ಡೊನಾಲ್ಡ್ ಟ್ರಂಪ್
(ರಾಯಿಟರ್ಸ್ ಚಿತ್ರ)
ಟೆಲ್ ಅವೀವ್: ಗಾಜಾ ಪಟ್ಟಿಯಲ್ಲಿ 20 ತಿಂಗಳಿಂದ ಮುಂದುವರಿದಿರುವ ಸಂಘರ್ಷ ಕೊನೆಗೊಂಡು, ಇಸ್ರೇಲ್–ಹಮಾಸ್ ನಡುವೆ ಹೊಸ ಕದನ ವಿರಾಮ ಒಪ್ಪಂದ ಏರ್ಪಡುವ ಆಶಾವಾದವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದ್ದಾರೆ.
‘ಗಾಜಾದಲ್ಲಿ ಒಪ್ಪಂದ ಮಾಡಿಕೊಳ್ಳಿ; ಒತ್ತೆಯಾಳುಗಳನ್ನು ಮರಳಿ ಪಡೆಯಿರಿ’ ಎಂದು ಟ್ರಂಪ್ ಭಾನುವಾರ ತಮ್ಮ ಸಾಮಾಜಿಕ ಜಾಲತಾಣ ‘ಟ್ರುಥ್ ಸೋಷಿಯಲ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಇನ್ನೊಂದು ವಾರದಲ್ಲಿ ಗಾಜಾದಲ್ಲಿ ಕದನ ವಿರಾಮ ಒಪ್ಪಂದ ಆಗಲಿದೆ. ಗಾಜಾ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಮೆರಿಕ ಕೆಲಸ ಮಾಡುತ್ತಿದೆ’ ಎಂದು ಟ್ರಂಪ್ ಹೇಳಿದ್ದರು. ಟ್ರಂಪ್ ಹೇಳಿಕೆ ಹೊರಬಿದ್ದ ಬೆನ್ನಲ್ಲೇ, ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ದಾಳಿ ಮುಂದುವರಿದಿತ್ತು.
‘ಇಸ್ರೇಲ್ ಸಚಿವ ರಾನ್ ಡೆರ್ಮರ್ ಮುಂದಿನ ವಾರ ವಾಷಿಂಗ್ಟನ್‌ಗೆ ತೆರಳಲಿದ್ದು, ಇಸ್ರೇಲ್– ಹಮಾಸ್ ಕದನ ವಿರಾಮ ಹಾಗೂ ಇರಾನ್ ಜತೆಗಿನ ಯುದ್ಧ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿಚಾರಣೆಯ ಬಗ್ಗೆಯೂ ‘ಟ್ರುಥ್ ಸೋಷಿಯಲ್’ ಪೋಸ್ಟ್‌ನಲ್ಲಿ ಟ್ರಂಪ್ ಪ್ರಸ್ತಾಪಿಸಿದ್ದಾರೆ. ‘ಇದು ರಾಜಕೀಯ ಭೇಟೆ. ನಾನೂ ಇಂಥದ್ದೇ ಪರಿಸ್ಥಿತಿಯನ್ನು ಎದುರಿಸಿದ್ದೇನೆ’ ಎಂದಿದ್ದಾರೆ.
ಸಾಮೂಹಿಕ ಸ್ಥಳಾಂತರ: ಹಲವು ಸುತ್ತಿನ ದಾಳಿ ನಡೆಯುತ್ತಿದ್ದು, ಉತ್ತರ ಗಾಜಾ ಪಟ್ಟಿಯಿಂದ ಪ್ಯಾಲಿಸ್ಟೀನಿಯರ ಸಾಮೂಹಿಕ ಸ್ಥಳಾಂತರಕ್ಕೆ ಇಸ್ರೇಲ್ ಸೇನೆ ಭಾನುವಾರ ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.