ADVERTISEMENT

ಬ್ರಿಟನ್: ಕೋವಿಡ್ ನಿರ್ಬಂಧ ಕಠಿಣ

ನೈಟ್‌ ಕ್ಲಬ್‌ ಬಂದ್, ರೆಸ್ಟೋರೆಂಟ್‌ಗಳಲ್ಲಿ ಜನರ ಮಿತಿ

ಪಿಟಿಐ
Published 26 ಡಿಸೆಂಬರ್ 2021, 18:21 IST
Last Updated 26 ಡಿಸೆಂಬರ್ 2021, 18:21 IST
ಕೋವಿಡ್ ನಿರ್ಬಂಧ ಕ್ರಮಗಳನ್ನು ವಿರೋಧಿಸಿ ಬ್ರುಸೆಲ್ಸ್‌ನಲ್ಲಿ ಜನರು ಭಾನುವಾರ ಪ್ರತಿಭಟನೆ ನಡೆಸಿದರು–ಎಎಫ್‌ಪಿ ಚಿತ್ರ
ಕೋವಿಡ್ ನಿರ್ಬಂಧ ಕ್ರಮಗಳನ್ನು ವಿರೋಧಿಸಿ ಬ್ರುಸೆಲ್ಸ್‌ನಲ್ಲಿ ಜನರು ಭಾನುವಾರ ಪ್ರತಿಭಟನೆ ನಡೆಸಿದರು–ಎಎಫ್‌ಪಿ ಚಿತ್ರ   

ಲಂಡನ್: ಕ್ರಿಸ್‌ಮಸ್ ಆಚರಣೆ ಮುಗಿಯುತ್ತಿದ್ದಂತೆಯೇ ಬ್ರಿಟನ್‌ನಾದ್ಯಂತ ಭಾನುವಾರದಿಂದ ಕಠಿಣ ಕೋವಿಡ್ ನಿಯಮಗಳನ್ನು ಜಾರಿಗೆ ತರಲಾಗಿದೆ. ಹೆಚ್ಚುತ್ತಿರುವ ಕೋವಿಡ್ ಸೋಂಕು ನಿಯಂತ್ರಿಸಲು ವೇಲ್ಸ್, ಸ್ಕಾಟ್ಲೆಂಡ್, ಉತ್ತರ ಐರ್ಲೆಂಡ್ ಭಾಗಗಳಲ್ಲೂ ನಿಯಮಗಳನ್ನು ಬಿಗಿಗೊಳಿಸಲಾಗಿದೆ.

ಪ್ರಧಾನಿ ಬೋರಿಸ್ ಜಾನ್ಸನ್ ಅವರು, ಹೊಸ ದತ್ತಾಂಶಗಳು ಹಾಗೂ ತಜ್ಞರ ಸಲಹೆಗಳನ್ನು ಆಧರಿಸಿ ಸೋಮವಾರ ಇನ್ನಷ್ಟು ಬಿಗಿ ಕ್ರಮಗಳನ್ನು ಜಾರಿಗೊಳಿಸುವ ಸಾಧ್ಯತೆಯಿದೆ. ಬ್ರಿಟನ್‌ನಲ್ಲಿ ‘ಪ್ಲಾನ್ ಬಿ’ ಜಾರಿಯಲ್ಲಿದ್ದು, ಇದರ ಪ್ರಕಾರ, ಮನೆಯಿಂದ ಕೆಲಸ ಮಾಡುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ದೊಡ್ಡ ಸಮಾರಂಭಗಳಲ್ಲಿ ಭಾಗಿಯಾಗುವವರು ಕೋವಿಡ್ ಲಸಿಕೆ ಪಡೆದ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯ.

ವೇಲ್ಸ್‌ನಲ್ಲಿ, ಭಾನುವಾರದಿಂದ ನೈಟ್‌ಕ್ಲಬ್‌ಗಳನ್ನು ಬಂದ್ ಮಾಡಲಾಗಿದೆ. ಪಬ್‌, ರೆಸ್ಟೋರೆಂಟ್‌ಗಳಿಗೆ ಗರಿಷ್ಠ 6 ಜನರು ಮಾತ್ರ ಹೋಗಬಹುದು. ಒಳಾಂಗಣ ಕಾರ್ಯಕ್ರಮಗಳಲ್ಲಿ ಗರಿಷ್ಠ 30 ಮಂದಿ ಸೇರಲು ಮಾತ್ರ ಅವಕಾಶವಿದೆ. ಹೊರಾಂಗಣ ಕಾರ್ಯಕ್ರಮಗಳಿಗೆ 50 ಜನರ ಮಿತಿ ವಿಧಿಸಲಾಗಿದೆ.

ADVERTISEMENT

ಸ್ಕಾಟ್ಲೆಂಡ್‌ನಲ್ಲಿ, ದೊಡ್ಡ ಕಾರ್ಯಕ್ರಮಗಳಲ್ಲಿ ಜನರು ಒಂದು ಮೀಟರ್ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಒಳಾಂಗಣ ಕಾರ್ಯಕ್ರಮಗಳಲ್ಲಿ 200, ಹೊರಾಂಗಣ ಕಾರ್ಯಕ್ರಮಗಳಲ್ಲಿ 500ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಸೋಮವಾರದಿಂದ ಮೂರು ವಾರಗಳ ಕಾಲ ನೈಟ್‌ಕ್ಲಬ್‌ಗಳನ್ನು ಮುಚ್ಚಲು ಆದೇಶಿಸಲಾಗಿದೆ. ಉತ್ತರ ಐರ್ಲೆಂಡ್‌ನಲ್ಲಿ, ನೈಟ್‌ಕ್ಲಬ್‌, ನೃತ್ಯ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.