
ಲಂಡನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾಷಣವನ್ನು ಎಡಿಟ್ ಮಾಡಿ, 2021ರ ಕ್ಯಾಪಿಟಲ್ ಗಲಭೆಗೆ ಕುಮ್ಮಕ್ಕು ನೀಡಿದಂತೆ ಬಿಂಬಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಗುರುವಾರ ಟ್ರಂಪ್ ಅವರನ್ನು ಕ್ಷಮೆಯಾಚಿಸಿದೆ.
ಇದೇ ಸಂದರ್ಭದಲ್ಲಿ, ಟ್ರಂಪ್ ಅವರ ಮಾನಹಾನಿ ಮಾಡಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಈ ಮೂಲಕ, 1 ಶತಕೋಟಿ ಡಾಲರ್ (ಅಂದಾಜು ₹8,873 ಕೋಟಿ) ಪರಿಹಾರ ಕೋರುವ ಮಾನನಷ್ಟ ಮೊಕದ್ದಮೆ ಬೆದರಿಕೆಯನ್ನು ಅದು ತಳ್ಳಿಹಾಕಿದೆ..
ಬಿಬಿಸಿ ಮುಖ್ಯಸ್ಥ ಸಮೀರ್ ಶಾ ಅವರು ವೈಯಕ್ತಿಕವಾಗಿ ಶ್ವೇತಭವನಕ್ಕೆ ಪತ್ರ ಬರೆದು,‘ಟ್ರಂಪ್ ಅವರ ಭಾಷಣವನ್ನು ತಪ್ಪಾಗಿ ನಿರೂಪಿಸಿದ್ದಕ್ಕಾಗಿ ನಾನು ಮತ್ತು ಸಂಸ್ಥೆ ಕ್ಷಮೆಯಾಚಿಸುತ್ತೇವೆ’ ಎಂದು ಹೇಳಿದ್ದಾರೆ.
‘ಟ್ರಂಪ್ ಅವರ ಭಾಷಣವಿರುವ ಸಾಕ್ಷ್ಯಚಿತ್ರವನ್ನು ಮರುಪ್ರಸಾರ ಮಾಡುವ ಯೋಜನೆ ಇಲ್ಲ’ ಎಂದೂ ಸ್ಪಷ್ಟಪಡಿಸಿದ್ದಾರೆ.
‘ಸಾಕ್ಷ್ಯಚಿತ್ರದಲ್ಲಿ ಟ್ರಂಪ್ ಅವರ ಎರಡು ಪ್ರತ್ಯೇಕ ಭಾಷಣದ ತುಣುಕುಗಳನ್ನು ಬಳಸಿಕೊಳ್ಳಲಾಗಿತ್ತು. ಆದರೆ ಅವರು ಏಕಕಾಲದಲ್ಲಿ ಮಾತನಾಡಿದಂತೆ ಎಡಿಟ್ ಮಾಡಲಾದ ಕಾರಣ, ಕ್ಯಾಪಿಟಲ್ ಗಲಭೆಗೆ ಅವರು ನೇರವಾಗಿ ಪ್ರಚೋದನೆ ನೀಡಿದಂತೆ ಅದು ಭಾಸವಾಗುತಿತ್ತು. ಇದು ಉದ್ದೇಶಪೂರ್ವಕವಾಗಿ ಮಾಡಿದ ತಪ್ಪಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಟ್ರಂಪ್ ಅವರ ಪರ ವಕೀಲರು ಬಿಬಿಸಿಗೆ ಪತ್ರ ಬರೆದು, ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದರು. ಟ್ರಂಪ್ ಅವರ ಮಾನಹಾನಿ ಮಾಡಿದ್ದಕ್ಕಾಗಿ 1 ಶತಕೋಟಿ ಡಾಲರ್ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದರು ಮತ್ತು ಶುಕ್ರವಾರದ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಗಡುವು ಸಹ ನೀಡಿದ್ದರು.
ಪ್ರಕರಣ ಏನು?
ಅಮೆರಿಕ ಕ್ಯಾಪಿಟಲ್ (ಸಂಸತ್) ಮೇಲೆ 2021ರ ಜನವರಿ 6ರಂದು ಪ್ರತಿಭಟನಕಾರರು ದಾಳಿ ನಡೆಸಿದ್ದರು. ಇದಕ್ಕೂ ಮುನ್ನ ಬೆಂಬಲಿಗರನ್ನು ಉದ್ದೇಶಿಸಿ ಟ್ರಂಪ್ ಮಾಡಿದ್ದ ಭಾಷಣದ ತುಣುಕುಗಳನ್ನು ‘ಪನೋರಮಾ’ ಸಾಕ್ಷ್ಯಚಿತ್ರದಲ್ಲಿ ಬಿಬಿಸಿ ಬಳಸಿತ್ತು. ‘ಟ್ರಂಪ್: ಎ ಸೆಕೆಂಡ್ ಚಾನ್ಸ್?’ ಶೀರ್ಷಿಕೆಯ ಸಾಕ್ಷ್ಯಚಿತ್ರವು ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಒಂದು ದಿನ ಮೊದಲು ಅಂದರೆ 2024ರ ಅಕ್ಟೋಬರ್ 28ರಂದು ಪ್ರಸಾರವಾಗಿತ್ತು. ಅದರಲ್ಲಿ ಟ್ರಂಪ್ ಅವರು ನೇರವಾಗಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದಂತೆ ಬಿಂಬಿಸಲಾಗಿತ್ತು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ಬೆನ್ನಲ್ಲೇ ಬಿಬಿಸಿಯ ಪ್ರಧಾನ ನಿರ್ದೇಶಕ ಟಿಮ್ ಡೇವಿ ಮತ್ತು ಸಿಇಒ ಡೆಬ್ರೊ ಟರ್ನಿಸ್ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.