ADVERTISEMENT

ಥಾಯ್ಲೆಂಡ್‌: ಪ್ರಧಾನಿ ಸ್ಥಾನದಿಂದ ಶಿನೊವಾತ್ರಾ ವಜಾ

ಏಜೆನ್ಸೀಸ್
Published 29 ಆಗಸ್ಟ್ 2025, 15:35 IST
Last Updated 29 ಆಗಸ್ಟ್ 2025, 15:35 IST
ಪೆಟೊಂತಾರ್ನ್‌ ಶಿನೊವಾತ್ರಾ
ಪೆಟೊಂತಾರ್ನ್‌ ಶಿನೊವಾತ್ರಾ   

ಬ್ಯಾಂಕಾಕ್‌: ಥಾಯ್ಲೆಂಡ್‌ನ ಸಾಂವಿಧಾನಿಕ ನ್ಯಾಯಾಲಯವು ಪೆಟೊಂತಾರ್ನ್‌ ಶಿನೊವಾತ್ರಾ ಅವರನ್ನು ಪ್ರಧಾನಮಂತ್ರಿ ಸ್ಥಾನದಿಂದ ಶುಕ್ರವಾರ ವಜಾಗೊಳಿಸಿದೆ.

ಕಾಂಬೊಡಿಯಾ ಸೆನೆಟ್‌ನ ಅಧ್ಯಕ್ಷರಾಗಿರುವ ಹುನ್‌ ಸೆನ್‌ ಅವರೊಂದಿಗಿನ ದೂರವಾಣಿ ಸಂಭಾಷಣೆ ವೇಳೆ ಶಿನೊವಾತ್ರಾ ಅವರು ದೇಶದ ಸಾಂವಿಧಾನಿಕ ನಿಯಮ, ನಿಬಂಧನೆಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ ಎಂದೂ ನ್ಯಾಯಾಲಯ ಹೇಳಿದೆ.

ಈ ಮೂಲಕ ವರ್ಷದ ಹಿಂದಷ್ಟೇ ಪ್ರಧಾನಿ ಹುದ್ದೆಗೇರಿದ್ದ ಪೆಟೊಂತಾರ್ನ್‌ ಶಿನೊವಾತ್ರಾ ಅವರು ಅಧಿಕಾರವಧಿ ಪೂರ್ಣವಾಗುವ ಮೊದಲೇ ಪ್ರಧಾನಮಂತ್ರಿ ಸ್ಥಾನದಿಂದ ಕೆಳಗಿಳಿದಂತಾಗಿದೆ. 

ADVERTISEMENT

ಹುನ್‌ ಸೆನ್‌ ಜತೆಗಿನ ಶಿನೊವಾತ್ರಾ ಅವರ ದೂರವಾಣಿ ಸಂಭಾಷಣೆ ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಜುಲೈ 1ರಂದು ನ್ಯಾಯಾಲಯ ಸಮ್ಮತಿಸಿತ್ತು. ಅಂದೇ ಶಿನೊವಾತ್ರಾ ಅವರನ್ನು ಅಮಾನತುಗೊಳಿಸಿ, ಉಪ ಪ್ರಧಾನಿ ಫುಮ್ತಾಮ್‌ ಅವರಿಗೆ ಹಂಗಾಮಿ ಅಧಿಕಾರ ನೀಡಲಾಗಿತ್ತು. 

ಇದೀಗ ಪ್ರಧಾನಿ ಸ್ಥಾನದಿಂದ ಶಿನೊವಾತ್ರಾ ಕೆಳಗಿಳಿದರೂ ಹೊಸ ಪ್ರಧಾನಿ ಆಯ್ಕೆಗೆ ಸಂಸತ್ತು ಒಪ್ಪಿಗೆ ನೀಡುವವರೆಗೆ ಫುಮ್ತಾಮ್‌ ನೇತೃತ್ವದ ಸಂ‍ಪುಟವು ಹಂಗಾಮಿ ಸರ್ಕಾರವಾಗಿ ಅಧಿಕಾರದಲ್ಲಿ ಇರುವ ನಿರೀಕ್ಷೆ ಇದೆ. ಇದೇ ಸಂಪುಟವು ಸಂಸತ್ತನ್ನು ವಿಸರ್ಜಿಸಿ ಹೊಸದಾಗಿ ಚುನಾವಣೆ ನಡೆಸಲು ಅವಕಾಶವನ್ನೂ ನೀಡಬಹುದಾಗಿದೆ.

ಹುನ್‌ ಸೆನ್‌ ಅವರೊಂದಿಗೆ ದೂರವಾಣಿ ಸಂಭಾಷಣೆಯಲ್ಲಿ ಪೆಟೊಂತಾರ್ನ್‌ ಶಿನೊವಾತ್ರಾ ಬಹಳ ಆತ್ಮೀಯವಾಗಿ ಮಾತನಾಡಿದ್ದರು. ಅಲ್ಲದೇ, ಅವರೊಂದಿಗೆ ರಾಷ್ಟ್ರೀಯ ಭದ್ರತೆ ಕುರಿತಾದ ವಿಚಾರಗಳನ್ನು ಚರ್ಚಿಸುವುದು ಮಾತ್ರವಲ್ಲದೆ ಥಾಯ್ಲೆಂಡ್‌ನ ಸೇನಾ ಜನರಲ್‌ ಬಗೆಗಿನ ಅಸಮಾಧಾನದ ಬಗ್ಗೆಯೂ ಹೇಳಿಕೊಂಡಿದ್ದರು. ಈ ಸಂಭಾಷಣೆಯ ಆಡಿಯೊ ಸೋರಿಕೆಯಾಗುತ್ತಿದ್ದಂತೆಯೇ ಪೆಟೊಂತಾರ್ನ್‌ ಶಿನೊವಾತ್ರಾ ಅವರ ರಾಜೀನಾಮೆಗೂ ಒತ್ತಡ ಹೆಚ್ಚಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.