ಡೊನಾಲ್ಡ್ ಟ್ರಂಪ್
– ಫೇಸ್‌ಬುಕ್ ಚಿತ್ರ
US President Trump to proceed with legal action against BBC despite apology
ಬಿಬಿಸಿ ವಿರುದ್ಧ ₹8 ಸಾವಿರ ಕೋಟಿಯಿಂದ ₹44ಸಾವಿರ ಕೋಟಿಯ ಮಾನನಷ್ಟ ಮೊಕದ್ದಮೆಯ ಬೆದರಿಕೆ ಹಾಕಿದ ಟ್ರಂಪ್
ಕ್ಷಮೆ ಕೇಳಿದರೂ ಬಿಡಲ್ಲ, ಕಾನೂನು ಕ್ರಮ ನಿಶ್ಚಿತ: ಬಿಬಿಸಿ ವಿರುದ್ಧ ಗುಡುಗಿದ ಟ್ರಂಪ್
ವಾಷಿಂಗ್ಟನ್: ಕಳೆದ ವರ್ಷ ಪ್ರಸಾರವಾದ ಸುದ್ದಿ ಸಾಕ್ಷ್ಯಚಿತ್ರವೊಂದರಲ್ಲಿ ತಮ್ಮ ಭಾಷಣವನ್ನು ಎಡಿಟ್ ಮಾಡಿ ಪ್ರಸಾರ ಮಾಡಿದ್ದಕ್ಕಾಗಿ ಬಿಬಿಸಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಕ್ಯಾಪಿಟಲ್ ಹಿಲ್ಸ್ ಗಲಭೆಗೆ ಪ್ರಚೋದನೆ ಎಂಬಂತೆ ಭಾಷಣವನ್ನು ಎಡಿಟ್ ಮಾಡಿ ಬಳಸಲಾಗಿದೆ ಎಂಬುದು ಅವರ ಆರೋಪವಾಗಿದೆ. ಈ ಸಂಬಂಧ ಬಿಬಿಸಿ ಕ್ಷಮೆ ಕೇಳಿದ್ದರೂ ಕಾನೂನು ಕ್ರಮ ಕೈಗೊಳ್ಳುವುದಾಗಿ ಟ್ರಂಪ್ ಗುಡುಗಿದ್ದಾರೆ.
‘ಬಹುಶಃ ಮುಂದಿನವಾರ ನಾವು ಅವರ(ಬಿಬಿಸಿ) ವಿರುದ್ಧ ಮೊಕದ್ದಮೆ ಹೂಡುತ್ತೇವೆ. ಒಂದು ಶತಕೋಟಿ ಡಾಲರ್‌ನಿಂದ(ಅಂದಾಜು ₹8,873 ಕೋಟಿ) 5 ಶತಕೋಟಿ ಡಾಲರ್‌ಗಳವರೆಗೆ(ಅಂದಾಜು ₹44,365 ಕೋಟಿ) ಪರಿಹಾರ ಕೇಳುತ್ತೇವೆ’ಎಂದು ಟ್ರಂಪ್ ಶನಿವಾರ ರಾತ್ರಿ ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ಅವರು(ಬಿಬಿಸಿ) ನಮ್ಮನ್ನು ವಂಚಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಹಾಗಾಗಿ, ನಾವು ಕಾನೂನು ಕ್ರಮ ಜರುಗಿಸಲೇಬೇಕು. ಅವರು ನಾನು ಆಡಿದ ಮಾತುಗಳನ್ನೇ ತಿರುಚಿದ್ದಾರೆ’ಎಂದು ಟ್ರಂಪ್ ಹೇಳಿದ್ದಾರೆ.
ಈ ವಿವಾದದಿಂದ ಬಿಬಿಸಿ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದು, ಸಂಸ್ಥೆಯ ಉನ್ನತ ಅಧಿಕಾರಿಗಳು ರಾಜೀನಾಮೆ ನೀಡಿದ್ದಲ್ಲದೆ, ಭಾರತೀಯ ಮೂಲದ ಬಿಬಿಸಿ ಅಧ್ಯಕ್ಷ ಸಮೀರ್ ಶಾ ಕ್ಷಮೆಯಾಚಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾಷಣವನ್ನು ಎಡಿಟ್ ಮಾಡಿ, 2021ರ ಕ್ಯಾಪಿಟಲ್ ಗಲಭೆಗೆ ಕುಮ್ಮಕ್ಕು ನೀಡಿದಂತೆ ಬಿಂಬಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಗುರುವಾರ ಟ್ರಂಪ್ ಅವರನ್ನು ಕ್ಷಮೆಯಾಚಿಸಿತ್ತು.
