ಡೊನಾಲ್ಡ್ ಟ್ರಂಪ್
(ರಾಯಿಟರ್ಸ್ ಚಿತ್ರ)
ನವದೆಹಲಿ: ಭಾರತದೊಂದಿಗಿನ ವ್ಯಾಪಾರ ಮಾತುಕತೆಗಳಲ್ಲಿ ಪ್ರಗತಿ ಕಾಣದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತಾಶೆಗೊಂಡಿದ್ದು, ಭಾರತದ ಮೇಲೆ ವಿಧಿಸಲಾದ ಶೇ 25 ರಷ್ಟು ಸುಂಕವು ಪರಿಸ್ಥಿತಿಯನ್ನು ಪರಿಹಾರ ಒದಗಿಸುತ್ತದೆ ಎಂದು ಶ್ವೇತಭವನದ ಆರ್ಥಿಕ ಸಲಹೆಗಾರರು ಹೇಳಿದ್ದಾರೆ.
ಉದ್ದೇಶಿತ ದ್ವಿಪಕ್ಷೀಯ ಒಪ್ಪಂದದ ಕುರಿತಾಗಿ ನಡೆಯುತ್ತಿದ್ದ ಮಾತುಕತೆಗಳ ಬಗ್ಗೆ ಅವರು ತೀವ್ರ ಅಸಮಾಧಾನಗೊಂಡಿದ್ದರು ಎಂದು ರಾಷ್ಟ್ರೀಯ ಆರ್ಥಿಕ ಪರಿಷತ್ತಿನ ನಿರ್ದೇಶಕ ಕೆವಿನ್ ಹ್ಯಾಸೆಟ್ ಹೇಳಿದ್ದಾರೆ.
ಎರಡು ದೇಶಗಳು ಹಲವು ಸುತ್ತಿನ ಮಾತುಕತೆ ಬಳಿಕವೂ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿದ್ದವು.
ಟ್ರಂಪ್ ಬುಧವಾರ ಭಾರತದಿಂದ ಆಮದಾಗುವ ಎಲ್ಲ ವಸ್ತುಗಳ ಮೇಲೆ ಶೇ 25ರಷ್ಟು ಸುಂಕ ಮತ್ತು ರಷ್ಯಾದಿಂದ ಕಚ್ಚಾತೈಲ ಮಹಾಗು ಮಿಲಿಟರಿ ಉಪಕರಣ ಖರೀದಿಸುತ್ತಿರುವ ಹಿನ್ನೆಲೆಯಲ್ಲಿ ಅನಿರ್ದಿಷ್ಟ ದಂಡ ವಿಧಿಸಿರುವುದಾಗಿ ಘೋಷಿಸಿದ್ದಾರೆ. ಈ ಸುಂಕವು ಆಗಸ್ಟ್ 1ರಿಂದಲೇ ಜಜಾರಿಗೆ ಬರಲಿದೆ ಎಂದಿದ್ದಾರೆ.
ವ್ಯಾಪಾರ ಒಪ್ಪಂದ ಕುರಿತ ಮಾತುಕತೆಗೆ ಆಗಸ್ಟ್ 25ರ ಬಳಿಕ ಅಮೆರಿಕದ ತಂಡವು ಭಾರತಕ್ಕೆ ಭೇಟಿ ನೀಡಲಿದೆ ಎಂದು ಭಾರತದ ಅಧಿಕಾರಿಗಳು ಘೋಷಿಸಿದ ಬೆನ್ನಲ್ಲೇ ಟ್ರಂಪ್ ದಿಢೀರ್ ಸುಂಕ ಘೋಷಣೆ ಮಾಡಿದ್ದಾರೆ.
ಭಾರತ ತನ್ನೆಲ್ಲ ಭೇಡಿಕೆಗಳಿಗೆ ಒಪ್ಪಿಕೊಳ್ಳುವಂತೆ ಮಾಡಲು ಒತ್ತಡ ಹೇರುವ ಉದ್ದೇಶದಿಂದ ಟ್ರಂಪ್ ಈ ತಂತ್ರ ಬಳಸಿದ್ದಾರೆ ಎಂದು ವರದಿ ಹೇಳಿದೆ. ಜಪಾನ್, ಬ್ರಿಟನ್ ಮತ್ತು ಯೂರೋಪಿಯನ್ ಒಕ್ಕೂಟದ ವಿರುದ್ಧವೂ ಟ್ರಂಪ್ ಇದೇ ತಂತ್ರ ಬಳಸಿದ್ದರು.
ಅಮೆರಿಕದ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆ ಬಹುತೇಕ ಮುಚ್ಚಲ್ಪಟ್ಟಿದೆ. ಆದರೆ, ಅಮೆರಿಕದ ಮಾರುಕಟ್ಟೆಯು ಭಾರತದ ಉತ್ಪನ್ನಗಳಿಗೆ ಮುಕ್ತವಾಗಿದೆ ಎಂದು ಹ್ಯಾಸೆಟ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.