ADVERTISEMENT

ಪ್ರತಿಭಟನೆಗೆ ತಾಲಿಬಾನ್‌ ಕೆಂಗಣ್ಣು: ಕಠಿಣ ಕ್ರಮದ ಎಚ್ಚರಿಕೆ

ನಗರಗಳಲ್ಲಿ ಭದ್ರತೆ ಹೆಚ್ಚಳ

ಏಜೆನ್ಸೀಸ್
Published 9 ಸೆಪ್ಟೆಂಬರ್ 2021, 19:31 IST
Last Updated 9 ಸೆಪ್ಟೆಂಬರ್ 2021, 19:31 IST
ಕಾಬೂಲ್‌ ಬೀದಿಯಲ್ಲಿ ಗುರುವಾರ ಭದ್ರತೆ ಹೆಚ್ಚಿಸಲಾಗಿತ್ತು ಎಎಫ್‌ಪಿ ಚಿತ್ರ
ಕಾಬೂಲ್‌ ಬೀದಿಯಲ್ಲಿ ಗುರುವಾರ ಭದ್ರತೆ ಹೆಚ್ಚಿಸಲಾಗಿತ್ತು ಎಎಫ್‌ಪಿ ಚಿತ್ರ   

ಕಾಬೂಲ್‌: ಅಫ್ಗಾನಿಸ್ತಾನದಲ್ಲಿ ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ. ಇದನ್ನು
ಉಲ್ಲಂಘಿಸಿ ಪ್ರತಿಭಟನೆ ನಡೆಸಿದವರ ಮೇಲೆ ಕಾನೂನಿನ ಅನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಾಲಿಬಾನ್‌ ಎಚ್ಚರಿಸಿದೆ.
ಪರಿಣಾಮವಾಗಿ ಕಾಬೂಲ್‌ನಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗಳನ್ನು ಸಂಘಟಕರು
ರದ್ದುಪಡಿಸಿದ್ದಾರೆ.

ರಾಜಧಾನಿ ಕಾಬೂಲ್‌, ಈಶಾನ್ಯದ ನಗರ ಫೈಜಾಬಾದ್‌, ಪಶ್ಚಿಮದ ನಗರ ಹೆರಾತ್‌ ಸೇರಿ ಅಫ್ಗಾನಿಸ್ತಾನದ ವಿವಿಧ ಭಾಗಗಳಲ್ಲಿ ಈ ವಾರ ಪ್ರತಿಭಟನೆ ನಡೆಸಿದವರನ್ನು ತಾಲಿಬಾನ್‌ ಸೈನಿಕರು ಚೆದುರಿಸಿದ್ದರು. ತಾಲಿಬಾನ್‌ ಸೈನಿಕರು ಹಾರಿಸಿದ ಗುಂಡಿಗೆ ಇಬ್ಬರು ಪ್ರತಿಭಟನಕಾರರು
ಬಲಿಯಾಗಿದ್ದರು.

ದೇಶದ ಹಲವೆಡೆಗೆ ವ್ಯಾಪಿಸುತ್ತಿರುವ ಪ್ರತಿಭಟನೆಗಳನ್ನು ದಮನ ಮಾಡಲು ತಾಲಿಬಾನ್‌ ಭಾರಿ ಪ್ರಯತ್ನ
ನಡೆಸುತ್ತಿದೆ. ಪ್ರತಿಭಟನೆ ನಡೆಸಬೇಕಿದ್ದರೆ ನ್ಯಾಯಾಂಗ ಸಚಿವಾಲಯದ ಪೂರ್ವಾನುಮತಿ ಕಡ್ಡಾಯ ಎಂದು ಬುಧವಾರವೇ ಹೇಳಲಾಗಿತ್ತು. ಆದರೆ, ಸದ್ಯಕ್ಕೆ ಪ್ರತಿಭಟನೆಗೆ ಅವಕಾಶವೇ ಇಲ್ಲ ಎಂದೂ
ತಿಳಿಸಲಾಗಿತ್ತು.

ADVERTISEMENT

ಕಾಬೂಲ್‌ ಮತ್ತು ಇತರ ನಗರಗಳಲ್ಲಿ ತಾಲಿಬಾನ್‌ ಸೈನಿಕರ ಗಸ್ತನ್ನು ಗುರುವಾರ ಹೆಚ್ಚಿಸಲಾಗಿದೆ. ವಿಶೇಷ ಪಡೆಯ ಸೈನಿಕರು
ಕಾಬೂಲ್‌ನ ಬೀದಿಗಳಲ್ಲಿ ಶಸ್ತ್ರಸಜ್ಜಿತರಾಗಿ ಕಾವಲು ನಿಂತಿದ್ದರು.
ಹಲವು ಕಡೆ ಬ್ಯಾರಿಕೇಡ್‌ಗಳನ್ನು ಹಾಕಿ ತಪಾಸಣೆಯನ್ನೂ
ನಡೆಸಲಾಗುತ್ತಿದೆ.

ಕಾಬೂಲ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ಹೊರಭಾಗದಲ್ಲಿ ಪ್ರತಿಭಟನೆ ನಡೆಸಲು ಕೆಲವು ಜನರು ಗುರುವಾರ ಬೆಳಿಗ್ಗೆ ಸೇರಿದ್ದರು.
ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿ ಅವರನ್ನು ಚೆದುರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.