ADVERTISEMENT

ಗ್ರೀನ್‌ಲ್ಯಾಂಡ್‌ ದ್ವೀಪ ಅಮೆರಿಕಕ್ಕೆ ದೊರೆಯಲಿದೆ: ಟ್ರಂಪ್‌ ವಿಶ್ವಾಸ

ವಿಶ್ವದ ಅತಿದೊಡ್ಡ ದ್ವೀಪಕ್ಕೆ ಅಮೆರಿಕ ಅಧ್ಯಕ್ಷ ಬಿಗಿ ಪಟ್ಟು

ಪಿಟಿಐ
Published 26 ಜನವರಿ 2025, 14:16 IST
Last Updated 26 ಜನವರಿ 2025, 14:16 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ವಿಶ್ವದ ಅತಿದೊಡ್ಡ ದ್ವೀಪ ‘ಗ್ರೀನ್‌ಲ್ಯಾಂಡ್‌’ ಅಮೆರಿಕದ ಭಾಗವಾಗಬೇಕೆಂದು ಪಟ್ಟುಹಿಡಿದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಈ ಪ್ರಕ್ರಿಯೆಗೆ ಡೆನ್ಮಾರ್ಕ್‌ ಸಹಕರಿಸದಿದ್ದರೆ ಅದು ಅನುಚಿತ ನಡೆಯಾಗಲಿದೆ ಎಂದು ಗುಡುಗಿದ್ದಾರೆ.

‘ಗ್ರೀನ್‌ಲ್ಯಾಂಡ್‌ ಅಮೆರಿಕಕ್ಕೆ ಸೇರುವ ಬಗ್ಗೆ ನನಗೆ ವಿಶ್ವಾಸವಿದೆ. ಗ್ರೀನ್‌ಲ್ಯಾಂಡ್‌ನಲ್ಲಿರುವ 55 ಸಾವಿರ ನಿವಾಸಿಗಳು ನಮ್ಮೊಂದಿಗಿರುವ ಬಗ್ಗೆ ಸಹಮತ ಹೊಂದಿದ್ದಾರೆ’ ಎಂದು ಟ್ರಂಪ್‌ ಅವರು ಸುದ್ದಿಗಾರರಿಗೆ ಹೇಳಿದ್ದಾರೆ.

‘ಗ್ರೀನ್‌ಲ್ಯಾಂಡ್‌ ಮೇಲೆ ಡೆನ್ಮಾರ್ಕ್‌ಗೆ ಯಾವ ಹಕ್ಕು ಇದೆ ಎಂಬುದು ನನಗೆ ತಿಳಿದಿಲ್ಲ. ಆದರೂ, ಗ್ರೀನ್‌ಲ್ಯಾಂಡ್‌ ಅನ್ನು ಹಸ್ತಾಂತರಿಸಲು ಡೆನ್ಮಾರ್ಕ್‌ ಒಪ್ಪದಿದ್ದರೆ ಅದು ಸ್ನೇಹಪರವಲ್ಲದ ನಡೆಯಾಗಲಿದೆ’ ಎಂದು ಟ್ರಂಪ್‌ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ADVERTISEMENT

‘ಡೆನ್ಮಾರ್ಕ್‌ನ ಆಡಳಿತದ ಬಗ್ಗೆ ಗ್ರೀನ್‌ಲ್ಯಾಂಡ್‌ ನಿವಾಸಿಗಳಿಗೆ ಅಸಮಾಧಾನವಿದೆ. ಅಲ್ಲಿ ರಷ್ಯಾ ಹಾಗೂ ಚೀನಾದ ನೌಕೆಗಳು ಬೀಡುಬಿಟ್ಟಿದ್ದು, ಪರಿಸ್ಥಿತಿ ಹದಗೆಟ್ಟಿದೆ. ಜಗತ್ತಿನ ಸ್ವಾತಂತ್ರ್ಯಕ್ಕಾಗಿ ಗ್ರೀನ್‌ಲ್ಯಾಂಡ್‌ ನಮಗೆ ಅನಿವಾರ್ಯವಾಗಿದ್ದು, ಅದು ನಮಗೆ ದೊರೆಯುವ ವಿಶ್ವಾಸವಿದೆ’ ಎಂದಿದ್ದಾರೆ. 

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಡೆನ್ಮಾರ್ಕ್‌ ಪ್ರಧಾನಿ ಮೆಟ್ಟೆ ಫ್ರೆಡ್‌ರಿಕ್‌ಸನ್‌ ಅವರ ನಡುವೆ ಕಳೆದ ವಾರ ನಡೆದ ದೂರವಾಣಿ ಸಂಭಾಷಣೆಯಲ್ಲಿ, ‘ಗ್ರೀನ್‌ಲ್ಯಾಂಡ್‌ ಮಾರಾಟಕ್ಕಿಲ್ಲ’ ಎಂದು ಮೆಟ್ಟೆ ಅವರು ಸ್ಪಷ್ಟಪಡಿಸಿದ್ದರು ಎನ್ನುವುದು ವರದಿಯಾದ ಬೆನ್ನಲ್ಲೆ, ಟ್ರಂಪ್‌ ಅವರು ಈ ಹೇಳಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.