ADVERTISEMENT

ಉಕ್ರೇನ್– ರಷ್ಯಾ ನಡುವೆ ಬೆಲರೂಸ್‌ನಲ್ಲಿ ಎರಡನೇ ಸುತ್ತಿನ ಮಾತುಕತೆ ಆರಂಭ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮಾರ್ಚ್ 2022, 16:13 IST
Last Updated 3 ಮಾರ್ಚ್ 2022, 16:13 IST
   

ಕೀವ್: ಬೆಲರೂಸ್‌ನಲ್ಲಿ ಉಕ್ರೇನ್ ಮತ್ತು ರಷ್ಯಾ ನಡುವಿನ ಎರಡನೇ ಸುತ್ತಿನ ಮಾತುಕತೆ ಆರಂಭವಾಗಿದೆ ಎಂದು ರಿಪಬ್ಲಿಕ್ ಆಫ್ ಬೆಲರೂಸ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಆರಂಭಿಸಿ ಇಂದಿಗೆ ಎಂಟು ದಿನಗಳಾಗಿದ್ದು, ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುತ್ತಿದೆ.

ನಾವು ಮಾತುಕತೆಗೆ ಸಿದ್ಧವಿದ್ದೇವೆ. ಆದರೆ, ಉಕ್ರೇನ್ ಪ್ರದೇಶಗಳನ್ನು ನಾಶಪಡಿಸುವುದನ್ನು ಮುಂದುವರಿಸುತ್ತೇವೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಬೆಳಗ್ಗೆ ಹೇಳಿದ್ದರು.

ADVERTISEMENT

ರಷ್ಯಾದ ನಿಯೋಗವು ಉಕ್ರೇನ್ ಪ್ರತಿನಿಧಿಗಳಿಗೆ ರಷ್ಯಾದ ಬೇಡಿಕೆಗಳ ಪಟ್ಟಿಯನ್ನು ನೀಡಿದೆ. ಈ ಬಗ್ಗೆ ಕೀವ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಹೇಳಿದ್ದರು.

ಈ ಮಧ್ಯೆ, ಉಕ್ರೇನ್‌ನಲ್ಲಿ ಯುದ್ಧಾಪರಾಧಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿ ತಕ್ಷಣ ತನಿಖೆ ಆರಂಭಿಸುವುದಾಗಿ ಅಂತರರಾಷ್ಟ್ರೀಯ ಕ್ರಿಮಿನಲ್‌‌ ಕೋರ್ಟ್‌(ಐಸಿಜೆ)ನ ಮುಖ್ಯ ಪ್ರಾಸಿಕ್ಯೂಟರ್‌ ಕರೀಂ ಖಾನ್‌ ತಿಳಿಸಿದ್ದಾರೆ.

ಯೂರೋಪ್‌ ಒಕ್ಕೂಟ ರಾಷ್ಟ್ರಗಳು ಸೇರಿದಂತೆ ಆಸ್ಟ್ರೇಲಿಯಾ, ಬ್ರಿಟನ್‌, ಕೆನಡಾ, ನ್ಯೂಜಿಲೆಂಡ್‌, ಸ್ವಿಟ್ಜರ್ಲೆಂಡ್‌ ಮತ್ತು ಹಲವು ಲ್ಯಾಟಿನ್‌ ಅಮೆರಿಕ ರಾಷ್ಟ್ರಗಳು ಸೇರಿ ಒಟ್ಟು 39 ರಾಷ್ಟ್ರಗಳ ಬೆಂಬಲವನ್ನು ಕರೀಂ ಖಾನ್‌ ಕಚೇರಿ ಸ್ವೀಕರಿಸಿದೆ.

ಇತ್ತ, ಇಂದು ಹಾರ್ಕಿವ್‌ನಲ್ಲಿ ರಷ್ಯಾದ ಶೆಲ್ ದಾಳಿಯಿಂದಾಗಿ 34 ನಾಗರಿಕರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.