ಕಾಬೂಲ್: ತಂದೆ ತಾಲಿಬಾನ್ ಪ್ರತಿರೋಧ ಪಡೆಯ ಸದಸ್ಯನಾಗಿದ್ದಾನೆ ಎಂಬ ಶಂಕೆ ಮೇರೆಗೆ ತಾಲಿಬಾನ್ ಉಗ್ರರು ಮಗುವನ್ನೇ ಕೊಂದಿರುವ ಘಟನೆ ಅಫ್ಗಾನಿಸ್ತಾನದ ತಖರ್ ಪ್ರಾಂತ್ಯದಿಂದ ವರದಿಯಾಗಿದೆ.
ಪಂಜ್‌ಶಿರ್ ಅಬ್ಸರ್ವರ್ ಎಂಬ ಸ್ವತಂತ್ರ ಮಾಧ್ಯಮ ಸಂಸ್ಥೆ ಈ ಬಗ್ಗೆ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ಗಳ ಕ್ರೂರ ನಡೆಗೆ ಮತ್ತೊಂದು ಉದಾಹರಣೆ ಸಿಕ್ಕಿದೆ.
‘ಅಫ್ಗಾನಿಸ್ತಾನದ ತಖರ್ ಪ್ರಾಂತ್ಯದಲ್ಲಿ ತಂದೆ ಅಫ್ಗಾನ್ ಪ್ರತಿರೋಧ ಪಡೆಗಳ ಭಾಗವಾಗಿದ್ದಾನೆ ಎಂಬ ಅನುಮಾನದ ಮೇಲೆ ತಾಲಿಬಾನ್, ಮಗುವನ್ನು ಗಲ್ಲಿಗೇರಿಸಿದೆ’ಎಂದು ಪಂಜ್‌ಶಿರ್ ಅಬ್ಸರ್ವರ್ ಟ್ವೀಟ್ ಮಾಡಿದೆ,
ಮಗುವನ್ನು ಕ್ರೂರವಾಗಿ ಕೊಲ್ಲುವ ಮೂಲಕ ತಮ್ಮ ವಿರುದ್ಧ ಧ್ವನಿ ಎತ್ತಿದ ಅಫ್ಗಾನಿಸ್ತಾನಿಯರ ಮೇಲೆ ತಾಲಿಬಾನ್ ನಡೆಸುತ್ತಿರುವ ದೌರ್ಜನ್ಯಕ್ಕೆ ಸಾಕ್ಷಿಯಾಗಿದೆ.
ಆಗಸ್ಟ್ 15 ರಂದು ದೇಶವನ್ನು ವಶಪಡಿಸಿಕೊಂಡ ತಾಲಿಬಾನ್, ಯಾವುದೇ ಸೇಡು ತೀರಿಸಿಕೊಳ್ಳುವ ಕೆಲಸಕ್ಕೆ ಮುಂದಾಗುವುದಿಲ್ಲ ಎಂದು ಭರವಸೆ ನೀಡಿತ್ತು.
ಆದರೆ, ಪಂಜ್‌ಶಿರ್‌ದಲ್ಲಿ ಪ್ರಾಂತ್ಯದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ನಾಗರಿಕರ ಮೇಲೆ ಗುಂಡು ಹಾರಿಸಿದ ಹಲವು ವರದಿಗಳಿವೆ. ಕಳೆದ ವಾರ ಪ್ರತಿರೋಧ ಪಡೆ ಮತ್ತು ಹಿಂದಿನ ಸರ್ಕಾರದ ಭಾಗವಾಗಿದ್ದ ಹಲವರು ದೇಶದಾದ್ಯಂತ ಸೇಡು ಹತ್ಯೆಗೆ ಗುರಿಯಾಗಿದ್ದಾರೆ ಎಂದು ಎಬಿಸಿ ವರದಿ ಮಾಡಿದೆ.
‘ಐದು ಬಾರಿ ಅವರು ನನ್ನ ಕುಟುಂಬದ ಮೇಲೆ ದಾಳಿ ಮಾಡಿದರು’ಎಂದು ಪಂಜಶಿರ್‌ನ ಯುವಕನೊಬ್ಬ ಎಬಿಸಿಗೆ ತಿಳಿಸಿದ್ದಾನೆ.
‘ತಾಲಿಬಾನಿಗಳು ನಮ್ಮ ಮೊಬೈಲ್‌ಗಳನ್ನು ತೆಗೆದುಕೊಂಡು ಪರಿಶೀಲಿಸುತ್ತಾರೆ. ಅದರಲ್ಲಿ ಅನುಮಾನಾಸ್ಪದ ಚಿತ್ರ ಅಥವಾ ಯಾವುದೇ ಮಾಹಿತಿ ಕಂಡುಬಂದರೆ ಆ ವ್ಯಕ್ತಿಯನ್ನು ಕೊಲ್ಲುತ್ತಾರೆ’ಎಂದು ಮತ್ತೊಬ್ಬ ನಾಗರಿಕ ಹೇಳಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.