ADVERTISEMENT

ಮೋದಿ ಅದ್ಭುತ ನಾಯಕ: ಭಾರತದೊಂದಿಗೆ ‘ವ್ಯಾಪಾರ ಒಪ್ಪಂದ’ಕ್ಕೆ ಟ್ರಂಪ್‌ ವಿಶ್ವಾಸ

ಪಿಟಿಐ
Published 22 ಜನವರಿ 2026, 5:57 IST
Last Updated 22 ಜನವರಿ 2026, 5:57 IST
   

ದಾವೋಸ್‌(ಸ್ವಿಟ್ಜರ್‌ಲ್ಯಾಂಡ್): ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಅದ್ಭುತ ನಾಯಕ’ ಎಂದು ಬಣ್ಣಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌, ಭಾರತದೊಂದಿಗೆ ಉತ್ತಮ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ವಿಶ್ವ ಆರ್ಥಿಕ ವೇದಿಕೆಯಲ್ಲಿ ಪಾಲ್ಗೊಂಡಿರುವ ಟ್ರಂಪ್, ಭಾರತ–ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಬಗ್ಗೆ ‘ಮನಿಕಂಟ್ರೋಲ್‌’ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ್ದಾರೆ. ‘ನಿಮ್ಮ ಪ್ರಧಾನಿಯ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ಅದ್ಭುತ ವ್ಯಕ್ತಿ ಮತ್ತು ನನ್ನ ಸ್ನೇಹಿತ. ನಾವು ಉತ್ತಮ ಒಪ್ಪಂದ ಮಾಡಿಕೊಳ್ಳಲಿದ್ದೇವೆ’ ಎಂದಿದ್ದಾರೆ.

ಕಳೆದ ವರ್ಷ ಭಾರತದಿಂದ ಆಮದಾಗುವ ಸರಕುಗಳ ಮೇಲೆ ಅಮೆರಿಕ ಶೇ 50ರಷ್ಟು ಸುಂಕ ವಿಧಿಸಿದೆ. ವ್ಯಾಪಾರ ಒಪ್ಪಂದದ ಕುರಿತು ಉಭಯ ದೇಶಗಳ ನಡುವೆ ಮಾತುಕತೆ ನಡೆಯುತ್ತಿದ್ದು, ಇದುವರೆಗೆ ಯಾವುದೇ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿಲ್ಲ.

ADVERTISEMENT

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್, ಸಂವಹನ ಕೊರತೆಯಿಂದ ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ವಿಫಲವಾಗಿದೆ ಎಂದು ಹೇಳಿದ್ದರು. ಇದು ಉಭಯ ರಾಷ್ಟ್ರಗಳ ನಡುವೆ ವ್ಯಾಪಾರ ಮಾತುಕತೆ ಸ್ಥಗಿತಗೊಂಡಿದೆ ಎಂಬ ಆತಂಕವನ್ನು ಸೃಷ್ಟಿಸಿತ್ತು.

ಇದರ ಬೆನ್ನಲ್ಲೇ ಭಾರತದ ನಿಯೋಜಿತ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್, ಭಾರತವು ಅಮೆರಿಕದ ಬಹುಮುಖ್ಯ ಪಾಲುದಾರ ಎಂದು ಹೇಳುವ ಮೂಲಕ ವ್ಯಾಪಾರ ಮಾತುಕತೆಗಳು ಮುಂದುವರಿಯುವ ಸೂಚನೆಯನ್ನು ನೀಡಿದ್ದರು.

ಏನತ್ಮಧ್ಯೆ, ಭಾರತ ಮೇಲೆ ಶೇ 500ರಷ್ಟು ಸುಂಕ ವಿಧಿಸಬಹುದಾದ ಸೆನೆಟ್‌ ಮಸೂದೆಗೆ ಟ್ರಂಪ್ ಅನುಮೋದನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.