ADVERTISEMENT

Greenland: ನಿರ್ಧಾರದಿಂದ ಹಿಂದೆ ಸರಿಯಲ್ಲ: AI ಚಿತ್ರದ ಮೂಲಕ ಟ್ರಂಪ್ ಸಂದೇಶ

ಏಜೆನ್ಸೀಸ್
Published 20 ಜನವರಿ 2026, 16:24 IST
Last Updated 20 ಜನವರಿ 2026, 16:24 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

‘ಗ್ರೀನ್‌ಲ್ಯಾಂಡ್‌ ಅನ್ನು ವಶಕ್ಕೆ ಪಡೆದುಕೊಳ್ಳುವ ನಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಬಲವಂತವಾದರೂ ಸರಿ ಆ ದೇಶವನ್ನು ಪಡೆದುಕೊಳ್ಳುವುದನ್ನೂ ನಿರಾಕರಿಸಲಾಗದು’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಂಗಳವಾರ ಹೇಳಿದರು.

ಗ್ರೀನ್‌ಲ್ಯಾಂಡ್‌ ಕುರಿತು ಟ್ರಂಪ್‌ ಅವರು ಎಐ ಮೂಲಕ ಸೃಷ್ಟಿಸಿದ ಹಲವು ಚಿತ್ರಗಳು ಮತ್ತು ಪೋಸ್ಟ್‌ಗಳನ್ನೂ ಹಂಚಿಕೊಂಡಿದ್ದಾರೆ.

ADVERTISEMENT

ಗ್ರೀನ್‌ಲ್ಯಾಂಡ್ ವಶಕ್ಕೆ ಪಡೆಯುವುದರಿಂದ ಹಿಂದೆ ಸರಿಯುವುದಿಲ್ಲ ಎಂಬ ಸಂದೇಶವನ್ನು ಜನರಿಗೆ ತಲುಪಿಸಲು, ಟ್ರಂಪ್ ಅವರು ಕೃತಕ ಬುದ್ಧಿಮತ್ತೆ (ಎಐ) ಬಳಿಸಿ ಗ್ರೀನ್‌ಲ್ಯಾಂಡ್‌ನಲ್ಲಿ ಅಮೆರಿಕದ ಧ್ವಜ ಹಿಡಿದುಕೊಂಡಿರುವ ತಮ್ಮ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಮತ್ತೊಂದು ಚಿತ್ರದ‌ಲ್ಲಿ ಕೆನಡಾ ಮತ್ತು ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕದ ಭಾಗವಾಗಿ ತೋರಿಸುವ ನಕ್ಷೆಯ ಪಕ್ಕದಲ್ಲಿ ಟ್ರಂಪ್ ಅವರು ಯುರೋಪಿಯನ್ ಯೂನಿಯನ್ ನಾಯಕರೊಂದಿಗೆ ಮಾತನಾಡುತ್ತಿರುವಂತೆ ಕಾಣುವಂತೆ ಚಿತ್ರ ಹಂಚಿಕೊಂಡಿದ್ದಾರೆ.

‘ಗ್ರೀನ್‌ಲ್ಯಾಂಡ್‌ ಕುರಿತು ಮುಂದೇನು ಮಾಡಬೇಕು ಎಂಬ ಮಾರ್ಗೋಪಾಯ ಹುಡುಕಲು ಬದ್ಧ’ ಎಂದು ನ್ಯಾಟೊ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಅವರು ಕಳುಹಿಸಿರುವ ಸಂದೇಶವನ್ನೂ ಟ್ರಂಪ್‌ ಅವರು ಬಹಿರಂಗಪಡಿಸಿದ್ದಾರೆ. ನ್ಯಾಟೊದ ಅಧಿಕಾರಿಗಳು ಕೂಡ ಇದನ್ನು ಖಚಿತಪಡಿಸಿದ್ದಾರೆ.

ರುಟ್ಟೆ ಅವರೊಂದಿಗೆ ಮಾತುಕತೆ ನಡೆಸಿರುವ ಬಗ್ಗೆ ಹೇಳಿಕೆ ನೀಡಿರುವ ಟ್ರಂಪ್‌, ‘ಅಮೆರಿಕದ ಮತ್ತು ಇಡೀ ಜಗತ್ತಿನ ಭದ್ರತೆಗೆ ಗ್ರೀನ್‌ಲ್ಯಾಂಡ್‌ ಬಹಳ ಮುಖ್ಯವಾಗಿದೆ. ಆದ್ದರಿಂದ, ನಿರ್ಧಾರದಿಂದ ಹಿಂದೆ ಸರಿಯುವ ಮಾತೇ ಇಲ್ಲ’ ಎಂದಿದ್ದಾರೆ.

