ಪೆಶಾವರ: ಪಾಕಿಸ್ತಾನದ ಪ್ರಕ್ಷುಬ್ಧ ನೈರುತ್ಯ ಭಾಗದಲ್ಲಿ ಶಂಕಿತ ಡ್ರೋನ್ ದಾಳಿಯಿಂದ ನಾಲ್ವರು ಮಕ್ಕಳು ಸಾವಿಗೀಡಾಗಿ, ಐವರು ಗಾಯಗೊಂಡಿದ್ದಾರೆ. ಘಟನೆ ನಂತರ ಆಕ್ರೋಶಗೊಂಡ ಸಾವಿರಾರು ಜನರು ಮುಖ್ಯ ರಸ್ತೆಯಲ್ಲೇ ಮಕ್ಕಳ ಮೃತದೇಹಗಳನ್ನು ಇಟ್ಟು ತಮಗೆ ನ್ಯಾಯ ಒದಗಿಸುವಂತೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಪಾಕಿಸ್ತಾನಿ ತಾಲಿಬಾನ್‌ಗಳ ಪ್ರಬಲ ಹಿಡಿತದಲ್ಲಿರುವ ಮೀರ್ ಅಲಿ ಪ್ರದೇಶದಲ್ಲಿ ಸೋಮವಾರ ಡ್ರೋನ್ ದಾಳಿ ನಡೆದಿದ್ದು, ಇದರ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಘಟನೆ ಬಗ್ಗೆ ಪಾಕಿಸ್ತಾನ ಸೇನೆಯೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
‘ನಾವು ಯಾರ ಮೇಲೂ ಆಪಾದನೆ ಮಾಡಲ್ಲ. ನಮಗೆ ನ್ಯಾಯ ಬೇಕು. ಅಮಾಯಕ ಮಕ್ಕಳನ್ನು ಕೊಂದಿದ್ದು ಯಾರು ಎಂದು ಸರ್ಕಾರವೇ ಹೇಳಬೇಕು. ಅಲ್ಲಿಯವರೆಗೂ ಮೃತದೇಹಗಳನ್ನು ಸಂಸ್ಕಾರ ಮಾಡುವುದಿಲ್ಲ’ ಎಂದು ಸ್ಥಳೀಯ ಬುಡಕಟ್ಟು ಜನಾಂಗದ ನಾಯಕ ಮುಫ್ತಿ ಬೈತುಲ್ಲಾಹ್ ಆಗ್ರಹಿಸಿದ್ದಾರೆ.
ಖೈಬರ್ ಪಖ್ತುಂಕ್ವಾ ಪ್ರದೇಶದ ಈ ಭಾಗ ತೆಹ್ರೀಕ್–ಎ– ತಾಲಿಬಾನ್ (ಟಿಟಿಪಿ) ಸಂಘಟನೆಯ ಹಿಡಿತದಲ್ಲಿದೆ. ಅಫ್ಗನ್ ತಾಲಿಬಾನ್‌ನಿಂದ ಬೇರ್ಪಟ್ಟಿರುವ ಈ ಪ್ರತ್ಯೇಕ ಗುಂಪು ಆಗಾಗ್ಗೆ ಸೇನಾ ಪಡೆಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತದೆ. ಪಾಕಿಸ್ತಾನಿ ತಾಲಿಬಾನ್‌ಗಳ ಮೇಲೆ ಸೇನೆಯು ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭದಲ್ಲೇ ಡ್ರೋನ್ ದಾಳಿ ಆಗಿದೆ.
ಅಫ್ಗಾನಿಸ್ತಾನದ ಗಡಿ ಬಳಿಯ ಮಿರ್ ಅಲಿ ಮತ್ತು ಇತರೆ ಜಿಲ್ಲೆಗಳು ಪಾಕಿಸ್ತಾನಿ ತಾಲಿಬಾನ್‌ಗಳು ಮತ್ತು ಇತರೆ ಉಗ್ರ ಸಂಘಟನೆಗಳ ಬಹುಕಾಲದ ನೆಲೆಯಾಗಿವೆ. ಈ ಭಾಗದಲ್ಲಿ ಟಿಟಿಪಿ ಇತ್ತೀಚಿನ ದಿನಗಳಲ್ಲಿ ಹಲವು ದಾಳಿಗಳನ್ನು ಮಾಡಿದೆ.
ಘಟನೆಯನ್ನು ಖಂಡಿಸಿರುವ ಪಾಕಿಸ್ತಾನದ ಪ್ರಾದೇಶಿಕ ಸಚಿವ ನಾಯಕ್ ಮುಹಮ್ಮದ್ ದವಾರ್ ‘ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.