ADVERTISEMENT

ಪಾಕ್‌ನಲ್ಲಿ ಉಗ್ರರು ಎಗ್ಗಿಲ್ಲದೆ ಓಡಾಡಿಕೊಂಡಿದ್ದಾರೆ: ಭಾರತ ತಿರುಗೇಟು

ಪಿಟಿಐ
Published 17 ನವೆಂಬರ್ 2021, 6:58 IST
Last Updated 17 ನವೆಂಬರ್ 2021, 6:58 IST
ಐಸ್ಟಾಕ್ ಚಿತ್ರ
ಐಸ್ಟಾಕ್ ಚಿತ್ರ   

ವಿಶ್ವಸಂಸ್ಥೆ: ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಕೆದಕಿದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ತಿರುಗೇಟು ಕೊಟ್ಟಿದೆ.

ಪಾಕಿಸ್ತಾನದಲ್ಲಿ ಭಯೋತ್ಪಾದಕರು ಎಗ್ಗಿಲ್ಲದೆ ಓಡಾಡಿಕೊಂಡಿದ್ಧಾರೆ. ಸಕ್ರಿಯವಾಗಿ ಭಯೋತ್ಪಾದಕರನ್ನು ಬೆಂಬಲಿಸುವ ಮತ್ತು ಬೆಳೆಸುವ ಕೆಟ್ಟ ನೀತಿ ಮತ್ತು ಇತಿಹಾಸವನ್ನು ಪಾಕಿಸ್ತಾನ ಹೊಂದಿದೆ ಎಂದು ಭಾರತ ಹೇಳಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನದ ಪ್ರತಿನಿಧಿಯು ಮಾಡಿದ ಕೆಲವು ತಿರುಳಿಲ್ಲದ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ಇಚ್ಛಿಸುತ್ತೇನೆ ಎಂದು ಮಾತು ಆರಂಭಿಸಿದ ವಿಶ್ವಸಂಸ್ಥೆಯ ಭಾರತದ ಖಾಯಂ ಮಿಷನ್‌ನ ಕೌನ್ಸಿಲರ್ ಕಾಜಲ್ ಭಟ್, ಭಾರತದ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಅಪಪ್ರಚಾರ ಮಾಡಲು ಪಾಕಿಸ್ತಾನದ ಪ್ರತಿನಿಧಿಯು ವಿಶ್ವಸಂಸ್ಥೆಯ ವೇದಿಕೆಯನ್ನು ಬಳಸುತ್ತಿರುವುದು ಇದೇ ಮೊದಲಲ್ಲ. ತನ್ನ ದೇಶದಲ್ಲಿ ಉಗ್ರರಿಗೆ ಉತ್ತೇಜನ ಮತ್ತು ಸಾಮಾನ್ಯ ಜನರು ಅದರಲ್ಲೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳಂತಹ ಸಮಸ್ಯೆಗಳಿಂದ ವಿಶ್ವದ ಗಮನ ಬೇರೆಡೆ ಸೆಳೆಯಲು ಪಾಕಿಸ್ತಾನ ಈ ಕುತಂತ್ರ ಮಾಡುತ್ತಿದೆ’ಎಂದು ಟೀಕಿಸಿದ್ದಾರೆ.

ADVERTISEMENT

ವಿಶ್ವಸಂಸ್ಥೆಯ ರಾಯಭಾರಿಯಾಗಿರುವ ಭಾರತದ ಉಪ ಖಾಯಂ ಪ್ರತಿನಿಧಿ ಆರ್ ರವೀಂದ್ರ ಅವರು ಈಗಾಗಲೇ ಯುಎನ್‌ಎಸ್‌ಸಿ ಮುಕ್ತ ಚರ್ಚೆಯಲ್ಲಿ 'ರಾಜತಾಂತ್ರಿಕತೆಯ ಮೂಲಕ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ನಿರ್ವಹಣೆ' ಕುರಿತು ರಾಷ್ಟ್ರೀಯ ಹೇಳಿಕೆಯನ್ನು ನೀಡಿದ್ದರು.