ಇದೇ ಸಂದರ್ಭದಲ್ಲಿ, ಟ್ರಂಪ್ ಅವರ ಮಾನಹಾನಿ ಮಾಡಿಲ್ಲ ಎಂದು ಅದು ಸ್ಪಷ್ಟಪಡಿಸಿತ್ತು. ಈ ಮೂಲಕ, 1 ಶತಕೋಟಿ ಡಾಲರ್ (ಅಂದಾಜು ₹8,873 ಕೋಟಿ) ಪರಿಹಾರ ಕೋರುವ ಮಾನನಷ್ಟ ಮೊಕದ್ದಮೆ ಬೆದರಿಕೆಯನ್ನು ಅದು ತಳ್ಳಿಹಾಕಿತ್ತು..
ಬಿಬಿಸಿ ಮುಖ್ಯಸ್ಥ ಸಮೀರ್ ಶಾ ಅವರು ವೈಯಕ್ತಿಕವಾಗಿ ಶ್ವೇತಭವನಕ್ಕೆ ಪತ್ರ ಬರೆದು,‘ಟ್ರಂಪ್ ಅವರ ಭಾಷಣವನ್ನು ತಪ್ಪಾಗಿ ನಿರೂಪಿಸಿದ್ದಕ್ಕಾಗಿ ನಾನು ಮತ್ತು ಸಂಸ್ಥೆ ಕ್ಷಮೆಯಾಚಿಸುತ್ತೇವೆ’ ಎಂದು ತಿಳಿಸಿದ್ದರು. ‘ಟ್ರಂಪ್ ಅವರ ಭಾಷಣವಿರುವ ಸಾಕ್ಷ್ಯಚಿತ್ರವನ್ನು ಮರುಪ್ರಸಾರ ಮಾಡುವ ಯೋಜನೆ ಇಲ್ಲ’ ಎಂದೂ ಅವರು ಸ್ಪಷ್ಟಪಡಿಸಿದ್ದರು.
‘ಸಾಕ್ಷ್ಯಚಿತ್ರದಲ್ಲಿ ಟ್ರಂಪ್ ಅವರ ಎರಡು ಪ್ರತ್ಯೇಕ ಭಾಷಣದ ತುಣುಕುಗಳನ್ನು ಬಳಸಿಕೊಳ್ಳಲಾಗಿತ್ತು. ಆದರೆ ಅವರು ಏಕಕಾಲದಲ್ಲಿ ಮಾತನಾಡಿದಂತೆ ಎಡಿಟ್ ಮಾಡಲಾದ ಕಾರಣ, ಕ್ಯಾಪಿಟಲ್ ಗಲಭೆಗೆ ಅವರು ನೇರವಾಗಿ ಪ್ರಚೋದನೆ ನೀಡಿದಂತೆ ಅದು ಭಾಸವಾಗುತಿತ್ತು. ಇದು ಉದ್ದೇಶಪೂರ್ವಕವಾಗಿ ಮಾಡಿದ ತಪ್ಪಲ್ಲ’ ಎಂದು ಬಿಬಿಸಿ ಸ್ಪಷ್ಟನೆ ನೀಡಿದೆ.
ಟ್ರಂಪ್ ಅವರ ಪರ ವಕೀಲರು ಬಿಬಿಸಿಗೆ ಪತ್ರ ಬರೆದು, ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದರು. ಟ್ರಂಪ್ ಅವರ ಮಾನಹಾನಿ ಮಾಡಿದ್ದಕ್ಕಾಗಿ 1 ಶತಕೋಟಿ ಡಾಲರ್ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದರು ಮತ್ತು ಶುಕ್ರವಾರದ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಗಡುವು ಸಹ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.