ADVERTISEMENT

ಇರಾನ್‌ ಅತಿ ದೊಡ್ಡ ತಪ್ಪು ಮಾಡಿದೆ: ಟ್ರಂಪ್‌

ಅಮೆರಿಕದ ಡ್ರೋನ್‌ ಹೊಡೆದುರುಳಿಸಿದ್ದ ಇರಾನ್‌

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 20:10 IST
Last Updated 21 ಜೂನ್ 2019, 20:10 IST
   

ವಾಶಿಂಗ್ಟನ್‌: ಸ್ಟ್ರೈಟ್‌ ಆಫ್‌ ಹಾರ್ಮುಜ್‌ ಪ್ರದೇಶದಲ್ಲಿಅಮೆರಿಕದ ಬೇಹುಗಾರ(ಸ್ಪೈ)ಡ್ರೋನ್ ಒಂದನ್ನು ಹೊಡೆದುರುಳಿಸಿರುವ ಇರಾನ್‌ ನಡೆಯನ್ನು ಅಮೆರಿಕ ಅಧ್ಯಕ್ಷ ಟ್ರಂಪ್‌ ಟೀಕಿಸಿದ್ದು, ಇರಾನ್‌ ಅತಿ ದೊಡ್ಡ ತಪ್ಪು ಮಾಡಿದೆ ಎಂದಿದ್ದಾರೆ.

ಘಟನೆ ನಡೆದ ಬೆನ್ನಲ್ಲೇ ಶ್ವೇತಭವನದಲ್ಲಿ ಪ್ರಮುಖ ರಾಷ್ಟ್ರೀಯ ಭದ್ರತಾ ಅಧಿಕಾರಿಗಳ ಸಭೆ ನಡೆಸಿರುವ ಟ್ರಂಪ್‌, ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ‘ಇರಾನ್‌ ತಿಳಿದೂ ಈ ತಪ್ಪು ಮಾಡಿದೆ ಎಂದು ನಂಬಲು ನನಗೆ ಕಷ್ಟಸಾಧ್ಯ. ಡ್ರೋನ್‌ ಹೊಡೆದುರುಳಿಸಿದವರು ಯಾರೋ ಮೂರ್ಖನೇ ಇರಬೇಕು. ಮುಂದಿನ ಕ್ರಮಗಳ ಬಗ್ಗೆ ಶೀಘ್ರ ನಿಮಗೇ ತಿಳಿಯಲಿದೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

‘ಸಮುದ್ರದಲ್ಲಿಹಡಗುಗಳ ಮೇಲೆ ದಾಳಿಯಿಂದ ವಾಣಿಜ್ಯ ಉತ್ಪನ್ನಗಳ ಸಾಗಣೆಗೆ ಆತಂಕ ಸೃಷ್ಟಿಯಾಗಿದೆ. ಇದನ್ನು ನಿಯಂತ್ರಿಸಲು ಮುಂದಾಗಿರುವ ನಮ್ಮ ಸಾಮರ್ಥ್ಯ ಕುಗ್ಗಿಸಲು ಈ ದಾಳಿ ನಡೆಸಲಾಗಿದೆ’ ಎಂದು ವಾಯುಸೇನೆಯ ಲೆಫ್ಟಿನೆಂಟ್ ಜೋಸೆಫ್‌ ಗುಸ್ಟೆಲ್ಲಾ ತಿಳಿಸಿದ್ದಾರೆ.

ADVERTISEMENT

ದಾಳಿಗೆ ಮುಂದಾಗಿದ್ದ ಅಮೆರಿಕ: ಡ್ರೋನ್‌ ಹೊಡೆದುರುಳಿಸದ ಹಿನ್ನೆಲೆಯಲ್ಲಿ ಇರಾನ್‌ನ ಕೆಲ ರೆಡಾರ್‌, ಕ್ಷಿಪಣಿ ಸಂಗ್ರಹಗಳ ಮೇಲೆ ಗುರುವಾರ ಸಂಜೆಯೇದಾಳಿ ನಡೆಸಲು ಟ್ರಂಪ್‌ ಒಪ್ಪಿಗೆ ನೀಡಿ ಕೊನೇ ಕ್ಷಣದಲ್ಲಿ ರದ್ದುಗೊಳಿಸಿದ್ದರು ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ. ಈ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡಲು ಶ್ವೇತಭವನ ಮತ್ತು ಪೆಂಟಗನ್‌ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಟೈಮ್ಸ್‌ ತಿಳಿಸಿದೆ.