ಹಮಾಸ್‌ ಬಂಡುಕೋರರು ಮತ್ತು ಇಸ್ರೇಲ್ ಮಧ್ಯದ ಯುದ್ಧ ನಿಲ್ಲಿಸಲು ಅಮೆರಿಕ ಕದನ ವಿರಾಮ ಪ್ರಸ್ತಾವವನ್ನು ಮುಂದಿಟ್ಟಿದೆ. ಇದರ ಅನ್ವಯ ರೂಪಿಸಲಾಗಿರುವ ಗಾಜಾ ಶಾಂತಿ ಮಂಡಳಿಗೆ ಫ್ರಾನ್ಸ್‌ ಸೇರಿಕೊಳ್ಳದಿದ್ದರೆ, ಆ ದೇಶದ ಮೇಲೆ ಶೇ 200ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್‌ ಈ ಹಿಂದೆ ಹೇಳಿದ್ದರು. ಗ್ರೀನ್‌ಲ್ಯಾಂಡ್‌ ಪಡೆದುಕೊಳ್ಳುವ ತನ್ನ ದಾರಿಗೆ ಅಡ್ಡಗಾಲು ಹಾಕುವ ದೇಶಗಳ ಮೇಲೆಯೂ ಸುಂಕ ವಿಧಿಸುವುದಾಗಿ ಟ್ರಂಪ್‌ ಮಂಗಳವಾರ ಹೇಳಿದ್ದಾರೆ.

ಜಗತ್ತಿನಾದ್ಯಂತ ಶಾಂತಿ ಕಾಪಾಡಲು ನಮಗೆ ಮಾತ್ರವೇ ಶಕ್ತಿ ಇದೆ. ನಮ್ಮ ಸೇನೆಯೇ ಸರ್ವಶಕ್ತ. ಜಗತ್ತಿನ ಶಾಂತಿಯನ್ನು ಬಹಳ ಸರಳವಾಗಿ ನಮ್ಮ ಬಲದಿಂದ ಕಾಪಾಡುತ್ತೇವೆ
ಡೊನಾಲ್ಡ್ ಟ್ರಂಪ್‌, ಅಮೆರಿಕದ ಅಧ್ಯಕ್ಷ
ಅಮೆರಿಕವು ನಮ್ಮ ಮೇಲೆ ಸೇನಾ ಕಾರ್ಯಾಚರಣೆ ಮಾಡುವುದಿಲ್ಲ. ಆದರೂ ಮಾಡುವುದೇ ಇಲ್ಲ ಎನ್ನಲೂ ಆಗುವುದಿಲ್ಲ. ನಾವು ಎಲ್ಲ ಸಂದರ್ಭಗಳಿಗೂ ಸಿದ್ಧರಾಗಿರಬೇಕು
ಜೆನ್‌ ಫೆಡ್ರಿಕ್‌ ನೀಲ್ಸನ್‌, ಗ್ರೀನ್‌ಲ್ಯಾಂಡ್‌ ಪ್ರಧಾನಿ
ಇದೇ ರೀತಿ ಜಗತ್ತಿನ ರಾಜಕಾರಣವು ಆಘಾತ ನೀಡುವುದನ್ನು ಮುಂದುವರಿಸಿದರೆ ಸ್ವತಂತ್ರವಾದ ಯುರೋಪ್‌ವೊಂದನ್ನು ಕಟ್ಟಲು ಐರೋಪ್ಯ ಒಕ್ಕೂಟವನ್ನು ಒತ್ತಾಯಿಸಿದಂತಾಗುತ್ತದೆ
ಉರ್ಸುಲಾ ಫಾಂಡರ್‌ ಲೇಯನ್ ಐರೋಪ್ಯ ಒಕ್ಕೂಟದ ಅಧ್ಯಕ್ಷೆ

