ವಾಷಿಂಗ್ಟನ್: ಸರ್ಕಾರಿ ಸ್ವಾಮ್ಯದ ಹೂಡಿಕೆ ನಿಧಿಯೊಂದನ್ನು ಆರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸುವ ಕಾರ್ಯಾದೇಶಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಸಹಿ ಮಾಡಿದ್ದಾರೆ.
ಈ ನಿಧಿಯು ಚೀನಾ ಮೂಲದ ಟಿಕ್‌ಟಾಕ್ ಕಂಪನಿಯಲ್ಲಿ ಒಂದಿಷ್ಟು ಷೇರು ಪಾಲನ್ನು ತನ್ನದಾಗಿಸಿಕೊಳ್ಳಬಹುದು ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕದಲ್ಲಿ ಪಾಲುದಾರರನ್ನು ಅಥವಾ ಖರೀದಿದಾರರನ್ನು ಕಂಡುಕೊಳ್ಳಲು ಏಪ್ರಿಲ್ ಆರಂಭದವರೆಗೆ ಅವಕಾಶ ಕಲ್ಪಿಸಿ ಟ್ರಂಪ್ ಅವರು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಟಿಕ್‌ಟಾಕ್‌ನಲ್ಲಿ ಅಮೆರಿಕವೇ ಶೇಕಡ 50ರಷ್ಟು ಪಾಲು ಹೊಂದಬಹುದು ಎಂದು ಅವರು ಹೇಳಿದ್ದಾರೆ.
ಅಮೆರಿಕದ ಹೊಸ ಹೂಡಿಕೆ ನಿಧಿಯ ಮೂಲಕ ಟಿಕ್‌ಟಾಕ್‌ನಲ್ಲಿ ಪಾಲು ಖರೀದಿಸಬಹುದು ಎಂದು ಅವರು ಸೋಮವಾರ ಹೇಳಿದ್ದಾರೆ. ಇತರ ಹಲವು ದೇಶಗಳು ಇಂತಹ ಹೂಡಿಕೆ ನಿಧಿಗಳನ್ನು ಹೊಂದಿವೆ. ಅಮೆರಿಕದ ನಿಧಿಯು ಮುಂದಿನ ದಿನಗಳಲ್ಲಿ ಸೌದಿ ಅರೇಬಿಯಾದ ಹೂಡಿಕೆ ನಿಧಿಯ ಗಾತ್ರಕ್ಕೆ ಬೆಳೆಯಬಹುದು ಎಂದು ಟ್ರಂಪ್ ಆಶಯ ವ್ಯಕ್ತಪಡಿಸಿದ್ದಾರೆ.
ಹೂಡಿಕೆ ನಿಧಿ ಆರಂಭಿಸಲು ಅಗತ್ಯವಿರುವ ಸಿದ್ಧತೆಗಳನ್ನು ನಡೆಸುವ ಹೊಣೆಯನ್ನು ಟ್ರಂಪ್ ಅವರು ಸಚಿವರಾದ ಸ್ಕಾಟ್ ಬೆಸೆಂಟ್ ಮತ್ತು ಹೊವಾರ್ಡ್ ಲುಟ್ನಿಕ್ ಅವರಿಗೆ ವಹಿಸಿದ್ದಾರೆ.
ಸುಂಕ ಕ್ರಮಕ್ಕೆ ತಡೆ: ಮೆಕ್ಸಿಕೊ ಮತ್ತು ಕೆನಡಾ ದೇಶಗಳ ಉತ್ಪನ್ನಗಳ ಮೇಲೆ ಶೇಕಡ 25ರಷ್ಟು ಸುಂಕ ವಿಧಿಸುವ ಕ್ರಮವನ್ನು ಅಧ್ಯಕ್ಷ ಟ್ರಂಪ್ ಅವರು ಒಂದು ತಿಂಗಳ ಅವಧಿಗೆ ತಡೆಹಿಡಿದಿದ್ದಾರೆ.
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಮೆಕ್ಸಿಕೊ ಅಧ್ಯಕ್ಷೆ ಕ್ಲಾಡಿಯಾ ಶೈನ್‌ಬಾಮ್ ಅವರ ಜೊತೆ ನಡೆದ ಪ್ರತ್ಯೇಕ ಮಾತುಕತೆಗಳ ನಂತರ ಟ್ರಂಪ್ ಅವರು ಈ ತೀರ್ಮಾನ ಕೈಗೊಂಡಿದ್ದಾರೆ. ಆದರೆ ಚೀನಾದ ಉತ್ಪನ್ನಗಳ ಮೇಲೆ ವಿಧಿಸಿರುವ ಸುಂಕದ ವಿಚಾರವಾಗಿ ಯಾವುದೇ ಬದಲಾವಣೆ ಇಲ್ಲ.
ಅಂತರರಾಷ್ಟ್ರೀಯ ಅಭಿವೃದ್ಧಿಗಾಗಿನ ಅಮೆರಿಕದ ಏಜೆನ್ಸಿಯನ್ನು (ಯುಎಸ್‌ಎಐಡಿ) ಸ್ಥಗಿತಗೊಳಿಸಲು ಟ್ರಂಪ್ ಅವರು ಒಪ್ಪಿದ್ದಾರೆ ಎಂದು ಉದ್ಯಮಿ ಎಲಾನ್ ಮಸ್ಕ್ ಅವರು ಪ್ರಕಟಿಸಿದ ನಂತರ, ಏಜೆನ್ಸಿಯ ಸಿಬ್ಬಂದಿಗೆ ಪ್ರಧಾನ ಕಚೇರಿಗೆ ಬರಬಾರದು ಎಂದು ಸೂಚನೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.