ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರು ಸ್ವಯಂ ಗಡೀಪಾರಾಗಲು ಬಯಸಿದರೆ ಹಣ ಮತ್ತು ಉಚಿತ ವಿಮಾನ ಟಕೆಟ್ ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಅಕ್ರಮ ವಲಸಿಗರ ಗಡೀಪಾರು ಪ್ರಕ್ರಿಯೆಗೆ ಚಾಲನೆ ನೀಡಿದ್ದ ಟ್ರಂಪ್, ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತ ಸೇರಿದಂತೆ ಹಲವು ದೇಶಗಳ ಸಾವಿರಾರು ಪ್ರಜೆಗಳನ್ನು ಸಾಮೂಹಿಕ ಗಡೀಪಾರು ಮಾಡಿದ್ದಾರೆ.
ಈ ಬಗ್ಗೆ ಸುದ್ದಿ ವಾಹಿನಿ ಫಾಕ್ಸ್‌ಗೆ ಸಂದರ್ಶನ ನೀಡಿದ ಟ್ರಂಪ್, ‘ಕೊಲೆಗಡುಕರನ್ನು’ ದೇಶದಿಂದ ಹೊರಹಾಕವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ, ‘ಸ್ವಯಂ ಗಡೀಪಾರು’ ಕಾರ್ಯಕ್ರಮವನ್ನು ಜಾರಿಗೆ ತರುವುದಾಗಿಯೂ ಹೇಳಿದ್ದಾರೆ.
‘ಸ್ವಯಂ ಗಡೀಪಾರು ಆಯ್ಕೆ ಮಾಡಿಕೊಂಡವರಿಗೆ ನಾವು ಭತ್ಯೆ ನೀಡಲಿದ್ದೇವೆ. ಹಣದ ಜೊತೆಗೆ ಉಚಿತ ವಿಮಾನ ಟಿಕೆಟ್ ನೀಡಲಿದ್ದೇವೆ. ಕಾನೂನುಬಾಹಿರವಾಗಿ ನೆಲೆಸಿರುವ ಕಾರ್ಮಿಕರು ಇಲ್ಲಿಂದ ಹೊರಟು ಕಾನೂನುಬದ್ಧವಾಗಿ ಹಿಂತಿರುಗಬಹುದು’ ಎಂದು ತಿಳಿಸಿದ್ದಾರೆ.
‘ಹೋಟೆಲ್‌ಗಳು ಮತ್ತು ಕೃಷಿ ಕೆಲಸಕ್ಕೆ ಅಗತ್ಯವಿರುವ ಕೆಲಸಗಾರರನ್ನು ನೇಮಿಸಿಕೊಳ್ಳಲು ನಮ್ಮ ಸರ್ಕಾರ ನೆರವಾಗಲಿದೆ’ ಎಂದೂ ಹೇಳಿದ್ದಾರೆ.
‘ಜನರಿಗೆ ತೊಂದರೆಯಾಗದೇ ಇರಲಿ ಎಂಬ ಕಾರಣಕ್ಕೆ ನಾವು ಸ್ವಯಂ ಗಡೀಪಾರು ಕಾರ್ಯಕ್ರಮವನ್ನು ಜಾರಿಗೆ ತರಲು ನಿರ್ಧರಿಸಿದ್ದೇವೆ. ಆ ಜನರು ಕಾನೂನುಬದ್ಧವಾಗಿ ನಮ್ಮ ದೇಶಕ್ಕೆ ಮರಳಲು ನಾವು ಸಹಾಯ ಮಾಡಲಿದ್ದೇವೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.