ಎಸ್. ಜೈಶಂಕರ್
ನವದೆಹಲಿ: ಅಮೆರಿಕದ 47ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಪದಗ್ರಹಣ ಸಮಾರಂಭಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಅಭಿನಂದನಾ ಪತ್ರ ಹಿಡಿದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಮೆರಿಕಾಕ್ಕೆ ತೆರಳಿದ್ದಾರೆ.
ಸೋಮವಾರ ನಡೆಯಲಿರುವ ಟ್ರಂಪ್ ಅವರ ಪದಗ್ರಹಣ ಸಮಾರಂಭದಲ್ಲಿ ಜೈಶಂಕರ್ ಅವರು ಪ್ರಧಾನಿ ಮೋದಿ ಅವರ ವಿಶೇಷ ಪ್ರತಿನಿಧಿಯಾಗಿ ಭಾಗಿಯಾಗುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಯಾವುದೇ ರಾಷ್ಟ್ರದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾರತದಿಂದ ಪ್ರತಿನಿಧಿಯೊಬ್ಬರನ್ನು ಕಳುಹಿಸುವುದು ಸಂಪ್ರದಾಯವಾಗಿ ರೂಢಿಯಲ್ಲಿದೆ. 2023ರಲ್ಲಿ ನೈಜೀರಿಯಾ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಪಾಲ್ಗೊಂಡಿದ್ದರು. ಮಾಲ್ದೀವ್ಸ್ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾರತದ ಪ್ರಧಾನಿಯ ಪ್ರತಿನಿಧಿಯಾಗಿ ಕಿರಣ್ ರಿಜಿಜು ಭಾಗವಹಿಸಿದ್ದರು.
ಇರಾನ್ ಅಧ್ಯಕ್ಷರ ಪದಗ್ರಹಣದಲ್ಲಿ ಸಾರಿಗೆ ಸಚಿವ ನಿತಿನ್ ಗಡ್ಕರಿ, ಇಂಡೊನೇಷ್ಯಾ ಹಾಗೂ ಮೆಕ್ಸಿಕೊ ಅಧ್ಯಕ್ಷರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ವಿದೇಶಾಂಗ ಇಲಾಖೆಯ ರಾಜ್ಯ ಸಚಿವೆ ಪಬಿತ್ರಾ ಮಾರ್ಗರಿಟಾ ಪ್ರಧಾನಿ ಅವರ ವಿಶೇಷ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಮೆರಿಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ವಿದೇಶಿ ಗಣ್ಯರನ್ನು ಆಹ್ವಾನಿಸಲಾಗಿದೆ. ಅಮೆರಿಕದ ಅಧ್ಯಕ್ಷ ಷಿ ಜಿಂಗ್‌ಪಿಂಗ್, ಅರ್ಜೆಂಟಿನಾ ಅಧ್ಯಕ್ಷ ಜೇವಿಯರ್ ಮಿಲಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಸೇರಿದಂತೆ ಪ್ರಮುಖರಿಗೆ ಅಮೆರಿಕ ಆಹ್ವಾನ ಕಳುಹಿಸಿದೆ.
ಅಮೆರಿಕದ ಅಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ವಿದೇಶಿ ಗಣ್ಯರನ್ನು ಆಹ್ವಾನಿಸಿದ್ದು ಮೊದಲ ಬಾರಿಗೆ ಬಹಿರಂಗಗೊಂಡಿದ್ದ ಡಿಸೆಂಬರ್‌ನಲ್ಲಿ. ಚೀನಾ ಅಧ್ಯಕ್ಷ ಷಿ ಅವರಿಗೆ ಕಳುಹಿಸಲಾದ ಆಹ್ವಾನ ಪತ್ರಿಕೆ ಸುದ್ದಿಯಾಗಿತ್ತು. ಆದರೆ ಷಿ ಅವರು ತನ್ನ ಬದಲು ಉಪಾಧ್ಯಕ್ಷ ಹಾನ್ ಝೆಂಗ್ ಅವರನ್ನು ಕಳುಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.