ನವದೆಹಲಿ/ ವಾಷಿಂಗ್ಟನ್: ಭಾರತ ಮತ್ತು ರಷ್ಯಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕಿಸ್ತಾನದ ಜತೆ ಗುರುವಾರ ಹೊಸ ವ್ಯಾಪಾರ ಒಪ್ಪಂದವನ್ನು ಘೋಷಿಸಿದ್ದಾರೆ.
ಭಾರತದಿಂದ ಅಮೆರಿಕಕ್ಕೆ ಆಮದಾಗುವ ಎಲ್ಲ ಸರಕುಗಳ ಮೇಲೆ ಶೇಕಡ 25ರಷ್ಟು ಸುಂಕ ವಿಧಿಸಲಾಗುತ್ತದೆ ಎಂದು ಟ್ರಂಪ್ ಬುಧವಾರ ಪ್ರಕಟಿಸಿದ್ದರು. ಸುಂಕ ಪ್ರಹಾರದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಭಾರತದ ಆರ್ಥಿಕತೆ ಸತ್ತಿದೆ ಎಂದು ‘ಟ್ರುಥ್ ಸೋಷಿಯಲ್’ ಸಾಮಾಜಿಕ ಮಾಧ್ಯಮದಲ್ಲಿ ವ್ಯಂಗ್ಯವಾಡಿದ್ದಾರೆ.
ಪಾಕಿಸ್ತಾನದಲ್ಲಿ ‘ಬೃಹತ್ ತೈಲ ನಿಕ್ಷೇಪ’ಗಳನ್ನು ಅಭಿವೃದ್ಧಿಪಡಿಸಲು ಅಮೆರಿಕ ನೆರವಾಗಲಿದೆ ಎಂದೂ ಹೇಳಿಕೊಂಡಿದ್ದಾರೆ.
‘ಆಪರೇಷನ್ ಸಿಂಧೂರ’ ಸಮಯದಲ್ಲಿ ಭಾರತ– ಪಾಕಿಸ್ತಾನ ಸಂಘರ್ಷವನ್ನು ನಿಲ್ಲಿಸಲು ವಿದೇಶದ ಯಾವುದೇ ನಾಯಕರು ಭಾರತವನ್ನು ಕೇಳಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಲೋಕಸಭೆಗೆ ತಿಳಿಸಿದ್ದರು. ಅದರ ಮರುದಿನವೇ ಟ್ರಂಪ್, ಭಾರತ ವಿರುದ್ದ ವಾಗ್ದಾಳಿ ಆರಂಭಿಸಿದ್ದಾರೆ. ರಷ್ಯಾದಿಂದ ರಕ್ಷಣಾ ಸಾಮಗ್ರಿ ಮತ್ತು ತೈಲ ಖರೀದಿಸಿದ್ದಕ್ಕಾಗಿ ಟ್ರಂಪ್ ಅವರು ಇದಕ್ಕೂ ಮುನ್ನ ಭಾರತವನ್ನು ಟೀಕಿಸಿದ್ದರು.
‘ನಾವು ಪಾಕಿಸ್ತಾನದ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ. ಆ ಮೂಲಕ ಪಾಕಿಸ್ತಾನ ಮತ್ತು ಅಮೆರಿಕವು ಬೃಹತ್ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸಲು ಒಟ್ಟಾಗಿ ಕೆಲಸ ಮಾಡಲಿವೆ. ಈ ಪಾಲುದಾರಿಕೆಯನ್ನು ಮುನ್ನಡೆಸುವ ತೈಲ ಕಂಪನಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಯಾರಿಗೆ ಗೊತ್ತು, ಬಹುಶಃ ಮುಂದೊಂದು ದಿನ ಅವರು (ಪಾಕಿಸ್ತಾನ) ಭಾರತಕ್ಕೆ ತೈಲ ಮಾರಾಟ ಮಾಡಬಹುದು’ ಎಂದು ಟ್ರಂಪ್ ಬುಧವಾರ ರಾತ್ರಿ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಮೆಡ್ವೆಡೆವ್‌ಗೆ ತಿರುಗೇಟು: ರಷ್ಯಾದ ಮಾಜಿ ಅಧ್ಯಕ್ಷ ದಿಮಿತ್ರಿ ಮೆಡ್ವೆಡೆವ್ ವಿರುದ್ಧವೂ ಟ್ರಂಪ್ ಆಕ್ರೋಶ ಹೊರಹಾಕಿದ್ದಾರೆ. ‘ಉಕ್ರೇನ್ ಜತೆಗಿನ ಯುದ್ಧವನ್ನು ಕೊನೆಗೊಳಿಸಲು ಅಮೆರಿಕವು ವಿಧಿಸುತ್ತಿರುವ ಪ್ರತಿಯೊಂದು ಗಡುವು ಕೂಡಾ, ರಷ್ಯಾ– ಅಮೆರಿಕ ನಡುವಿನ ಯುದ್ಧದತ್ತ ಇಡುತ್ತಿರುವ ಹೆಜ್ಜೆ’ ಎಂದು ಮೆಡ್ವೆಡೆವ್ ಬುಧವಾರ ಹೇಳಿದ್ದರು.
‘ಅಧ್ಯಕ್ಷರಾಗಿದ್ದಾಗ ಸಂಪೂರ್ಣ ವಿಫಲರಾಗಿದ್ದ ಮೆಡ್ವೆಡೆವ್ ತಾವು ಈಗಲೂ ಅಧ್ಯಕ್ಷರೆಂದು ಭಾವಿಸಿದ್ದಾರೆ. ನಾಲಿಗೆಯ ಮೇಲೆ ಹಿಡಿತ ಇಟ್ಟುಕೊಳ್ಳುವಂತೆ ಅವರಿಗೆ ಹೇಳುತ್ತಿದ್ದೇನೆ. ಅವರು ಅಪಾಯವನ್ನು ಆಹ್ವಾನಿಸುತ್ತಿದ್ದಾರೆ’ ಎಂದು ಟ್ರಂಪ್ ಹರಿಹಾಯ್ದಿದ್ದಾರೆ.
ಭಾರತವು ರಷ್ಯಾ ಜತೆ ಸೇರಿಕೊಂಡು ಏನು ಮಾಡುತ್ತಿದೆ ಎಂಬುದಕ್ಕೆ ನಾವು ತಲೆಕೆಡಿಸಿಕೊಂಡಿಲ್ಲ. ಎರಡೂ ದೇಶಗಳು ತಮ್ಮ ‘ಸತ್ತ’ ಆರ್ಥಿಕತೆಯನ್ನು ಜತೆಯಾಗಿ ಪಾತಾಳಕ್ಕೆ ಕೊಂಡೊಯ್ಯಲಿ
ನಾವು ಭಾರತದೊಂದಿಗೆ ಅತೀ ಕಡಿಮೆ ವ್ಯಾಪಾರ ಸಂಬಂಧ ಹೊಂದಿದ್ದೇವೆ. ಭಾರತವು ವಿಶ್ವದಲ್ಲೇ ಅಧಿಕ ಸುಂಕ ವಿಧಿಸುವ ದೇಶಗಳಲ್ಲೊಂದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.