ADVERTISEMENT

ಭಾರತದೊಂದಿಗೆ ನಮ್ಮ ಬಾಂಧವ್ಯವು ಉತ್ತಮವಾಗಿದ್ದರೂ ಅದು ಏಕಪಕ್ಷೀಯ: ಟ್ರಂಪ್‌

ಹಾರ್ಲೆ ಡೇವಿಡ್ಸನ್‌ ಬೈಕ್‌ನ ಉದಾಹರಣೆ ನೀಡಿದ ಅಮೆರಿಕ ಅಧ್ಯಕ್ಷ

ಪಿಟಿಐ
Published 3 ಸೆಪ್ಟೆಂಬರ್ 2025, 13:43 IST
Last Updated 3 ಸೆಪ್ಟೆಂಬರ್ 2025, 13:43 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ನ್ಯೂಯಾರ್ಕ್‌/ವಾಷಿಂಗ್ಟನ್‌: ‘ಭಾರತದೊಂದಿಗೆ ನಮ್ಮ ಬಾಂಧವ್ಯವು ಉತ್ತಮವಾಗಿದ್ದರೂ ಅದು ಏಕಪಕ್ಷೀಯವಾಗಿತ್ತು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಂಗಳವಾರ ಹೇಳಿದ್ದಾರೆ.

‘ಅಮೆರಿಕದ ಮೇಲೆ ಭಾರತವು ಹಲವು ವರ್ಷಗಳಿಂದ ಅಧಿಕ ಸುಂಕ ವಿಧಿಸುತ್ತಿದ್ದು, ಜಗತ್ತಿನಲ್ಲೇ ಅತ್ಯಧಿಕ ಸುಂಕ ಇದು’ ಎಂದಿದ್ದಾರೆ.

ಭಾರತದ ಮೇಲೆ ಹೆಚ್ಚುವರಿಯಾಗಿ ಶೇ 50ರಷ್ಟು ಸುಂಕ ವಿಧಿಸಿರುವುದಕ್ಕೆ ಸಂಬಂಧಿಸಿದಂತೆ ಶ್ವೇತಭವನದಲ್ಲಿ ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ತಮ್ಮ ನಿಲುವನ್ನು ಮತ್ತೊಮ್ಮೆ ಅವರು ಸಮರ್ಥಿಸಿಕೊಂಡಿದ್ದಾರೆ.

ADVERTISEMENT

‘ಭಾರತವು ನಮ್ಮ ಮೇಲೆ ಶೇ 100ರಷ್ಟು ಸುಂಕ ವಿಧಿಸಿದ್ದರಿಂದಲೇ ಅವರೊಟ್ಟಿಗೆ ನಾವು ಹೆಚ್ಚಿನ ವ್ಯಾಪಾರ ಮಾಡುತ್ತಿರಲಿಲ್ಲ. ಆದರೆ, ನಾವು ಹೆಚ್ಚಿನ ಸುಂಕ ವಿಧಿಸದಿದ್ದರಿಂದ ಅವರು ನಮ್ಮೊಟ್ಟಿಗೆ ಹೆಚ್ಚಿನ ವಹಿವಾಟು ನಡೆಸುತ್ತಿದ್ದರು’ ಎಂದಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಹಾರ್ಲೆ ಡೇವಿಡ್ಸನ್‌ ಬೈಕ್‌ ವ್ಯಾಪಾರದ ಉದಾಹರಣೆಯನ್ನು ಅವರು ನೀಡಿದ್ದಾರೆ.

‘ಭಾರತದಲ್ಲಿ ನಾವು ಹಾರ್ಲೆ ಡೇವಿಡ್ಸನ್‌ ಬೈಕ್‌ಗಳನ್ನು ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ, ಈ ದ್ವಿಚಕ್ರ ವಾಹನಗಳ ಮೇಲೆ ನವದೆಹಲಿಯು ಶೇ 200ರಷ್ಟು ತೆರಿಗೆ ವಿಧಿಸುತ್ತಿತ್ತು. ಇದರ ಪರಿಣಾಮ ಏನಾಯಿತೆಂದರೆ, ನಾವೇ ಭಾರತಕ್ಕೆ ಹೋಗಿ ಹಾರ್ಲೆ ಡೇವಿಡ್ಸನ್‌ನ ಘಟಕ ಆರಂಭಿಸಬೇಕಾಯಿತು’ ಎಂದಿದ್ದಾರೆ.

‘ಸುಂಕ ಸಾಯುವಂತೆ ಮಾಡುತ್ತಿದೆ’

‘ಭಾರತ ವಿಧಿಸುತ್ತಿರುವ ಹೆಚ್ಚಿನ ಸುಂಕವು ಅಮೆರಿಕನ್ನರನ್ನು ಸಾಯುವಂತೆ ಮಾಡುತ್ತಿದೆ’ ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ವ್ಯಾಪಾರ ಮತ್ತು ಸುಂಕದ ಕುರಿತಂತೆ ತಮ್ಮ ಆಡಳಿತದ ನೀತಿಗಳು ಬಿಗಿಯಾಗುತ್ತಿದ್ದಂತೆ ‘ಅಮೆರಿಕದ ಸರಕುಗಳಿಗೆ ಸುಂಕವನ್ನೇ ವಿಧಿಸಲ್ಲ ಎಂದು ಭಾರತ ಹೇಳುತ್ತಿದೆ’ ಎಂದಿದ್ದಾರೆ. ‘ಭಾರತವಷ್ಟೇ ಅಲ್ಲ ಚೀನಾ ಬ್ರೆಜಿಲ್‌ ಸಹ ಅತಿ ಹೆಚ್ಚಿನ ಸುಂಕ ವಿಧಿಸುವುದರೊಂದಿಗೆ ಅಮೆರಿಕನ್ನರನ್ನು ಸಾಯುವಂತೆ ಮಾಡುತ್ತಿವೆ’ ಎಂದು ‘ಸ್ಕಾಟ್‌ ಜೆನ್ನಿಂಗ್ಸ್‌ ರೇಡಿಯೊ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ‘ಸುಂಕವನ್ನು ಇತರ ದೇಶಗಳಿಗಿಂತ ನಾನು ಚೆನ್ನಾಗಿ ಅರ್ಥೈಸಿಕೊಂಡಿರುವೆ’ ಎಂದು ಹೇಳಿಕೊಂಡಿರುವ ಟ್ರಂಪ್‌ ‘ನಾವು ಆರ್ಥಿಕವಾಗಿ ಮತ್ತಷ್ಟು ಸಮರ್ಥರಾಗಲಿದ್ದೇವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.