ADVERTISEMENT

ಟೆಕ್ಸಾಸ್‌ನಲ್ಲಿ ಗುಂಡಿನ ಚಕಮಕಿ: ಪೊಲೀಸ್‌ ಅಧಿಕಾರಿ, ಬಂದೂಕುಧಾರಿ ಸಾವು

ಏಜೆನ್ಸೀಸ್
Published 12 ನವೆಂಬರ್ 2023, 16:57 IST
Last Updated 12 ನವೆಂಬರ್ 2023, 16:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಟೆಕ್ಸಾಸ್‌: ಆಸ್ಟಿನ್‌ ನಗರದ ಮನೆಯೊಂದರಲ್ಲಿ ಒತ್ತೆಯಾಳಾಗಿದ್ದ ಮಹಿಳೆಯೊಬ್ಬರ ರಕ್ಷಣೆಗೆ ಧಾವಿಸಿದ್ದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆದಿದ್ದು ಒಬ್ಬ ಅಧಿಕಾರಿ ಮೃತಪಟ್ಟು, ಮತ್ತೊಬ್ಬ ಅಧಿಕಾರಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಬಂದೂಕುಧಾರಿಯೂ ಸಾವಿಗೀಡಾಗಿರುವುದಾಗಿ ಪೊಲೀಸ್‌ ಇಲಾಖೆ ತಿಳಿಸಿದೆ.   

ರಕ್ಷಣೆಗಾಗಿ ‍ಪೊಲೀಸರಿಗೆ ಕರೆ ಮಾಡಿದ್ದ ಕುಟುಂಬದ ಇಬ್ಬರೂ ಮೃತಪಟ್ಟಿರುವುದಾಗಿ ಪೊಲೀಸ್‌ ಅಧಿಕಾರಿ ರಾಬಿನ್‌ ಹ್ಯಾಂಡರ್ಸನ್‌ ತಿಳಿಸಿದ್ದಾರೆ. 

‘ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ದಾಳಿ ನಡೆಸುತ್ತಿರುವುದಾಗಿ ಮಹಿಳೆಯೊಬ್ಬರು ಶನಿವಾರ ರಾತ್ರಿ ಮೂರು ಗಂಟೆ ಸುಮಾರಿನಲ್ಲಿ ನಮಗೆ ಕರೆ ಮಾಡಿದ್ದರು. ನಾವು ಅಲ್ಲಿಗೆ ಧಾವಿಸುವ ಮೊದಲೇ ಒಬ್ಬ ಪರಾರಿಯಾಗಿದ್ದ. ಮಹಿಳೆಯ ರಕ್ಷಣೆಗಾಗಿ ಮನೆ ಒಳಗೆ ಪ್ರವೇಶಿಸಲು ಯತ್ನಿಸಿದ ನಮ್ಮ ಮೇಲೆ ಗುಂಡಿನ ದಾಳಿ ನಡೆಯಿತು. ಮರು ದಾಳಿ ನಡೆಸದ ನಾವು, ‘ಸ್ವಾಟ್‌‘ ಪಡೆಯನ್ನು ಬರಲು ಹೇಳಿದೆವು. ಮನೆ ಪ್ರವೇಶಿಸಿದ ಸ್ವಾಟ್‌ ಪಡೆಯ ಮೇಲೆ ಗುಂಡಿನ ದಾಳಿ ಮಾಡಲಾಯಿತು. ಸ್ವಾಟ್‌ ಪಡೆಯಿಂದಲೂ ಮರು ದಾಳಿ ನಡೆಯಿತು‘ ಎಂದು ಅವರು ಹೇಳಿದರು. 

ADVERTISEMENT

‘ಗುಂಡಿನ ಕಾಳಗದಲ್ಲಿ ಇಬ್ಬರು ಅಧಿಕಾರಿಗಳು ಗಾಯಗೊಂಡರು. ಬಂದೂಕುಧಾರಿ ಸ್ಥಳದಲ್ಲೇ ಸಾವಿಗೀಡಾದ. ಗಾಯಗೊಂಡ ಅಧಿಕಾರಿಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅದರಲ್ಲಿ ಒಬ್ಬರು ಮೃತಪಟ್ಟರು. ನಂತರ ಮನೆಯಲ್ಲಿ ಶೋಧ ನಡೆಸಿದಾಗ ಇಬ್ಬರು ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು’ ಎಂದು ಹ್ಯಾಂಡರ್ಸನ್‌ ಹೇಳಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.