ಅಭಿಷೇಕ್ ಬ್ಯಾನರ್ಜಿ
– ಪಿಟಿಐ ಚಿತ್ರ
ಸೋಲ್(ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಸೋಲ್‌ನಲ್ಲಿ ಚಿಂತಕರ ಚಾವಡಿ ಉದ್ದೇಶಿಸಿ ಮಾತನಾಡಿದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಮತ್ತು ಸರ್ವಪಕ್ಷ ನಿಯೋಗದ ಸದಸ್ಯ ಅಭಿಷೇಕ್ ಬ್ಯಾನರ್ಜಿ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ತೀಕ್ಷ್ಣವಾದ ಟೀಕೆಗೈದಿದ್ದಾರೆ.
ಪಾಕಿಸ್ತಾನಕ್ಕೆ ನೀಡುವ ಯಾವುದೇ ಬೆಂಬಲವು ಭಯೋತ್ಪಾದಕ ಸಂಘಟನೆಗೆ ನೀಡಿದ ಬೆಂಬಲ ಎಂದು ನಾವು ಜಗತ್ತಿಗೆ ಹೇಳಲು ಬಯಸುತ್ತೇವೆ. ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯು ಇನ್ನು ಮುಂದೆ ಭಾರತದ ರಾಷ್ಟ್ರೀಯ ಭದ್ರತೆಯ ವಿಷಯವಲ್ಲ. ಅದು ಈಗ ಜಾಗತಿಕ ವಿಷಯವಾಗಿದೆ. ಪಾಕಿಸ್ತಾನವು ತಮ್ಮ ನೆಲದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ. ಭಾರತ ಮತ್ತು ಪಾಕಿಸ್ತಾನದ ಆರ್ಥಿಕತೆಗಳ ಪಥವನ್ನು ನೀವು ನೋಡಿದರೆ, ನರಕ ಮತ್ತು ಸ್ವರ್ಗದಷ್ಟು ವ್ಯತ್ಯಾಸವಿದೆ ಎಂದಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ದಾಳಿಯು ಭಾರತದ ಆರ್ಥಿಕತೆಯು ಅಭಿವೃದ್ಧಿ ಹೊಂದುವುದನ್ನು ಅವರು ಬಯಸುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಜೆಡಿಯು ಸಂಸದ ಸಂಜಯ್ ಝಾ ನೇತೃತ್ವದ ಬಹು-ಪಕ್ಷ ನಿಯೋಗದ ಭಾಗವಾಗಿರುವ ಅಭಿಷೇಕ್ ಬ್ಯಾನರ್ಜಿ, ಪಹಲ್ಗಾಮ್ ದಾಳಿಯ ನಂತರ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುವ ಭಾರತದ ಸಂಕಲ್ಪವನ್ನು ಒತ್ತಿ ಹೇಳಿದ್ದಾರೆ.
ಇಂದು ಬೆಳಿಗ್ಗೆ ಸಂಜಯ್ ಕುಮಾರ್ ಝಾ ಅವರು ಕೊರಿಯಾ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಕೊರಿಯಾ-ಭಾರತ ಸಂಸದೀಯ ಸ್ನೇಹ ಗುಂಪಿನ ಅಧ್ಯಕ್ಷ ಯುನ್ ಹೋ-ಜಂಗ್ ಅವರನ್ನು ಭೇಟಿಯಾದರು.
ಭಾನುವಾರ, ಝಾ ನೇತೃತ್ವದ ನಿಯೋಗವು ಸೋಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ದಕ್ಷಿಣ ಕೊರಿಯಾದ ಭಾರತದ ರಾಯಭಾರಿ ಅಮಿತ್ ಕುಮಾರ್ ಅವರನ್ನು ಭೇಟಿ ಮಾಡಿತು.
ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಪ್ರತಿಕ್ರಿಯೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧದ ಅದರ ಹೋರಾಟದ ಬಗ್ಗೆ ಅಂತರರಾಷ್ಟ್ರೀಯ ಪಾಲುದಾರರಿಗೆ ವಿವರಿಸುವ ಗುರಿಯನ್ನು ನಿಯೋಗ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.