ಇತ್ತಡ್ರೋನ್‌ ಹೊಡೆದುರುಳಿಸಿರುವ ಪ್ರಕರಣವನ್ನು ವಿಶ್ವಸಂಸ್ಥೆಗೆ ಕೊಂಡೊಯ್ಯಲು ಇರಾನ್‌ ನಿರ್ಧರಿಸಿದೆ. ಡ್ರೋನ್‌ ಅಂತರರಾಷ್ಟ್ರೀಯ ವಾಯುಪ್ರದೇಶದಲ್ಲಿತ್ತು ಎಂದು ಅಮೆರಿಕ ವಾದಿಸುತ್ತಿದ್ದು, ಇದನ್ನು ಸುಳ್ಳು ಎಂದು ಸಾಬೀತುಪಡಿಸಲು ಇರಾನ್‌ ಈ ಹೆಜ್ಜೆ ಇರಿಸಿದೆ. ‘ಬೋಯಿಂಗ್‌ 737 ಗಿಂತ ದೊಡ್ಡದಾದ ರೆಕ್ಕೆ ಇದ್ದ ಡ್ರೋನ್‌ ಎಚ್ಚರಿಕೆ ನೀಡಿದರೂ ಇರಾನ್‌ ವಾಯುಪ್ರದೇಶ ಪ್ರವೇಶಿಸಿತ್ತು. ಸ್ವಯಂರಕ್ಷಣೆ ಹಿನ್ನೆಲೆಯಲ್ಲಿ ಡ್ರೋನ್‌ ಹೊಡೆದುರುಳಿಸಲಾಯಿತು’ಎಂದು ಇರಾನ್‌ನ ವಿಶ್ವಸಂಸ್ಥೆ ರಾಯಭಾರಿ ಮಜಿದ್ ತಖ್ತ್‌ ರವಾಂಚಿ ಪತ್ರ ಮುಖೇನ ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿಗೆ ತಿಳಿಸಿದ್ದಾರೆ.

ವಿಮಾನ ಹಾರಾಟಕ್ಕೆ ನಿರ್ಬಂಧ
ದುಬೈ: ಡ್ರೋನ್‌ ಮೇಲಿನ ದಾಳಿ ಹಿನ್ನೆಲೆಯಲ್ಲಿ ‌ಪರ್ಷಿಯನ್‌ ಗಲ್ಫ್‌ ಮತ್ತು ಗಲ್ಫ್‌ ಆಫ್‌ ಓಮನ್‌ ವಾಯುಪ್ರದೇಶದಲ್ಲಿ ಹಾರಾಡದಂತೆ ಅಮೆರಿಕ ನೋಂದಾಯಿತ ವಿಮಾನಗಳಿಗೆ ಶುಕ್ರವಾರ ಅಮೆರಿಕ ಸೂಚಿಸಿದೆ. ಹೀಗಾಗಿ ಪ್ರಮುಖ ಏರ್‌ಲೈನ್‌ಗಳು ತಮ್ಮ ವಿಮಾನಗಳ ಪಥವನ್ನು ಬದಲಾಯಿಸಿದೆ.

ಗುರುವಾರ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ ಅಮೆರಿಕ ನೌಕಾದಳದ ಅಂದಾಜು ₹696 ಕೋಟಿ ಮೌಲ್ಯದಆರ್‌ಕ್ಯೂ ‘4ಎ ಗ್ಲೋಬಲ್‌ ಹಾಕ್‌’ ಮಾನವರಹಿತ ವಿಮಾನವನ್ನು ಹೊಡೆದುರುಳಿಸಿತ್ತು. ವಾಣಿಜ್ಯ ವಿಮಾನಗಳನ್ನು ಇರಾನ್‌ ಸೇನಾ ವಿಮಾನ ಎಂದು ಭಾವಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಸೇನಾ ಚಟುವಟಿಕೆ ಹೆಚ್ಚಾಗಿದೆ. ಇದರಿಂದ ವಿಮಾನ ಕಾರ್ಯಾಚರಣೆಗೆ ಹೆಚ್ಚಿನ ಅಪಾಯವಿದೆ. ಹೀಗಾಗಿ ಈ ಪ್ರದೇಶದಲ್ಲಿ ಹಾರಾಡದಂತೆ ಫೆಡರಲ್‌ ಏವಿಯೇಷನ್‌ ಅಡ್ಮಿನಿಷ್ಟ್ರೇಷನ್‌(ಎಫ್‌ಎಎ)ಸೂಚಿಸಿದೆ.

ಬ್ರಿಟಿಷ್‌ ಏರ್‌ವೇಸ್‌, ಕ್ವಾಂಟಾಸ್‌, ಸಿಂಗಾಪುರ್‌ ಏರ್‌ಲೈನ್ಸ್‌ ಸೇರಿ ಹಲವು ಏರ್‌ಲೈನ್ಸ್‌ಗಳು ಸ್ಟ್ರೈಟ್‌ ಆಫ್‌ ಹಾರ್ಮುಜ್‌ ವಾಯುಪ್ರದೇಶದಲ್ಲಿ ಸಂಚರಿಸುವ ವಿಮಾನಗಳನ್ನು ರದ್ದುಗೊಳಿಸಿದೆ. ನ್ಯೂಯಾರ್ಕ್‌–ಮುಂಬೈ ಸೇವೆಯನ್ನು ರದ್ದುಗೊಳಿಸಲಾಗಿದೆ ಎಂದು ಯುನೈಟೆಡ್‌ ಏರ್‌ಲೈನ್ಸ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.