ಲಂಡನ್ (ರಾಯಿಟರ್ಸ್): ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ನಡುವೆ ಇದೇ 15ರಂದು ನಡೆಯಲಿರುವ ಮಾತುಕತೆಯು ಜಾಗತಿಕ ಮಹತ್ವ ಪಡೆದುಕೊಂಡಿದೆ. ಈ ಬೆಳವಣಿಗೆಯನ್ನು ಕಚ್ಚಾತೈಲ ಬೆಲೆ, ಹೆಚ್ಚುವರಿ ಸುಂಕ, ಮಾರುಕಟ್ಟೆಯ ಸೂಚ್ಯಂಕಗಳ ಏರಿಳಿತ ಸೇರಿದಂತೆ ನಾನಾ ಆಯಾಮಗಳಿಂದ ವಿಶ್ಲೇಷಿಸಲಾಗುತ್ತಿದೆ.
ರಷ್ಯಾ ಮತ್ತು ಅಮೆರಿಕ ಅಧ್ಯಕ್ಷರ ಬಹುನಿರೀಕ್ಷಿತ ಸಭೆ ಇದೇ 15ರಂದು (ಶುಕ್ರವಾರ) ಅಮೆರಿಕದ ಅಲಾಸ್ಕಾದಲ್ಲಿ ನಿಗದಿಯಾಗಿದ್ದು, ಉಕ್ರೇನ್, ಚೀನಾ, ಭಾರತ ಸೇರಿದಂತೆ ವಿವಿಧ ದೇಶಗಳು ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ರಷ್ಯಾ– ಉಕ್ರೇನ್ ಕದನವನ್ನು ಕೊನೆಗಾಣಿಸುವ ಅಥವಾ ಕದನ ವಿರಾಮ ಘೋಷಿಸುವ ನಿಟ್ಟಿನಲ್ಲಿ ಮಾತುಕತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಇದರ ಬೆನ್ನಲ್ಲೇ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ ಎರಡು ಸೆಂಟ್‌ಗಳಷ್ಟು ಇಳಿಕೆ ಕಂಡಿದೆ ಎನ್ನಲಾಗುತ್ತಿದೆ.
ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತದ ಮೇಲೆ ಹೆಚ್ಚುವರಿಯಾಗಿ ಶೇ 25ರಷ್ಟು ಸುಂಕವನ್ನು ಈಗಾಗಲೇ ಅಮೆರಿಕ ವಿಧಿಸಿದೆ. ಈ ಮೂಲಕ ಅದು ರಷ್ಯಾದ ಮೇಲೂ ಒತ್ತಡ ಹೇರುತ್ತಿದೆ. ಜತೆಗೆ ಚೀನಾ ಮೇಲೂ ಹೆಚ್ಚುವರಿ ಸುಂಕ ವಿಧಿಸುವ ಕುರಿತು ಚರ್ಚೆ ನಡೆಸುತ್ತಿದೆ.
ಟ್ರಂಪ್– ಪುಟಿನ್ ಮಾತುಕತೆ ವೇಳೆ ರಷ್ಯಾ– ಉಕ್ರೇನ್ ನಡುವೆ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಯಾವುದೇ ಒಪ್ಪಂದ ಏರ್ಪಟ್ಟರೂ, ಭಾರತ ಮತ್ತು ಚೀನಾ ನಿರಾಳವಾಗಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಂದು ವೇಳೆ ಶಾಂತಿ ಒಪ್ಪಂದ ಏರ್ಪಡದೇ ಇದ್ದರೆ ಇನ್ನಷ್ಟು ಸಂಕಷ್ಟ ಎದುರಾಗಬಹುದು ಎಂದೂ ವ್ಯಾಖ್ಯಾನಿಸಲಾಗುತ್ತಿದೆ.
ಕದನ ವಿರಾಮ ಅಥವಾ ಶಾಂತಿ ಒಪ್ಪಂದ ಏರ್ಪಟ್ಟರೆ, ಹೆಚ್ಚುವರಿ ಸುಂಕದಿಂದ ಭಾರತಕ್ಕೆ ವಿನಾಯಿತಿ ದೊರೆಯಬಹುದು ಎಂದು ‘ಕಾಮರ್ಸ್‌ಬ್ಯಾಂಕ್’ ವಿಶ್ಲೇಷಿಸಿದೆ.
‘ಮಾತುಕತೆ ಫಲಪ್ರದ ಆಗದಿದ್ದರೆ, ರಷ್ಯಾದಿಂದ ತೈಲ ಖರೀದಿಸುತ್ತಿರುವ ಚೀನಾ ಸೇರಿದಂತೆ ಇತರ ದೇಶಗಳ ಮೇಲೆ ಹೆಚ್ಚುವರಿ ನಿರ್ಬಂಧಗಳನ್ನು ಅಮೆರಿಕ ಹೇರಬಹುದು’ ಎಂದೂ ಅದು ವಿವರಿಸಿದೆ.
ಚೀನಾಗೆ ನ.10ರವರೆಗೆ ವಿನಾಯಿತಿ: ರಷ್ಯಾದಿಂದ ತೈಲ ಖರೀದಿಸುತ್ತಿರುವ ಚೀನಾದ ವಿರುದ್ಧ ಅಧಿಕ ಸುಂಕ ವಿಧಿಸುವ ಕ್ರಮವನ್ನು ತಡೆಹಿಡಿದಿರುವ ಅಮೆರಿಕ, ನವೆಂಬರ್ 10ರವರೆಗೆ ವಿರಾಮ ನೀಡಿದೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗಿನ ಸಭೆ ಸಂದರ್ಭದಲ್ಲಿ ಐರೋಪ್ಯ ಒಕ್ಕೂಟದ ಭದ್ರತಾ ಹಿತಾಸಕ್ತಿಯನ್ನು ಸಮರ್ಥಿಸಿ ಮಾತನಾಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಐರೋಪ್ಯ ಒಕ್ಕೂಟದ ನಾಯಕರು ಮಂಗಳವಾರ ಮನವಿ ಮಾಡಿದ್ದಾರೆ.
ಈ ವಾರ ನಡೆಯಲಿರುವ ಸಭೆಯಲ್ಲಿ ಉಕ್ರೇನ್ ಭಾಗಿಯಾಗುವುದೇ, ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಯುದ್ಧವನ್ನು ನಿಲ್ಲಿಸುವ ವಿಚಾರದಲ್ಲಿ ಪುಟಿನ್ ಅವರು ಗಂಭೀರವಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಟ್ರಂಪ್ ಹೇಳಿದ್ದಾರೆ.
ಕದನ ವಿರಾಮ ಘೋಷಣೆಗೆ ರಷ್ಯಾ ಹಿಡಿತದಲ್ಲಿರುವ ಕೆಲವು ಪ್ರದೇಶಗಳನ್ನು ಉಕ್ರೇನ್ ಬಿಟ್ಟುಕೊಡಬೇಕಾಗುತ್ತದೆ ಎಂದು ಟ್ರಂಪ್ ಹೇಳಿರುವುದು ಅಮೆರಿಕದ ಕೆಲವು ಮಿತ್ರ ರಾಷ್ಟ್ರಗಳಿಗೆ ಅಸಮಾಧಾನವನ್ನುಂಟು ಮಾಡಿದೆ. ಶಾಂತಿ ಮಾತುಕತೆ ಬಗ್ಗೆ ಪುಟಿನ್ ಅವರ ನಿರ್ಧಾರ ಏನು ಎಂಬುದೂ ಅಸ್ಪಷ್ಟವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.