
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: 'ನಾನು ನೊಬೆಲ್ ಪಡೆದಿಲ್ಲ. ಶಾಂತಿ ಬಗ್ಗೆಯಷ್ಟೇ ಆಲೋಚಿಸುವ ಅಗತ್ಯವಿಲ್ಲ'
ಈ ರೀತಿ ಉಲ್ಲೇಖಿಸಿರುವ ಪತ್ರವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾರ್ವೆ ಪ್ರಧಾನಿ ಜೋನಸ್ ಗಹ್ರ್ ಸ್ಟೋರೆ ಅವರಿಗೆ ಬರೆದಿದ್ದಾರೆ. ಆ ಮೂಲಕ ಅವರು, ಗ್ರೀನ್‌ಲ್ಯಾಂಡ್ ಮೇಲೆ ನಿಯಂತ್ರಣ ಸಾಧಿಸುವ ಮಹದಾಸೆಯನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
2025ನೇ ಸಾಲಿನ ನೊಬೆಲ್ ಪುರಸ್ಕಾರಕ್ಕೆ ಭಾಜನರಾಗಿರುವ ವೆನೆಜುವೆಲಾದ ಮಾರಿಯಾ ಕೊರಿನಾ ಮಚಾದೊ ಅವರು, ಇತ್ತೀಚೆಗೆ ಟ್ರಂಪ್ ಅವರನ್ನು ಶ್ವೇತಭವನದಲ್ಲಿ ಭೇಟಿಯಾಗಿದ್ದರು. ಆ ವೇಳೆ, ತಮಗೆ ದೊರೆತಿರುವ ಪುರಸ್ಕಾರವನ್ನು ಟ್ರಂಪ್ ಅವರಿಗೆ ಸಮರ್ಪಿಸಿದ್ದರು. ಜೊತೆಗೆ, ಅಮೆರಿಕದ ಅಧ್ಯಕ್ಷರೊಂದಿಗೆ ಅದನ್ನು ಹಂಚಿಕೊಳ್ಳುವ ಇರಾದೆ ವ್ಯಕ್ತಪಡಿಸಿದ್ದರು.
ಆದರೆ, ಹಾಗೆ ಪುರಸ್ಕಾರವನ್ನು ಮತ್ತೊಬ್ಬರಿಗೆ ವರ್ಗಾಯಿಸಲು ಅಥವಾ ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಆಗದು ಎಂಬುದಾಗಿ ನಾರ್ವೆಯ ನೊಬೆಲ್ ಸಮಿತಿ ಸ್ಪಷ್ಟವಾಗಿ ಹೇಳಿತ್ತು.
'ಒಮ್ಮೆ ಪುರಸ್ಕಾರ ಘೋಷಣೆಯಾದರೆ, ಅದೇ ಅಂತಿಮ. ಹೆಸರು ಬದಲಿಸಲು ಅಥವಾ ಪುರಸ್ಕಾರವನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ' ಎಂದು ತಿಳಿಸಿತ್ತು.
ಹೊಸ ವರ್ಷದ ಆರಂಭದಲ್ಲೇ ವೆನೆಜುವೆಲಾ ಮೇಲೆ ವೈಮಾನಿಕ ದಾಳಿ ನಡೆಸಿದ್ದ ಅಮೆರಿಕ ಸೇನಾ ಪಡೆಗಳು, ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿದಿವೆ. ಮಾದಕವಸ್ತು ಕಳ್ಳಸಾಗಣೆಯ ಆರೋಪವನ್ನು ಮಡೂರೊ ಅವರ ಮೇಲೆ ಅಮೆರಿಕ ಹೊರಿಸಿದೆ.
ಟ್ರಂಪ್ ಪತ್ರಕ್ಕೆ ಸಂಬಂಧಿಸಿದಂತೆ ನಾರ್ವೆ ಪ್ರಧಾನಿ ಕಚೇರಿಯಿಂದ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಗ್ರೀನ್‌ಲ್ಯಾಂಡ್ ವಶಕ್ಕೆ ಪಡೆಯುವ ನಿರ್ಧಾರವನ್ನು ಬೆಂಬಲಿಸದ ರಾಷ್ಟ್ರಗಳ ಸರಕುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಟ್ರಂಪ್ ಸರ್ಕಾರದ ಘೋಷಣೆಯನ್ನು ನಾರ್ವೆ ಪ್ರಧಾನಿ ಟೀಕಿಸಿದ್ದರು. 'ಇದನ್ನು ಒಪ್ಪಲಾಗದು' ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.