
ಢಾಕಾ: ಸುಮಾರು 17 ವರ್ಷಗಳಿಂದ ಸ್ವಯಂ ಗಡಿಪಾರಾಗಿ ಲಂಡನ್‌ನಲ್ಲಿ ನೆಲಸಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷದ ಹಂಗಾಮಿ ಅಧ್ಯಕ್ಷ ತಾರಿಕ್ ರೆಹಮಾನ್ ಗುರುವಾರ ಬಾಂಗ್ಲಾದೇಶಕ್ಕೆ ಮರಳಲಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ತಾರಿಕ್ (60) ಅವರು ಬಾಂಗ್ಲಾದ ಮಾಜಿ ಪ್ರಧಾನಿ ಖಲೀದಾ ಜಿಯಾ (80) ಅವರ ಮಗ. ಬಾಂಗ್ಲಾದಲ್ಲಿ ಬದಲಾದ ರಾಜಕೀಯ ಸನ್ನಿವೇಶದ ಪರಿಣಾಮ, ತಾರಿಕ್ ಅವರು ಫೆಬ್ರುವರಿಯಲ್ಲಿ ಎದುರಾಗಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ.
‘ತಾರಿಕ್ ಅವರು ಲಂಡನ್‌ನಿಂದ ಹೊರಟಿದ್ದು, ಗುರುವಾರ ಬಾಂಗ್ಲಾಕ್ಕೆ ಬರಲಿದ್ದಾರೆ. ಅವರ ಪತ್ನಿ ಡಾ. ಜುಬೈದಾ ರೆಹಮಾನ್, ಮಗಳು ಜೈಮಾ ರೆಹಮಾನ್ ಸಹ ಬರಲಿದ್ದಾರೆ’ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
ಬಾಂಗ್ಲಾಗೆ ಬಂದ ಬಳಿಕ ತಾರಿಕ್ ಅವರು ಬಿಎನ್‌ಪಿ ನಾಯಕರು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ. ನಂತರ ಅವರು ತಮ್ಮ ತಾಯಿಯನ್ನು ನೋಡಲು ಆಸ್ಪತ್ರೆಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾರಿಕ್ ಬರುವ ಮಾಹಿತಿ ಬೆನ್ನಲ್ಲೇ, ವಿಮಾನ ನಿಲ್ದಾಣದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.
2007ರಲ್ಲಿದ್ದ ಉಸ್ತುವಾರಿ ಸರ್ಕಾರವು ತಾರಿಕ್ ಅವರನ್ನು ಬಂಧಿಸಿ 18 ತಿಂಗಳು ಜೈಲಿನಲ್ಲಿರಿಸಿತ್ತು. 2008ರಲ್ಲಿ ವೈದ್ಯಕೀಯ ಚಿಕಿತ್ಸೆಗೆಂದು ಅವರು ಬ್ರಿಟನ್‌ಗೆ ತೆರಳಿದ್ದರು.
ಕೋಲ್ಕತ್ತ : ಬಾಂಗ್ಲಾದಲ್ಲಿ ನಡೆದ ಹಿಂದೂ ಯುವಕ ದೀಪು ಚಂದ್ರದಾಸ್ ಹತ್ಯೆಯನ್ನು ಖಂಡಿಸಿ ಹಿಂದೂಪರ ಸಂಘಟನೆಗಳ ಸದಸ್ಯರು ಬುಧವಾರ ಪಶ್ಚಿಮ ಬಂಗಾಳ ವ್ಯಾಪ್ತಿಯಲ್ಲಿರುವ ಭಾರತ– ಬಾಂಗ್ಲಾದ ಗಡಿಯ ಪ್ರವೇಶ ಭಾಗಗಳಲ್ಲಿ ಪ್ರತಿಭಟನೆ ನಡೆಸಿದರು.
ಹೌರಾ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ಮತ್ತು ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆ ನಡೆಯಿತು. ಹೌರಾ ಸೇತುವೆ ಬಳಿ ಪ್ರತಿಭಟನಕಾರರನ್ನು ತಡೆಯಲು ಪೊಲೀಸರು ಮುಂದಾದಾಗ ವಾಗ್ವಾದ ನಡೆಯಿತು.
ಈ ವೇಳೆ ಪ್ರತಿಭಟನಕಾರರು ಬ್ಯಾರಿಕೇಡ್‌ಗಳನ್ನು ತೆಗೆದು ಮುನ್ನುಗ್ಗಲು ಪ್ರಯತ್ನಿಸಿದಾಗ ಘರ್ಷಣೆ ನಡೆಯಿತು. ಪೊಲೀಸರು ಗುಂಪನ್ನು ಚದುರಿಸಿದರು. ಸನಾತನ ಐಕ್ಯ ಪರಿಷತ್‌ನ ಸದಸ್ಯರು ಉತ್ತರ 24 ಪರಗಣ ಜಿಲ್ಲೆಯ ಪೆಟ್ರಾಪೋಲ್ ಮತ್ತು ಘೋಜದಂಗ ಗಡಿ ಪ್ರವೇಶ ಭಾಗದಲ್ಲಿ ಮಾಲ್ಡಾದ ಮನೋಹರಪುರ್ ಮುಚಿಯಾ ಮತ್ತು ಕೂಚ್ ಬಿಹಾರ್ ಜಿಲ್ಲೆಯ ಚಂಗರಬಂಧದಲ್ಲಿ ಪ್ರತಿಭಟನೆಗಳನ್ನು ನಡೆಸಿದರು.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಿಲ್ಲುವ ತನಕ ವ್ಯಾಪಾರ ನಡೆಸಬಾರದು ಎಂದು ಪ್ರತಿಭಟನಕಾರರು ಆಗ್ರಹಿಸಿದರು. ಬಾಂಗ್ಲಾದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ವಿರುದ್ಧ ಘೋಷಣೆಗಳನ್ನು ಕೂಗಿದರು.