ADVERTISEMENT

ಕೃತಕ ಬುದ್ಧಿಮತ್ತೆ: ಎಚ್ಚರಿಕೆ ಅಗತ್ಯ: ಸತ್ಯ ನಾದೆಲ್ಲಾ

ತಂತ್ರಜ್ಞಾನ ಶೃಂಗಸಭೆಯಲ್ಲಿ ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಲ್ಲಾ ಪ್ರತಿಪಾದನೆ

ಪಿಟಿಐ
Published 7 ಡಿಸೆಂಬರ್ 2018, 19:10 IST
Last Updated 7 ಡಿಸೆಂಬರ್ 2018, 19:10 IST
ಸತ್ಯ ನಾದೆಲ್ಲಾ
ಸತ್ಯ ನಾದೆಲ್ಲಾ   

ವಾಷಿಂಗ್ಟನ್‌: ‘ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನ ಅಭಿವೃದ್ಧಿಪಡಿಸುವಾಗ ಎಚ್ಚರಿಕೆ ಅಗತ್ಯ. ಈ ತಂತ್ರಜ್ಞಾನ ದುರುಪಯೋಗವಾಗದಂತೆಯೂ ಎಚ್ಚರ ವಹಿಸಬೇಕಾದ ಅಗತ್ಯ ಇದೆ’ ಎಂದು ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಲ್ಲಾ ಹೇಳಿದ್ದಾರೆ.

‘ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಬಳಕೆಗಾಗಿ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಹೇಗೆ ಅಭಿವೃದ್ಧಿ ಪಡಿಸಬೇಕು ಎಂಬುದರ ಕುರಿತು ಚಿಂತಿಸಬೇಕಾದ ಸಮಯ ಬಂದಿದೆ’ ಎಂದು ಶ್ವೇತಭವನದಲ್ಲಿ ಹಮ್ಮಿಕೊಂಡಿದ್ದ ತಂತ್ರಜ್ಞಾನ ಶೃಂಗಸಭೆಯಲ್ಲಿ ಪಾಲ್ಗೊಂಡ ಬಳಿಕ ಸತ್ಯ ಅವರು ಟ್ವೀಟ್‌ ಮಾಡಿದ್ದಾರೆ.

‘ಫೇಷಿಯಲ್‌ ರೆಕಗ್ನಿಷನ್‌ ತಂತ್ರಜ್ಞಾನದ ಬಳಕೆಯಿಂದ ಜನರಿಗೆ ಧನಾತ್ಮಕ ಪ್ರಯೋಜನಗಳು ಸಾಕಷ್ಟು ಲಭಿಸಲಿವೆ. ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಮೈಕ್ರೋಸಾಫ್ಟ್ ಕಂಪನಿಯೂ ಒಂದು’ ಎಂದು ಹೇಳಿದ್ದಾರೆ.

ADVERTISEMENT

‘ಸಾಮೂಹಿಕ ಕಣ್ಗಾವಲಿಗಾಗಿ ಸರ್ಕಾರಗಳು ಫೇಷಿಯಲ್‌ ರೆಕಗ್ನಿಷನ್‌ ತಂತ್ರಜ್ಞಾನವನ್ನು ಬಳಸುವಾಗ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ಬರಬಹುದು’ ಎಂದು ಮೈಕ್ರೋಸಾಫ್ಟ್‌ ಸಂಸ್ಥೆಯ ಅಧ್ಯಕ್ಷ ಬ್ರ್ಯಾಡ್‌ ಸ್ಮಿತ್‌ ಹೇಳಿದ್ದಾರೆ.

ಪಿಚ್ಚೈ ಭಾಗಿ: ತಂತ್ರಜ್ಞಾನ ಶೃಂಗಸಭೆಯಲ್ಲಿ ಗೂಗಲ್‌ ಸಿಇಒ ಸುಂದರ್‌ ಪಿಚ್ಚೈ ಕೂಡ ಪಾಲ್ಗೊಂಡಿದ್ದರು.

ಸಿಲಿಕಾನ್‌ ವ್ಯಾಲಿ ಜೊತೆಗಿನ ಸಂಬಂಧ ಸುಧಾರಣೆಗಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಶೃಂಗ ಸಭೆಯನ್ನು ಆಯೋಜಿಸಿದ್ದು, ಆಯ್ದ ಸಂಸ್ಥೆಗಳ ಸಿಇಒಗಳನ್ನು ಆಹ್ವಾನಿಸಿತ್ತು.

‌‘ಹೊಸ ತಂತ್ರಜ್ಞಾನಗಳ ಆವಿಷ್ಕಾರದ ಬಗ್ಗೆ ಅಮೆರಿಕದ ಆಡಳಿತದ ಜೊತೆಗೆ ಔಚಿತ್ಯಪೂರ್ಣ ಮಾತುಕತೆ ನಡೆಸಿದ್ದೇವೆ’ ಎಂದು ಸುಂದರ್‌ ಪಿಚ್ಚೈ ಹೇಳಿದ್ದಾರೆ.

ಶೃಂಗಸಭೆಯಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಐಬಿಎಂ ಮುಖ್ಯಸ್ಥೆ ಗಿನ್ನಿ ರೊಮೆಟ್ಟಿ, ಒರಾಕಲ್‌ ಕಂಪನಿಯ ಸಫ್ರಾ ಕಾಟ್ಜ್‌ ಮೊದಲಾದವರು ಪಾಲ್ಗೊಂಡಿದ್ದರು.

**

ಭಾರತದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಧನಾತ್ಮಕವಾಗಿ ಬಳಕೆ ಮಾಡುತ್ತಿರುವುದು ಅನುಕರಣೀಯ
– ಬ್ರ್ಯಾಡ್‌ ಸ್ಮಿತ್‌, ಅಧ್ಯಕ್ಷ, ಮೈಕ್ರೋಸಾಫ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.