ವಾಷಿಂಗ್ಟನ್/ಅಲಾಸ್ಕ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಅಲಾಸ್ಕದಲ್ಲಿ ಶುಕ್ರವಾರ ಬಂದಿಳಿದರು.
ರಷ್ಯಾ–ಉಕ್ರೇನ್ ನಡುವಿನ ಯುದ್ಧ ಕೊನೆಗಾಣಿಸಿ, ಕದನ ವಿರಾಮ ಘೋಷಿಸಲು ಅಂತಿಮ ಒಪ್ಪಂದಕ್ಕೆ ಬರುವ ಕುರಿತು ಇಲ್ಲಿ ನಡೆಯುವ ಸಭೆಯಲ್ಲಿ ಉಭಯ ನಾಯಕರು ಚರ್ಚಿಸಲಿದ್ದಾರೆ.
ಉಭಯ ನಾಯಕರು ಇಲ್ಲಿನ ಹಸ್ತಲಾಘವ ಮಾಡಿ, ಸಭೆ ನಡೆಯಲಿರುವ ಸಭಾಂಗಣದತ್ತ ಹೆಜ್ಜೆ ಹಾಕಿದರು.
ಪುಟಿನ್ ಅವರ ಆಗಮನಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ‘ಉಕ್ರೇನ್ ಮತ್ತು ರಷ್ಯಾ ನಡುವೆ ತ್ವರಿತವಾಗಿ ಕದನ ವಿರಾಮ ಘೋಷಣೆ ಆಗಬೇಕು ಎಂಬುದು ನನ್ನ ಬಯಕೆ. ಇಂದಿನ ಈ ಸಭೆಯಲ್ಲಿ ಇದು ಸಾಧ್ಯವಾಗಲಿದೆಯೇ ಎಂಬುದು ನನಗೆ ತಿಳಿಯದು’ ಎಂದು ಹೇಳಿದರು.
‘ಒಪ್ಪಂದ ಕುರಿತಂತೆ ಯಾವುದೇ ನಿರ್ದಿಷ್ಟವಾಗಿ ಯಾವುದೂ ನಿರ್ಧಾರವಾಗಿಲ್ಲ’ ಎನ್ನುವ ಮೂಲಕ ಅವರು, ಇಂದಿನ ಸಭೆ ಉದ್ದೇಶಿತ ಗುರಿ ಸಾಧಿಸುವಲ್ಲಿ ಸಫಲವಾಗುವ ಅನಿಶ್ಚಿತತೆ ಇರುವುದನ್ನು ಸೂಚ್ಯವಾಗಿ ಹೇಳಿದರು.
‘ಕದನ ವಿರಾಮಕ್ಕೆ ಒಂದು ವೇಳೆ ಪುಟಿನ್ ಅವರು ಒಪ್ಪದಿದ್ದಲ್ಲಿ ನಾನು ಸಭೆಯಿಂದ ಹೊರನಡೆಯುವುದು ಖಚಿತ’ ಎಂದು ವಿಮಾನದಲ್ಲಿ ಪ್ರಯಾಣಿಸುವ ವೇಳೆ, ಫಾಕ್ಸ್ ನ್ಯೂಸ್‌ಗೆ ನೀಡಿದ ಪ್ರತ್ಯೇಕ ಸಂದರ್ಶನದಲ್ಲಿ ಟ್ರಂಪ್ ಹೇಳಿದ್ದಾರೆ.
ಅಲಾಸ್ಕಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ‘ರಷ್ಯಾದಿಂದ ಎರಡನೇ ಅತಿ ಹೆಚ್ಚು ಕಚ್ಚಾತೈಲ ಖರೀದಿಸುತ್ತಿದ್ದ ಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸಿದ್ದ ರಿಂದಲೇ, ರಷ್ಯಾವು–ಅಮೆರಿಕದ ಜೊತೆಗೆ ಮಾತುಕತೆಗೆ ಮುಂದಾಯಿತು’ ಎಂದು ತಿಳಿಸಿದ್ದಾರೆ.
‘ನೀವು ರಷ್ಯಾದಿಂದ ಕಚ್ಚಾತೈಲ ಖರೀದಿಸುತ್ತಿದ್ದು, ನಿಮಗೆ ಹೆಚ್ಚುವರಿ ತೆರಿಗೆ ವಿಧಿಸಲಾಗುವುದು ಎಂದು ಭಾರತಕ್ಕೆ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಅದೇ ರಷ್ಯಾ ಮಾತುಕತೆ ನಡೆಸಲು ಕಾರಣವಾಗಿದೆ’ ಎಂದು ‘ಫಾಕ್ಸ್’ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ
ಟ್ರಂಪ್ ತಿಳಿಸಿದ್ದಾರೆ.
ಬದಲಾವಣೆ ಇಲ್ಲ: ‘ರಷ್ಯಾದಿಂದ ತೈಲ ಆಮದು ನಿಲ್ಲಿಸಿಲ್ಲ. ಭಾರತವೂ ಮುಂದೆಯೂ ಖರೀದಿಸಲಿದ್ದು, ಈ ನಿರ್ಧಾರದಲ್ಲಿ ಬದಲಾವಣೆಯಿಲ್ಲ’ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಮುಖ್ಯಸ್ಥ ಎ.ಎಸ್. ಸಾಹ್ನಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.