ಭದ್ರತಾ ಮಂಡಳಿಯಲ್ಲಿ ದ್ವಿತೀಯ ಹೇಳಿಕೆ ನೀಡಿದ ಭಟ್, ಮುಕ್ತ ಚರ್ಚೆಯಲ್ಲಿ ಪಾಕಿಸ್ತಾನದ ವಿಶ್ವಸಂಸ್ಥೆಯ ರಾಯಭಾರಿ ಮುನೀರ್ ಅಕ್ರಂ, ಜಮ್ಮು ಮತ್ತು ಕಾಶ್ಮೀರದ ಬಗ್ಗೆ ನೀಡಿದ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.

‘ಪಾಕಿಸ್ತಾನವು ಸೇರಿದಂತೆ ನೆರೆರಾಷ್ಟ್ರಗಳ ಜೊತೆ ಭಾರತವು ಸೌಹಾರ್ದಯುತ ಬಾಂಧವ್ಯ ಹೊಂದಲು ಭಾರತ ಇಚ್ಛಿಸುತ್ತದೆ. ಯಾವುದೇ ದ್ವಿಪಕ್ಷೀಯ ಮಹತ್ವದ ವಿಷಯಗಳ ಬಗ್ಗೆ ಶಿಮ್ಲಾ ಮತ್ತು ಲಾಹೋರ್ ಒಪ್ಪಂದದ ಅನ್ವಯ ಚರ್ಚೆಗೆ ಭಾರತ ಬದ್ಧತೆ ಹೊಂದಿದೆ. ಯಾವುದೇ ಅರ್ಥಪೂರ್ಣ ಮಾತುಕತೆಯನ್ನು ಭಯೋತ್ಪಾದನೆ, ಹಗೆತನ ಮತ್ತು ಹಿಂಸೆಯಿಲ್ಲದ ವಾತಾವರಣದಲ್ಲಿ ಮಾತ್ರ ನಡೆಸಬಹುದು. ಅಂತಹ ಅನುಕೂಲಕರ ವಾತಾವರಣ ನಿರ್ಮಿಸುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ. ಅಲ್ಲಿಯವರೆಗೆ ಭಾರತವು ಗಡಿಯಾಚೆಗಿನ ಭಯೋತ್ಪಾದನೆಗೆ ಪ್ರತ್ಯುತ್ತರ ನೀಡಲು ದೃಢವಾದ ಮತ್ತು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತದೆ’ಎಂದು ಅವರು ಹೇಳಿದ್ದಾರೆ.

ಭಯೋತ್ಪಾದಕರಿಗೆ ಆಶ್ರಯ ನೀಡುವ, ಸಹಾಯ ಮಾಡುವ ಮತ್ತು ಸಕ್ರಿಯವಾಗಿ ಬೆಂಬಲಿಸುವ ‘ಸ್ಥಾಪಿತ ಇತಿಹಾಸ ಮತ್ತು ನೀತಿಯನ್ನು’ಪಾಕಿಸ್ತಾನ ಹೊಂದಿರುವುದು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ತಿಳಿದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮೂಲದ ಭಟ್ ತಮ್ಮ ಹೇಳಿಕೆಯಲ್ಲಿ ಹೇಳಿದ್ದಾರೆ.

ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿವೆ. ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶವೂ ಇವುಗಳ ಅಡಿಯಲ್ಲಿ ಬರಲಿದೆ ಎಂದು ಭಟ್ ಹೇಳಿದ್ದಾರೆ.

ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಎಲ್ಲ ಪ್ರದೇಶಗಳನ್ನು ಕೂಡಲೇ ತೆರವು ಮಾಡುವಂತೆ ಭಾರತವು ಪಾಕಿಸ್ತಾನಕ್ಕೆ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.