ADVERTISEMENT

ಮ್ಯಾನ್ಮಾರ್‌ ಮಹಿಳೆಯರ ಬಲವಂತದ ಮದುವೆ!

ಚೀನಾಕ್ಕೆ ಮಾನವ ಕಳ್ಳಸಾಗಣೆ: ಅಧ್ಯಯನ ವರದಿಯಲ್ಲಿ ಬಹಿರಂಗ

ಏಜೆನ್ಸೀಸ್
Published 7 ಡಿಸೆಂಬರ್ 2018, 14:26 IST
Last Updated 7 ಡಿಸೆಂಬರ್ 2018, 14:26 IST
   

ಬ್ಯಾಂಕಾಕ್‌: ಉತ್ತರ ಮ್ಯಾನ್ಮಾರ್‌ನ ಸಾವಿರಾರು ಮಹಿಳೆಯರನ್ನು ಮಾನವ ಕಳ್ಳಸಾಗಣೆ ಮೂಲಕ ಚೀನಾಕ್ಕೆ ಕರೆದೊಯ್ದು ಅಲ್ಲಿನ ನಿವಾಸಿಗಳಿಗೆ ಬಲವಂತವಾಗಿ ಮದುವೆ ಮಾಡಿಕೊಡಲಾಗುತ್ತಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಚೀನಾದಲ್ಲಿ ಒಂದೇ ಮಗು ನೀತಿ ದಶಕಗಳಿಂದ ಜಾರಿಯಲ್ಲಿದ್ದು, ಅಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಮತ್ತು ಪುರುಷರ ಜನಸಂಖ್ಯೆಯ ಅನುಪಾತದಲ್ಲಿ ವ್ಯತ್ಯಾಸವಿದೆ. ಈ ಕಾರಣಕ್ಕೆ ಇಂತಹ ಪ್ರದೇಶಗಳಲ್ಲಿ ವಧುಗಳ ಬೇಡಿಕೆ ಹೆಚ್ಚಾಗಿದೆ.

ಕಾಂಬೋಡಿಯಾ, ಮ್ಯಾನ್ಮಾರ್‌, ಲಾವೋಸ್ ಮತ್ತು ವಿಯೆಟ್ನಾಂನಿಂದ ಪ್ರತಿವರ್ಷ ಸಾವಿರಾರು ಬಡ ಮಹಿಳೆಯರನ್ನು ಮದುವೆಯ ಹೆಸರಿನಲ್ಲಿ ಚೀನಾದವರಿಗೆ ಮಾರಾಟ ಮಾಡಲಾಗುತ್ತದೆ ಎಂದು ಅಮೆರಿಕದ ಜಾನ್ಸ್‌ ಹಾಪ್‌ಕಿನ್ಸ್‌ ಬ್ಲೂಮ್‌ಬರ್ಗ್‌ ಸ್ಕೂಲ್‌ ಆಫ್‌ ಪಬ್ಲಿಕ್‌ ಹೆಲ್ತ್ ಸಂಸ್ಥೆ ಹೇಳಿದೆ.

ADVERTISEMENT

ಈ ಕುರಿತು ಅಧ್ಯಯನ ನಡೆಸಿರುವ ಸಂಸ್ಥೆ, ‘ಮ್ಯಾನ್ಮಾರ್‌ನ ಕಚಿನ್‌ ಮತ್ತು ಉತ್ತರ ಶಾನ್‌ ರಾಜ್ಯದಿಂದ 7,500 ಮಹಿಳೆಯರನ್ನು ಚೀನಾದ ಪ್ರಜೆಗಳಿಗೆ ಬಲವಂತವಾಗಿ ಮದುವೆ ಮಾಡಿಕೊಡಲಾಗಿದೆ’ ಎಂದಿದೆ.

ಚೀನಾದಿಂದ ತಪ್ಪಿಸಿಕೊಂಡು ಮ್ಯಾನ್ಮಾರ್‌ಗೆ ಮರಳಿರುವ ಮತ್ತು ಚೀನಾದಲ್ಲೇ ನೆಲೆಸಿರುವ ಮ್ಯಾನ್ಮಾರ್‌ನ ಮಹಿಳೆಯರನ್ನು ಮಾತನಾಡಿಸಿ ಸಂಸ್ಥೆಯು ಅಧ್ಯಯನ ವರದಿ ಸಿದ್ಧಪಡಿಸಿದೆ.

ಮಹಿಳೆಯರಲ್ಲಿ ಹೆಚ್ಚಿನವರು ತಾವು ಮಾನವ ಕಳ್ಳಸಾಗಣೆ ಮೂಲಕ ಚೀನಾ ತಲುಪಿರುವುದಾಗಿ ಹೇಳಿಕೊಂಡಿದ್ದಾರೆ. ಇವರಲ್ಲಿ ಹಲವರು ಮಕ್ಕಳನ್ನೂ ಹೊಂದಿದ್ದಾರೆ.

ಸಂಘರ್ಷ, ಬಡತನ ಮೊದಲಾದ ಕಾರಣಗಳಿಂದಾಗಿ ಇಂತಹ ಮದುವೆಗಳು ನಡೆಯುತ್ತಿವೆ ಎಂದು ಅಧ್ಯಯನ ವರದಿಯ ಲೇಖಕ ಡಬ್ಲ್ಯು. ಕೋರ್ಟ್‌ಲ್ಯಾಂಡ್‌ ರಾಬಿನ್‌ಸನ್‌ ಹೇಳಿದ್ದಾರೆ.

ದಲ್ಲಾಳಿಗಳ ಮೂಲಕ ಇಂತಹ ಮದುವೆಗಳು ನಡೆಯುತ್ತಿದ್ದು, ಇವರು ವಧುಗಳಿಗೆ ಬೆಲೆ ನಿಗದಿ ಮಾಡುತ್ತಾರೆ. ಮಹಿಳೆಯರನ್ನು ಅವರಿಗಿಂತಲೂ ಅಧಿಕ ವಯಸ್ಸಿನ, ಅನಾರೋಗ್ಯಪೀಡಿತ ಮತ್ತು ಅಂಗವಿಕಲ ಪುರುಷರ ಜೊತೆ ಮದುವೆ ಮಾಡಿಕೊಡಲಾಗುತ್ತಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.