ಟಿಕ್ ಟಾಕ್ ಹಾಗೂ ಡೊನಾಲ್ಡ್ ಟ್ರಂಪ್
– ರಾಯಿಟರ್ಸ್ ಚಿತ್ರ
ಹೂಸ್ಟನ್: ಶಾರ್ಟ್ ವಿಡಿಯೊ ಆ್ಯಪ್ ಟಿಕ್ ಟಾಕ್ ಮೇಲೆ ಹೇರಿದ್ದ ನಿಷೇಧವನ್ನು ಹಿಂಪಡೆಯುವುದಾಗಿ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು, ಅಮೆರಿಕದಲ್ಲಿ ಟಿಕ್‌ಟಾಕ್ ಕಾರ್ಯ ಪುನರಾರಂಭಗೊಂಡಿದೆ.
ಇಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಟ್ರಂಪ್, ಅಧಿಕಾರ ವಹಿಸಿಕೊಂಡ ಬಳಿಕ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಅಮೆರಿಕದಲ್ಲಿ ಸುಮಾರು 170 ಮಿಲಿಯನ್ ಮಂದಿ ಟಿಕ್‌ಟಾಕ್ ಬಳಕೆ ಮಾಡುತ್ತಿದ್ದಾರೆ.
‘ಟಿಕ್ ಟಾಕ್ ಮತ್ತೆ ಬಂದಿದೆ. ನಿಮಗೆ ಗೊತ್ತಿರಬಹುದು, ನಾನೂ ಟಿಕ್‌ಟಾಕ್‌ನಲ್ಲಿ ಕೆಲವು ವಿಡಿಯೊಗಳನ್ನು ಮಾಡಿದ್ದೇನೆ. ಟಿಕ್‌ಟಾಕ್ ನಮಗೆ ಮತಗಳನ್ನು ತಂದುಕೊಟ್ಟಿದೆ. ನನಗೆ ಟಿಕ್ ಟಾಕ್ ಇಷ್ಟ’ ಎಂದು ಟ್ರಂಪ್ ಹೇಳಿದ್ದಾರೆ.
‘ನಾವು ಹಲವು ಮಂದಿಯ ಉದ್ಯೋಗ ಉಳಿಸಬೇಕಿದೆ. ನಮ್ಮ ಉದ್ಯಮವನ್ನು ಚೀನಾಗೆ ಬಿಟ್ಟುಕೊಡಲು ನಾವು ಸಿದ್ಧರಿಲ್ಲ. ನಮ್ಮ ಉದ್ಯಮವನ್ನು ಬೇರೆಯವರಿಗೆ ಬಿಟ್ಟು ಕೊಡಲೂ ನಾವು ಇಚ್ಛಿಸುವುದಿಲ್ಲ’ ಎಂದು ಟ್ರಂಪ್ ನುಡಿದಿದ್ದಾರೆ.
‘ಜಂಟಿ ಉದ್ಯಮವೇ ಟಿಕ್ ಟಾಕ್ ಸಮಸ್ಯೆಗೆ ಪರಿಹಾರ. ಶೇ 50ರಷ್ಟು ಅಮೆರಿಕದ ಪಾಲು ಇರಬೇಕು ಎನ್ನುವ ನನ್ನ ಮಾತಿಗೆ ಒಪ್ಪಿಕೊಂಡರು. ನಾನು ನಿಷೇಧ ಹಿಂಪಡೆವ ಭರವಸೆ ನೀಡಿದೆ’ ಎಂದು ಟ್ರಂಪ್ ಹೇಳಿದ್ದಾರೆ.
‘ನಾವು ಯಾವುದೇ ಬಂಡವಾಳ ಹೂಡುತ್ತಿಲ್ಲ. ನಾವು ಕೆಲವೊಂದು ಒಪ್ಪಿಗೆಗಳನ್ನು ನೋಡುತ್ತಿದ್ದೇವೆ. ಅದು ಇಲ್ಲದೇ ಇದ್ದರೆ (ಒಪ್ಪಿಗೆ) ಅವರು ಏನೂ ಮಾಡಲು ಆಗುವುದಿಲ್ಲ’ ಎಂದು ಹೇಳಿದ್ದಾರೆ.
ಟ್ರಂಪ್ ಅವರ ನಿರ್ಧಾರಕ್ಕೆ ಟಿಕ್ ಟಾಕ್ ಧನ್ಯವಾದ ಸಲ್ಲಿಸಿದೆ. ಆ್ಯಪ್ ಸೇವೆಗಳು ಪುನರಾರಂಭಿಸಲು ಸ್ಪಷ್ಟತೆ ಮತ್ತು ಭರವಸೆ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿದೆ.
ಚೀನಾ ಮೂಲದ ಬೈಟೆ ಡ್ಯಾನ್ಸ್ ಮಾಲೀಕತ್ವದ ಟಿಕ್ ಟಾಕ್ ಅನ್ನು ಜನವರಿ 19ರಿಂದ ಅನ್ವಯವಾಗುವಂತೆ ನಿಷೇಧಿಸುವ ನಿರ್ಧಾರಕ್ಕೆ ಅಧ್ಯಕ್ಷ ಜೋ ಬೈಡನ್ ಅವರು ಕಳೆದ ಏಪ್ರಿಲ್‌ನಲ್ಲಿ ಸಹಿ ಹಾಕಿದ್ದರು.
ರಾಷ್ಟ್ರೀಯ ಭದ್ರತೆಗೆ ಧಕ್ಕೆ ಆರೋಪದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.
(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿದ ಬರೆದ ಸುದ್ದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.