ADVERTISEMENT

ಲೈಂಗಿಕ ದಾಸಿಯರಾಗಿ ಸ್ತ್ರೀಯರ ಬಳಕೆ: ತಾಲಿಬಾನ್ ಕ್ರೌರ್ಯ ಬಿಚ್ಚಿಟ್ಟ ಮಾಜಿ ಜಡ್ಜ್

ಡೆಕ್ಕನ್ ಹೆರಾಲ್ಡ್
Published 21 ಆಗಸ್ಟ್ 2021, 15:21 IST
Last Updated 21 ಆಗಸ್ಟ್ 2021, 15:21 IST
ಸಾಂದರ್ಭಿಕ ಚಿತ್ರ – ಎಪಿ
ಸಾಂದರ್ಭಿಕ ಚಿತ್ರ – ಎಪಿ   

ಕಾಬೂಲ್: ಅಫ್ಗಾನಿಸ್ತಾನದ ಮಹಿಳೆಯರನ್ನು ಶವ ಪೆಟ್ಟಿಗೆಗಳಲ್ಲಿ ನೆರೆ ರಾಷ್ಟ್ರಗಳಿಗೆ ಸಾಗಿಸಿ ಲೈಂಗಿಕ ದಾಸಿಯರನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಮಾಜಿ ಜಡ್ಜ್ ನಜ್ಲಾ ಆಯೂಬಿ ಹೇಳಿದ್ದಾರೆ.

ಸದ್ಯ ಅಮೆರಿಕದಲ್ಲಿ ವಾಸಿಸುತ್ತಿರುವ ಅವರು, ಆಗಸ್ಟ್ 15ರಂದು ಅಫ್ಗಾನಿಸ್ತಾನದ ಮೇಲೆ ತಾಲಿಬಾನ್ ಉಗ್ರರು ಹಿಡಿತ ಸಾಧಿಸಿದ ಬಳಿಕ ಮಹಿಳೆಯರ ಮೇಲಿನ ಭಯಾನಕ ದೌರ್ಜನ್ಯದ ಅನೇಕ ಉದಾಹರಣೆಗಳನ್ನು ಕೇಳಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ‘ಮೆಟ್ರೋ ಡಾಟ್ ಕೊ ಡಾಟ್ ಯುಕೆ’ ವರದಿ ಮಾಡಿದೆ.

ತಾಲಿಬಾನ್ ಹೋರಾಟಗಾರರಿಗೆ ಮಾಡಿದ ಅಡುಗೆ ಚೆನ್ನಾಗಿರಲಿಲ್ಲವೆಂದು ಉತ್ತರ ಅಫ್ಗಾನಿಸ್ತಾನದಲ್ಲಿ ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಿರುವುದಾಗಿ ಅವರು ತಿಳಿಸಿದ್ದಾರೆ.

ADVERTISEMENT

ಇತರ ಯುವತಿಯರನ್ನು ಬಲವಂತವಾಗಿ ಮದುವೆ ಮಾಡಿಕೊಳ್ಳಲಾಗುತ್ತಿದೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಲಾಗುತ್ತಿದೆ ಎಂದು ಅವರು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

‘ಅವರು (ಉಗ್ರರು) ಆಹಾರ ನೀಡುವಂತೆ ಮತ್ತು ತಮಗಾಗಿ ಅಡುಗೆ ಮಾಡುವಂತೆ ಜನರನ್ನು ಬಲವಂತ ಮಾಡುತ್ತಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ಅನೇಕ ಯುವತಿಯರನ್ನು ಶವಪೆಟ್ಟಿಗೆಯಲ್ಲಿ ನೆರೆ ದೇಶಗಳಿಗೆ ಸಾಗಿಸಿ ಲೈಂಗಿಕ ದಾಸಿಯರನ್ನಾಗಿ ಬಳಸಿಕೊಳ್ಳಲಾಗುತ್ತಿದೆ’ ಎಂದು ‘ಸ್ಕೈನ್ಯೂಸ್’ಗೆ ಅವರು ತಿಳಿಸಿದ್ದಾರೆ.

‘ಯುವತಿಯರನ್ನು ತಾಲಿಬಾನ್ ಹೋರಾಟಗಾರರಿಗೆ ಮದುವೆ ಮಾಡಿಕೊಡುವಂತೆ ಕುಟುಂಬದವರನ್ನು ಒತ್ತಾಯಿಸಲಾಗುತ್ತಿದೆ. ಈ ಎಲ್ಲ ದೌರ್ಜನ್ಯಗಳನ್ನು ನೋಡಿದರೆ, ಮಹಿಳೆಯರು ಕೆಲಸ ಮಾಡಬಹುದು ಎಂದು ಅವರು ಹೇಳಿರುವುದು ಎಲ್ಲಿ ಅನುಷ್ಠಾನವಾಗುತ್ತಿದೆಯೋ ತಿಳಿದಿಲ್ಲ’ ಎಂದು ಆಯೂಬಿ ಹೇಳಿದ್ದಾರೆ.

ಮಹಿಳೆಯರ ಹಕ್ಕುಗಳನ್ನು ಗೌರವಿಸಲಾಗುವುದು, ಅವರು ಕೆಲಸ ಮಾಡಲು ಮತ್ತು ಶಿಕ್ಷಣ ಪಡೆಯಲು ಅವಕಾಶ ನೀಡಲಾಗುವುದು ಎಂದು ತಾಲಿಬಾನಿಗಳು ಹೇಳಿದ್ದರು.

ಟಿವಿ ನಿರೂಪಕಿಯನ್ನು ಕಚೇರಿ ಪ್ರವೇಶಿಸಲು ಅವಕಾಶ ನೀಡದ ತಾಲಿಬಾನಿಗಳ ಭರವಸೆಗಳನ್ನು ನಂಬಲಾಗದು ಎಂದು ಅವರು ಹೇಳಿದ್ದಾರೆ.

ತಮ್ಮ ಮತ್ತು ತಮ್ಮ ಪ್ರೀತಿಪಾತ್ರರ ಜೀವದ ಮೇಲಿನ ಬೆದರಿಕೆಯಿಂದಾಗಿ ಮಹಿಳಾ ಹೋರಾಟಗಾರರು ಅಡಗಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.