ADVERTISEMENT

‘ಎಫ್‌–35’ ಖರೀದಿ ಸನ್ನಿಹಿತ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2025, 15:27 IST
Last Updated 14 ಫೆಬ್ರುವರಿ 2025, 15:27 IST
<div class="paragraphs"><p>ಎಫ್‌–35 ಯುದ್ಧವಿಮಾನ&nbsp; </p></div>

ಎಫ್‌–35 ಯುದ್ಧವಿಮಾನ 

   

 –ಪಿಟಿಐ ಚಿತ್ರ 

ವಾಷಿಂಗ್ಟನ್: ಟ್ಯಾಂಕ್‌ ನಿರೋಧಕ, ನಿರ್ದೇಶಿತ ಕ್ಷಿಪಣಿ ವ್ಯವಸ್ಥೆ ‘ಜಾವೆಲಿನ್’ ಹಾಗೂ ಯುದ್ಧವಾಹನಗಳಾದ ‘ಸ್ಟೈಕರ್’ಗಳನ್ನು ಜಂಟಿಯಾಗಿ ಉತ್ಪಾದಿಸುವುದು ಸೇರಿದಂತೆ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿ ಖರೀದಿ ಹಾಗೂ ಪಾಲುದಾರಿಕೆಗೆ ಭಾರತ ಮತ್ತು ಅಮೆರಿಕ ಸಮ್ಮತಿಸಿವೆ.

ADVERTISEMENT

‘ಎಫ್‌–35’ ಯುದ್ಧವಿಮಾನಗಳ ಪೂರೈಕೆಗೆ ಇದ್ದ ಅಡೆತಡೆಗಳ ನಿವಾರಣೆಗೂ ಅಮೆರಿಕ ಕ್ರಮ ಕೈಗೊಂಡಿದೆ. 

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೊಂದಿಗೆ ನಡೆಸಿದ ಮಾತುಕತೆ ವೇಳೆ, ಪ್ರಮುಖ ಶಸ್ತ್ರಾಸ್ತ್ರಗಳ ಖರೀದಿ ಹಾಗೂ ಜಂಟಿಯಾಗಿ ತಯಾರಿಸುವ ಕುರಿತು ಚರ್ಚಿಸಿದ್ದಾರೆ.

ಹಿಂದೂ ಮಹಾಸಾಗರ ಪ್ರದೇಶ ಹಾಗೂ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ) ಉದ್ದಕ್ಕೂ ಚೀನಾ ತನ್ನ ಸೇನಾ ಪ್ರಾಬಲ್ಯ ಹೆಚ್ಚಿಸುತ್ತಿದೆ. ಈ ಕಾರಣಕ್ಕೆ, ಗಡಿ ಉದ್ದಕ್ಕೂ ಕಣ್ಗಾವಲು ಹಾಗೂ ಸಶಸ್ತ್ರ ಪಡೆಗಳ ಸಾಮರ್ಥ್ಯ ಹೆಚ್ಚಿಸುವ ಭಾಗವಾಗಿ ಭಾರತವು ಇಂತಹ ನಿರ್ಧಾರ ಕೈಗೊಂಡಿದೆ.

5ನೇ ತಲೆಮಾರಿನ, ಶಕ್ತಿಶಾಲಿ ‘ಎಫ್‌–35’ ಯುದ್ಧವಿಮಾನಗಳನ್ನು ಭಾರತಕ್ಕೆ ಪೂರೈಸಲು ನೆರವಾಗುವಂತೆ ಸಂಬಂಧಪಟ್ಟ ನೀತಿಯನ್ನು ಪರಿಶೀಲಿಸುವುದಾಗಿಯೂ ಟ್ರಂಪ್‌ ಹೇಳಿದ್ದಾರೆ.

‘ಎಫ್‌–35’ ಯುದ್ಧವಿಮಾನಗಳು ರಹಸ್ಯವಾಗಿ ಕಾರ್ಯಾಚರಣೆ ನಡೆಸಲಿದ್ದು, ವಿಶ್ವದಲ್ಲಿಯೇ ಅತ್ಯಂತ ಮಾರಕ ಎಂದೇ ಹೆಸರಾಗಿವೆ.

‘ಈ ಯುದ್ಧವಿಮಾನಗಳ ಖರೀದಿ ವಿಚಾರವು ಪ್ರಸ್ತಾವದ ಹಂತದಲ್ಲಿದೆ. ಖರೀದಿಗೆ ಸಂಬಂಧಿಸಿ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ’ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ.

ನೌಕಾಪಡೆಗಾಗಿ ಹೆಚ್ಚುವರಿಯಾಗಿ ಆರು ‘ಪಿ–8ಐ’ ಕಣ್ಗಾವಲು ಯುದ್ಧವಿಮಾನಗಳನ್ನು  ಖರೀದಿಸಲು  ಭಾರತ ಉದ್ಧೇಶಿಸಿದೆ. ಇವು, ದೀರ್ಘವ್ಯಾಪ್ತಿ ಕಡಲಗಡಿ ಕಣ್ಗಾವಲು ಹಾಗೂ ಜಲಾಂತರ್ಗಾಮಿ ನಿರೋಧಕ ವ್ಯವಸ್ಥೆಯಾಗಿದೆ. ಈ ಕುರಿತು ಟ್ರಂಪ್‌ ಹಾಗೂ ಮೋದಿ ಚರ್ಚಿಸಿದರು.

