ADVERTISEMENT

ವೀಸಾ ಅವಧಿಗೆ ಮಿತಿ: ಟ್ರಂಪ್‌ ಆಡಳಿತದಿಂದ ಪ್ರಸ್ತಾವ

ಪಿಟಿಐ
Published 25 ಸೆಪ್ಟೆಂಬರ್ 2020, 15:02 IST
Last Updated 25 ಸೆಪ್ಟೆಂಬರ್ 2020, 15:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಅಮೆರಿಕದಲ್ಲಿರುವ ವಿದೇಶಿ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಪತ್ರಕರ್ತರು ಹೊಂದಿರುವ ವೀಸಾ ಅವಧಿಗೆ ಮಿತಿ ಹೇರುವ ಪ್ರಸ್ತಾವವನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ ಮುಂದಿಟ್ಟಿದೆ.

ವೀಸಾ ಸೌಲಭ್ಯದ ದುರ್ಬಳಕೆ, ರಾಷ್ಟ್ರೀಯ ಭದ್ರತೆಗೆ ಅಪಾಯದ ಸಾಧ್ಯತೆ ಎಂದು ಕಳವಳ ವ್ಯಕ್ತಪಡಿಸಿರುವ ಟ್ರಂಪ್‌ ಆಡಳಿತ, ಈಗ ಈ ವೀಸಾ ಅವಧಿಗೆ ಮಿತಿ ಹೇರಲು ಮುಂದಾಗಿದೆ.ಈ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಶುಕ್ರವಾರ ಅಧಿಸೂಚನೆ ಹೊರಡಿಸಲಾಗಿದೆ.

‘ಉದ್ದೇಶಿತ ಕ್ರಮ ನಿರ್ದಿಷ್ಟ ದೇಶವೊಂದಕ್ಕೆ ಅನ್ವಯ ಅಲ್ಲ. ಆದರೆ, ವೀಸಾ ನೀಡುವ ವ್ಯವಸ್ಥೆಯಲ್ಲಿ ಈಗ ಕೆಲವೊಂದು ನ್ಯೂನತೆಗಳಿವೆ. ಈ ನ್ಯೂನತೆಗಳನ್ನೇ ಬಳಸಿ ಚೀನಾ ಮೂಲದ ಕೆಲವರು ವೀಸಾ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅದೇ ರೀತಿ ಚೀನಾ ಮೂಲದ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಪತ್ರಕರ್ತರೇ ಹೆಚ್ಚು ಲಾಭ ಪಡೆದಿದ್ದಾರೆ’ ಎಂದು ಮೂಲಗಳು ಹೇಳಿವೆ.

ADVERTISEMENT

ಪ್ರಸ್ತಾವಿತ ನಿಯಮಗಳ ಪ್ರಕಾರ,ವಿದ್ಯಾರ್ಥಿಗಳಿಗೆ ನೀಡುವ ವೀಸಾ (ಎಫ್‌ ವೀಸಾ), ಸಂಶೋಧಕರ ವೀಸಾ (ಜೆ) ಅವಧಿಯು ಕ್ರಮವಾಗಿ ಅವರು ಕೈಗೊಳ್ಳುವ ಅಧ್ಯಯನ ಅಥವಾ ಸಂಶೋಧನೆಗೆ ನಿಗದಿಪಡಿಸಿದ ಅಂತಿಮ ದಿನಾಂಕದವರೆಗೆ ಇಲ್ಲವೇ ಗರಿಷ್ಠ ನಾಲ್ಕು ವರ್ಷಗಳವರೆಗೆ ಇರಲಿದೆ ಎಂದು ಆಂತರಿಕ ಭದ್ರತಾ ಇಲಾಖೆ (ಡಿಎಚ್‌ಎಸ್‌) ತಿಳಿಸಿದೆ.

‘ದೇಶದ ಶಿಕ್ಷಣ ವ್ಯವಸ್ಥೆಗೆ ಧಕ್ಕೆಯಾಗುವುದನ್ನು ತಪ್ಪಿಸಲು, ವಲಸೆ ಕಾನೂನುಗಳನ್ನು ಮತ್ತಷ್ಟೂ ಕಠಿಣಗೊಳಿಸುವ ಸಂಬಂಧ ವೀಸಾ ನಿಯಮಗಳಿಗೆ ತಿದ್ದುಪಡಿ ತರುವುದು ಅಗತ್ಯ’ ಎಂದು ಹಿರಿಯ ಅಧಿಕಾರಿ ಕೆನ್‌ ಕಕಿನೆಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.