ವ್ಯಾಪಾರ ನಿಯಂತ್ರಿಸುವ ಬೆದರಿಕೆ ಒಡ್ಡಿದ ಒಕ್ಕೂಟ ಟ್ರಂಪ್‌ ಅವರ ಬೆದರಿಕೆಗಳಿಗೆ ವ್ಯಾಪಾರದ ಮೂಲಕ ಪ್ರತ್ಯುತ್ತರ ನೀಡಲು ಐರೋಪ್ಯ ಒಕ್ಕೂಟ ನಿರ್ಧರಿಸಿದೆ. ಅಮೆರಿಕದ ಮೇಲೆ 109 ಬಿಲಿಯನ್‌ ಡಾಲರ್‌ನಷ್ಟು (ಸುಮಾರು ₹9.92 ಲಕ್ಷ ಕೋಟಿ) ಸುಂಕ ವಿಧಿಸಲು ಒಕ್ಕೂಟ ಯೋಚಿಸುತ್ತಿದೆ. ಇಲ್ಲವಾದಲ್ಲಿ ಒಕ್ಕೂಟದ ಸದಸ್ಯ ರಾಷ್ಟ್ರಗಳು ರೂಪಿಸಿಕೊಂಡಿರುವ ಈ ದೇಶಗಳಿಗೆ ವಿಶೇಷಾಧಿಕಾರ ನೀಡುವ  ‘ಬಲವಂತ ತಡೆ ಅಸ್ತ್ರ’ ಎಂಬುದನ್ನು ಚಲಾಯಿಸಲೂ ಯೋಚಿಸುತ್ತಿದೆ. ಈ ಅಧಿಕಾರವನ್ನು ಒಕ್ಕೂಟ ಯಾರ ಮೇಲೂ ಇಲ್ಲಿಯವರೆಗೂ ಬಳಸಿಲ್ಲ. ಅಮೆರಿಕದ ಐಟಿ ಕಂಪನಿಗಳ ವ್ಯಾಪಾರ ತಡೆಯುವುದು ತನ್ನ ದೇಶಗಳಲ್ಲಿ ಅಮೆರಿಕದ ಹೂಡಿಕೆ ನಿಯಂತ್ರಿಸುವುದು ಹಾಗೂ ಇತರೆ ಅಸ್ತ್ರಗಳನ್ನು ಪ್ರಯೋಗಿಸಲು ಯೋಚಿಸಲಾಗುತ್ತಿದೆ. ಇದಕ್ಕೆ ದಾವೋಸ್‌ನಲ್ಲಿ ಪ್ರತಿಕ್ರಿಯಿಸಿರುವ ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್‌ ಬೆಸೆಂಟ್‌ ‘ನಾವು ಎತ್ತ ಸಾಗುತ್ತಿದ್ದೇವೆ? ಯಾಕೆ ಕೆಟ್ಟ ಯೋಚನೆಯನ್ನು ಮಾಡುತ್ತಿದ್ದೇವೆ? ನಿಧಾನಿಸಿ... ದೀರ್ಘವಾಗಿ ಉಸಿರು ತೆಗೆದುಕೊಳ್ಳಿ. ಎಲ್ಲರೂ ಸೇರಿ ಎಲ್ಲರಿಗೂ ಒಳ್ಳೆಯದಾಗುವಂತೆ ಏನಾದರೂ ಮಾಡೋಣ’ ಎಂದಿದ್ದಾರೆ.

‘ಎರಡನೇ ಮಹಾಯುದ್ಧದ ಪಾಠ ಮರೆಯಬಾರದು’ ‘ಜಗತ್ತಿನ ಎರಡನೇ ಮಹಾಯುದ್ಧದಿಂದ ಕಲಿತ ಪಾಠವನ್ನು ಮರೆಯಬಾರದು. ನಾವೆಲ್ಲರೂ ಸಹಕಾರದಿಂದ ಇರುವುದಕ್ಕೆ ಬದ್ಧರಾಗಿರಬೇಕು. ಇದಕ್ಕಾಗಿಯೇ ಗ್ರೀನ್‌ಲ್ಯಾಂಡ್‌ನಲ್ಲಿ ಸೇನಾ ಸಮರಾಭ್ಯಾಸ ನಡೆಸಲು ನಾವೂ ಸೇರಿಕೊಳ್ಳಲು ನಿರ್ಧರಿಸಿದ್ದೇವೆ. ಇದು ಯಾರನ್ನೋ ಬೆದರಿಸುವುದಕ್ಕಾಗಿ ಅಲ್ಲ. ಐರೋಪ್ಯ ಒಕ್ಕೂಟ ಒಂದು ದೇಶದ ಪರ ನಿಲ್ಲುವುದಕ್ಕೆ. ಸುಂಕಗಳನ್ನು ಹೇರುವುದು ಮತ್ತೊಂದು ದೇಶದ ಸಾರ್ವಭೌಮತ್ವದ ವಿರುದ್ಧವಾದುದು ಇಮ್ಯಾನುಯೆಲ್‌ ಮ್ಯಾಕ್ರನ್‌ ಫ್ರಾನ್ಸ್‌ ಅಧ್ಯಕ್ಷ (ದಾವೋಸ್‌ನಲ್ಲಿ ನಡೆಯುತ್ತಿರುವ ಜಾಗತಿಕ ಆರ್ಥಿಕ ವೇದಿಕೆಯ ಶೃಂಗಸಭೆಯಲ್ಲಿ ಮಾತನಾಡಿದ್ದು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.