ADVERTISEMENT

ಪಾಕಿಸ್ತಾನದ ಪಂಚತಾರ ಹೋಟೆಲ್‌ಗೆ ಉಗ್ರರ ಲಗ್ಗೆ: ಗುಂಡೇಟಿಗೆ ಕಾವಲುಗಾರ ಸಾವು

ಏಜೆನ್ಸೀಸ್
Published 11 ಮೇ 2019, 20:17 IST
Last Updated 11 ಮೇ 2019, 20:17 IST
   

ಕರಾಚಿ/ ಕ್ವೆಟ್ಟಾ:​ಪಾಕಿಸ್ತಾನದ ಬಂದರು ನಗರ ಗ್ವಾದರ್‌ನ ಪಂಚತಾರ ಹೋಟೆಲ್‌ ಪರ್ಲ್‌ ಕಾಂಟಿನೆಂಟಲ್‌ ಮೇಲೆ ಶನಿವಾರ ಸಂಜೆ ಶಸ್ತ್ರಸಜ್ಜಿತ ಉಗ್ರರ ದಾಳಿ ನಡೆದಿದ್ದು, ಹೋಟೆಲ್‌ನ ಕಾವಲುಗಾರನನ್ನು ಗುಂಡಿಕ್ಕಿ ಕೊಂದಿದ್ದಾರೆ.

‘ಹೋಟೆಲ್‌ ಒಳ ನುಗ್ಗಿರುವ ಮೂರರಿಂದ ನಾಲ್ವರು ಶಸ್ತ್ರಸಜ್ಜಿತ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ’ ಎಂದು ಗ್ವಾದರ್‌ನ ಪೊಲೀಸ್‌ ಅಧಿಕಾರಿ ಅಸ್ಲಾಂ ಬಂಗುಲಜೈ ತಿಳಿಸಿರುವುದಾಗಿ ಪಾಕ್‌ನ ಇಂಗ್ಲಿಷ್‌ ದಿನ ಪತ್ರಿಕೆ ಡಾನ್‌ವರದಿ ಮಾಡಿದೆ.

ಸಂಜೆ 4.50ರ ಹೊತ್ತಿಗೆ ಹೋಟೆಲ್‌ಗೆ ನುಗ್ಗಲು ಯತ್ನಿಸಿದ ಬಂದೂಕುಧಾರಿಗಳನ್ನು ತಡೆಯಲು ಭದ್ರತಾ ಸಿಬ್ಬಂದಿ ಯತ್ನಿಸಿದರು. ಆದರೆ ಅವರ ಮೇಲೆಯೇ ಗುಂಡಿನ ದಾಳಿ ನಡೆಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.

ADVERTISEMENT

‘ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ವಿದೇಶಿ ಹಾಗೂ ಸ್ಥಳೀಯ ಅತಿಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ’ ಎಂದು ಬಲೂಚಿಸ್ತಾನದ ಮಾಹಿತಿ ಸಚಿವ ಜಹೂರ್‌ ಬುಲೆದಿ ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್‌ ಪಡೆ, ಭಯೋತ್ಪಾದಕ ನಿಗ್ರಹ ದಳ, ಮತ್ತು ಸೇನೆಯ ಸಿಬ್ಬಂದಿ ಹೋಟೆಲ್‌ ಬಳಿ ಜಮಾಯಿಸಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರುತ್ತಿವೆ.

ಕಳೆದ ವಾರವಷ್ಟೇಗ್ವಾದರ್‌ ಬಳಿಯ ಒರ್ಮರಾದಲ್ಲಿ ಬಂದೂಕುಧಾರಿಯೊಬ್ಬ ನೌಕಾಪಡೆ, ವಾಯುಪಡೆ ಮತ್ತು ಕರಾವಳಿ ಕಾವಲು ಪಡೆಯ 11 ಸಿಬ್ಬಂದಿ ಸೇರಿದಂತೆ 14 ಜನರನ್ನು ಗುಂಡಿಕ್ಕಿ ಸಾಯಿಸಿದ್ದ.

ಗ್ವಾದರ್‌ ಇರುವ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಜನಾಂಗೀಯ ಮತ್ತು ಪ್ರತ್ಯೇಕತಾವಾದಿ ದಂಗೆಕೋರರು ಇದ್ದಾರೆ. ಅಲ್ಲದೆ ತೆಹ್ರಿಕ್‌–ಎ–ತಾಲಿಬಾನ್‌ ಪಾಕಿಸ್ತಾನ (ಟಿಟಿಪಿ) ಮತ್ತು ಬಲೂಚಿಸ್ತಾನ ಲಿಬರೇಷನ್‌ ಆರ್ಮಿ ಇಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ.

ಮೂವರು ಉಗ್ರರ ಹತ್ಯೆ: ಹೋಟೆಲ್‌ಗೆ ನುಗ್ಗಿದ ಎಲ್ಲಾ ಮೂವರು ಉಗ್ರರನ್ನು ಭದ್ರತಾಪಡೆ ಯೋಧರು ಹೊಡೆದುರುಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.