ನೌಕಾಪಡೆಯು ಈಗಾಗಲೇ 11 ‘ಪಿ–8ಐ’ ಯುದ್ಧವಿಮಾನಗಳನ್ನು ಹೊಂದಿದೆ.

‘ಟ್ಯಾಂಕ್‌ ನಿರೋಧಕ ಕ್ಷಿಪಣಿ ವ್ಯವಸ್ಥೆ ‘ಜಾವೆಲಿನ್‌’ ಅನ್ನು ಜಂಟಿಯಾಗಿ ಉತ್ಪಾದಿಸಲು ನಿರ್ಧರಿಸಲಾಗಿದೆ. ಭಾರತದ ಸೇನೆಗಾಗಿ ‘ಸ್ಟ್ರೈಕರ್’ ಯುದ್ಧವಾಹನಗಳನ್ನು ಸಹ ಜಂಟಿಯಾಗಿ ಉತ್ಪಾದಿಸಲು ಉದ್ದೇಶಿಸಲಾಗಿದೆ’ ಎಂದು ಉಭಯ ನಾಯಕರು ಸಭೆ ಬಳಿಕ ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಸಭೆಯ ಪ್ರಮುಖ ಅಂಶಗಳು

* ಬಾಹ್ಯಾಕಾಶ, ವಾಯುಪ್ರದೇಶ ರಕ್ಷಣೆ, ಕ್ಷಿಪಣಿ ವ್ಯವಸ್ಥೆ, ಕಡಲ ಗಡಿಯಲ್ಲಿ ಕಣ್ಗಾವಲು ಹಾಗೂ ಆಳ ಸಮುದ್ರದಲ್ಲಿ ಕಾರ್ಯಾಚರಣೆಗೆ ಅಗತ್ಯವಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರ ವೃದ್ಧಿಗೆ ಸಮ್ಮತಿ

* ರಕ್ಷಣಾ ಕ್ಷೇತ್ರದಲ್ಲಿ ಜಂಟಿಯಾಗಿ ಕಾರ್ಯಾಚರಣೆಗೆ ಅವಕಾಶ, ಶಸ್ತ್ರಾಸ್ತ್ರಗಳ ಸಾಗಣೆ, ದುರಸ್ತಿ, ನಿರ್ವಹಣೆಯಲ್ಲಿ ಸಹಕಾರಕ್ಕೆ ಒತ್ತು

* ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿ ಹೊಸದಾಗಿ 10 ವರ್ಷಗಳ ಪಾಲುದಾರಿಕೆ

* ಕಡಲ ಗಡಿ ರಕ್ಷಣೆಗೆ ಸಂಬಂಧಿಸಿ ಸುಸಜ್ಜಿತ ರಕ್ಷಣಾ ವ್ಯವಸ್ಥೆ ಅಭಿವೃದ್ಧಿ, ಕೃತಕಬುದ್ಧಿಮತ್ತೆ ಆಧಾರಿತ ‘ಮಾನವರಹಿತ ವೈಮಾನಿಕ ವಾಹನ’ (ಯುಎಎಸ್‌) ನಿರೋಧಕ ವ್ಯವಸ್ಥೆ ಅಭಿವೃದ್ಧಿಗಾಗಿ ಅಂದುರಿಲ್ ಇಂಡಸ್ಟ್ರೀಜ್‌ ಹಾಗೂ ಮಹೀಂದ್ರ ಗ್ರೂಪ್‌ ನಡುವೆ ಪಾಲುದಾರಿಕೆ

* ವಿವಿಧ ಶಸ್ತ್ರಾಸ್ತ್ರಗಳ ಜಂಟಿ ಉತ್ಪಾದನೆಗಾಗಿ ಅಮೆರಿಕದ ‘ಎಲ್‌3 ಹ್ಯಾರಿಸ್‌’ ಹಾಗೂ ಭಾರತ ಎಲೆಕ್ಟ್ರಾನಿಕ್ಸ್‌ ನಡುವೆ ಪಾಲುದಾರಿಕೆ 

ರಕ್ಷಣಾ ಕ್ಷೇತ್ರದಲ್ಲಿ ಭಾರತ ಮತ್ತು ಅಮೆರಿಕ ನಂಬಿಕಸ್ಥ ಪಾಲುದಾರ ದೇಶಗಳಾಗಿವೆ. ಜಂಟಿ ಅಭಿವೃದ್ಧಿ ಜಂಟಿ ಉತ್ಪಾದನೆ ಮತ್ತು ತಂತ್ರಜ್ಞಾನ ವರ್ಗಾವಣೆ ನೀತಿಯಡಿ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ
ನರೇಂದ್ರ ಮೋದಿ ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.