ADVERTISEMENT

ವಿದೇಶಗಳಿಗೆ ನೀಡುತ್ತಿದ್ದ ನೆರವು ನಿಲ್ಲಿಸಿದ ಅಮೆರಿಕ

ಅಮೆರಿಕ: ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ ಟ್ರಂಪ್

ಪಿಟಿಐ
Published 27 ಜನವರಿ 2025, 12:58 IST
Last Updated 27 ಜನವರಿ 2025, 12:58 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್: ವಿದೇಶಗಳಿಗೆ ನೀಡುತ್ತಿದ್ದ ಎಲ್ಲ ರೀತಿಯ ನೆರವನ್ನು ಸ್ಥಗಿತಗೊಳಿಸುವುದಾಗಿ ಅಮೆರಿಕ ಘೋಷಿಸಿದೆ. ಇತರ ದೇಶಗಳಿಗೆ ಹಣಕಾಸಿನ ನೆರವು ನೀಡುವ ತನ್ನ ನೀತಿಯನ್ನು ಪರಿಶೀಲಿಸುವುದಾಗಿಯೂ ಭಾನುವಾರ ಹೇಳಿದೆ. 

ವಿದೇಶಗಳಿಗೆ ಹಣಕಾಸಿನ ನೆರವು ಸ್ಥಗಿತಗೊಳಿಸುವುದಕ್ಕೆ ಸಂಬಂಧಿಸಿದ ಕಾರ್ಯಕಾರಿ ಆದೇಶಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಹಾಕಿದ್ದರು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. 

ವಿದೇಶಾಂಗ ಸಚಿವಾಲಯದ ವಕ್ತಾರೆ ಟಾಮಿ ಬ್ರೂಸ್, ‘ಇನ್ನು ಮುಂದೆ ಕುರುಡಾಗಿ ವಿದೇಶಗಳಿಗೆ ಹಣಕಾಸಿನ ನೆರವು ನೀಡುವುದಿಲ್ಲ ಎಂದು ಅಧ್ಯಕ್ಷ ಟ್ರಂಪ್‌ ಅವರು ಸ್ಪಷ್ವವಾಗಿ ಹೇಳಿದ್ದಾರೆ. ಏಕೆಂದರೆ, ಆ ಹಣ ಅಮೆರಿಕದ ಜನರಿಗೆ ವಾಪಸಾಗುವುದಿಲ್ಲ. ಕಷ್ಟಪಟ್ಟು ದುಡಿದು ತೆರಿಗೆ ಪಾವತಿಸುವ ನಮ್ಮ ಜನರ ಹಣವನ್ನು ವಿದೇಶಗಳಿಗೆ ನೀಡುವ ನೀತಿಯನ್ನು ಪರಿಶೀಲಿಸುವುದು ಸರಿಯಾದ ನಿರ್ಧಾರ ಮಾತ್ರವಲ್ಲದೆ, ನೈತಿಕವಾಗಿ ಅನಿವಾರ್ಯವಾಗಿರುವ ಕ್ರಮವೂ ಆಗಿದೆ’ ಎಂದು ಹೇಳಿದ್ದಾರೆ.

ADVERTISEMENT

ಯುಎಸ್‌ ಏಜೆನ್ಸಿ ಫಾರ್ ಇಂಟರ್‌ ನ್ಯಾಷನಲ್ ಡೆವಲಪ್‌ ಮೆಂಟ್‌ನಿಂದ (ಯುಎಸ್‌ಎಐಡಿ) ಅಥವಾ ಅದರ ಮುಖಾಂತರ ನೀಡಲಾಗುತ್ತಿದ್ದ ಎಲ್ಲ ವಿದೇಶಿ ನೆರವನ್ನು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಪರಿಶೀಲನೆಗಾಗಿ ಸ್ಥಗಿತಗೊಳಿಸಿದ್ದಾರೆ ಎಂದರು.

ಭಾರತಕ್ಕೆ ₹1,500 ಕೋಟಿ ನೆರವು

ಯುಎಸ್‌ ಏಡ್‌ 2023ರಲ್ಲಿ 158 ದೇಶಗಳಿಗೆ ಸುಮಾರು ₹3.88 ಲಕ್ಷ ಕೋಟಿ ಮೊತ್ತದ ನೆರವು ನೀಡಿದೆ. ಭಾರತಕ್ಕೆ ಸುಮಾರು ₹1,500 ಕೋಟಿ ನೆರವು ಲಭಿಸಿದೆ. ಅಫ್ಗಾನಿಸ್ತಾನಕ್ಕೆ ₹8,600 ಕೋಟಿ, ಬಾಂಗ್ಲಾದೇಶಕ್ಕೆ ₹3,450 ಕೋಟಿ ಮತ್ತು ಪಾಕಿಸ್ತಾನಕ್ಕೆ ಸುಮಾರು ₹2,000 ಕೋಟಿ ನೆರವು ದೊರೆತಿದೆ.

ಕೊಲಂಬಿಯಾ ವಿರುದ್ಧ ಸೇಡಿನ ಕ್ರಮ

ಕೊಲಂಬಿಯಾ ವಿರುದ್ಧ ಸುಂಕ ವಿಧಿಸುವುದು, ವೀಸಾ ನಿರ್ಬಂಧ ಒಳಗೊಂಡಂತೆ ಇತರ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ವಲಸಿಗರನ್ನು ಹೊತ್ತಿದ್ದ ಅಮೆರಿಕದ ಎರಡು ವಿಮಾನಗಳಿಗೆ ತನ್ನ ದೇಶದಲ್ಲಿ ಇಳಿಯಲು ಕೊಲಂಬಿಯಾ ಅವಕಾಶ ನೀಡಿರಲಿಲ್ಲ. ಇದಕ್ಕೆ ಅಮೆರಿಕ ಪ್ರತೀಕಾರದ ಕ್ರಮ ತೆಗೆದುಕೊಂಡಿದೆ.

ಕೊಲಂಬಿಯಾದ ಅಧ್ಯಕ್ಷ ಗುಸ್ತಾವೊ ಪೆಟ್ರೊ ಅವರ ನಿರ್ಧಾರವು ಅಮೆರಿಕದ ರಾಷ್ಟ್ರೀಯ ಭದ್ರತೆಯನ್ನು ‘ಅಪಾಯಕ್ಕೆ ತಳ್ಳಿದ’ ಕಾರಣ ಈ ಕ್ರಮಗಳು ಅಗತ್ಯವೆಂದು ಟ್ರಂಪ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.