಿದ್ಧಪಡಿಸಿದೆ. ಈ ವರದಿಯಲ್ಲಿ ‘ಉಗ್ರರು ಕಾಬೂಲ್ ವಿಮಾನ ನಿಲ್ದಾಣಕ್ಕೆ ಹೋಗುವ ಜನರನ್ನು ತಪಾಸಣೆ ಮಾಡುತ್ತಿದ್ದಾರೆ‘ ಎಂದು ಉಲ್ಲೇಖಿಸಲಾಗಿದೆ.

ADVERTISEMENT

‘ಅಮೆರಿಕ ಮತ್ತು ನ್ಯಾಟೊ ಪಡೆಗಳೊಂದಿಗೆ ಕೆಲಸ ಮಾಡಿದ ಕುಟುಂಬಗಳ ಮಾಹಿತಿಯನ್ನು ಬಿಟ್ಟು ಕೊಡಲು ನಿರಾಕರಿಸುವವರನ್ನೇ ತಾಲಿಬಾನಿಗಳು ಗುರಿಯಾಗಿಸುತ್ತಿದ್ದಾರೆ. ಅಂಥ ಕುಟುಂಬಗಳನ್ನು ಶರಿಯಾ ಕಾನೂನಿನ ಪ್ರಕಾರ ವಿಚಾರಣೆಗೊಳಪಡಿಸುತ್ತಾರೆ ಮತ್ತು ಶಿಕ್ಷಿಸುತ್ತಾರೆ ಎಂದು ಈ ವರದಿಯನ್ನು ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದ್ದ ಕ್ರಿಶ್ಚಿಯನ್ ನೆಲ್ಲೆಮನ್ ‘ಎಎಫ್‌ಪಿ‘ಗೆ ತಿಳಿಸಿದ್ದಾರೆ.

‘ಈ ಹಿಂದೆ ನ್ಯಾಟೊ ಮತ್ತು ಅಮೆರಿಕ ಪಡೆಗಳು ಮತ್ತು ಅವರ ಮಿತ್ರರೊಂದಿಗೆ ಕೆಲಸ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಅವರ ಕುಟುಂಬ ಸದಸ್ಯರೊಂದಿಗೆ ಚಿತ್ರಹಿಂಸೆ ಅನುಭವಿಸಿ, ಮರಣದಂಡನೆಗೆ ಗುರಿಯಾಗುವ ಸಾಧ್ಯತೆ ಇದೆ‘ ಎಂದು ಅವರು ಹೇಳಿದ್ದಾರೆ.

ಆದರೆ, ತಾಲಿಬಾನ್‌ ಸಂಘಟನೆ ಈ ಹಿಂದೆ ಇಂತಹ ಆರೋಪಗಳನ್ನು ತಳ್ಳಿ ಹಾಕಿತ್ತು. ಮಾತ್ರವಲ್ಲ, ಕುಟುಂಬಗಳಿರುವ ಮನೆಗಳಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಹಲವು ಬಾರಿ ಹೇಳಿಕೆಗಳನ್ನು ಬಿಡುಗಡೆ ಮಾಡಿತ್ತು.

ಇದೇ ರೀತಿ ಅಫ್ಗಾನಿಸ್ತಾನದ ಹೊಸ ಆಡಳಿತದಲ್ಲಿ ಮಹಿಳೆಯರು ಮತ್ತು ಮಹಿಳಾ ಪತ್ರಕರ್ತರು ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ ಎಂದು ತಾಲಿಬಾನಿಗಳು ಭರವಸೆ ನೀಡುವ ಸಮಯದಲ್ಲೇ, ಕಾಬೂಲ್‌ನಲ್ಲಿನ ಅವ್ಯವಸ್ಥೆಗಳನ್ನು ವರದಿ ಮಾಡಲು ಹೋಗಿದ್ದ ಹಲವು ಮಾಧ್ಯಮ ಸಿಬ್ಬಂದಿ ಮೇಲೆ ತಾಲಿಬಾನಿಗಳು ಲಾಠಿ ಅಥವಾ ಚಾವಟಿಯಿಂದ ಹೊಡೆದಿದ್ದಾರೆ ಎಂಬ ವರದಿಗಳು ಪ್ರಕಟವಾಗಿದ್ದವು.

ಈ ಎಲ್ಲ ಬೆಳವಣಿಗೆಗಳಿಂದಾಗಿ ಅಫ್ಗಾನಿಸ್ತಾನದ ಹೊಸ ಆಡಳಿತದಲ್ಲಿ ‘ಸಹಿಷ್ಣು‘ ವಾತಾವರಣವಿರಲಿದೆ ಎಂಬ ತಾಲಿಬಾನಿಗಳ ಭರವಸೆಯ ಮಾತುಗಳನ್ನು ನಾಗರಿಕರು ನಿರಾಕರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.