ADVERTISEMENT

ಶೀಘ್ರವೇ ಪುಟಿನ್‌ ಖುದ್ದು ಭೇಟಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್

ಏಜೆನ್ಸೀಸ್
Published 16 ಮೇ 2025, 13:48 IST
Last Updated 16 ಮೇ 2025, 13:48 IST
ಟ್ರಂಪ್‌ ಮತ್ತು ಪುಟಿನ್‌– ಎಎಫ್‌ಪಿ ಸಂಗ್ರಹ ಚಿತ್ರ
ಟ್ರಂಪ್‌ ಮತ್ತು ಪುಟಿನ್‌– ಎಎಫ್‌ಪಿ ಸಂಗ್ರಹ ಚಿತ್ರ   

ಅಬುಧಾಬಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಆದಷ್ಟು ಶೀಘ್ರ ಭೇಟಿಯಾಗಿ ನೇರ ಮಾತುಕತೆ ನಡೆಸಲು ಮುಂದಾಗಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.

ಟರ್ಕಿಯಲ್ಲಿ ಶುಕ್ರವಾರ ನಿಗದಿಯಾಗಿದ್ದ ರಷ್ಯಾ ಮತ್ತು ಉಕ್ರೇನ್ ನಡುವಿನ ಮಾತುಕತೆಯಲ್ಲಿ ಭಾಗವಹಿಸದಿರಲು ಪುಟಿನ್ ತೀರ್ಮಾನಿಸಿದ ನಂತರ ಟ್ರಂಪ್ ಅವರು ಪುಟಿನ್‌ ಅವರನ್ನು ಖುದ್ದು ಭೇಟಿಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. 

‘ನಾವು ಮುಖಾಮುಖಿ ಭೇಟಿಯಾಗುವ ಸಮಯ ಈಗ ಬಂದಿದೆ ಎನ್ನುವುದು ನನ್ನ ಭಾವನೆ’ ಎಂದು ಟ್ರಂಪ್‌ ಅವರು ಪಶ್ಚಿಮ ಏಷ್ಯಾದಲ್ಲಿ ಕೈಗೊಂಡಿದ್ದ ನಾಲ್ಕು ದಿನಗಳ ಭೇಟಿ ಪೂರ್ಣಗೊಳಿಸಿದ ನಂತರ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಪುಟಿನ್ ಮಾತುಕತೆಯಿಂದ ಹೊರಗುಳಿದಿರುವುದು ನನಗೆ ಅಚ್ಚರಿ ತಂದಿಲ್ಲ. ನನ್ನ ಉಪಸ್ಥಿತಿ ಇಲ್ಲದಿರುವ ಕಾರಣಕ್ಕೆ ಪುಟಿನ್ ಮಾತುಕತೆಗೆ ಹೋಗಲು ಬಯಸಿಲ್ಲ. ಆದಷ್ಟು ಶೀಘ್ರ ಮಾತುಕತೆಗೆ ನಾವು ವ್ಯವಸ್ಥೆ ಮಾಡಲಿದ್ದು, ಪುಟಿನ್‌ ಜತೆಗೆ ಸಭೆ ನಡೆಸಲಿದ್ದೇನೆ’ ಎಂದು ಅವರು ಹೇಳಿದರು.

‘ನಿಮಗೆ ಇಷ್ಟವಿರಲಿ ಅಥವಾ ಇಲ್ಲದಿರಲಿ, ಅವರು ಮತ್ತು ನಾನು ಮತ್ತೆ ಒಂದಾಗುವವರೆಗೆ, ಏನಾದರೊಂದು ಘಟಿಸುತ್ತದೆ ಎಂದು ನಾನು ಭಾವಿಸಿಲ್ಲ. ನಾವು ಅದಷ್ಟು ಶೀಘ್ರ ಭೇಟಿಯಾಗಿ, ಸಮಸ್ಯೆ ಪರಿಹರಿಸಬೇಕಾಗಿದೆ. ಏಕೆಂದರೆ ಹಲವು ಜನರು ಸಾಯುತ್ತಿದ್ದಾರೆ. ಪ್ರತಿ ವಾರ ಸರಾಸರಿ ಐದು ಸಾವಿರ ಯುವಕರು ಕೊಲ್ಲಲ್ಪಡುತ್ತಿದ್ದಾರೆ’ ಎಂದು ಟ್ರಂಪ್‌ ಹೇಳಿದರು.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಮಾತುಕತೆಯಲ್ಲಿ ಭಾಗವಹಿಸಲು ಒಪ್ಪಿದರೆ, ಪರಿಹಾರ ಕಂಡುಕೊಳ್ಳುವಂತೆ ಎರಡೂ ಕಡೆಯ ನಾಯಕರಿಗೆ ಟ್ರಂಪ್ ಸೂಚಿಸಿದರು. ಆದರೆ, ಝೆಲೆನ್‌ಸ್ಕಿ ಜತೆಗೆ ಮುಖಾಮುಖಿ ಭೇಟಿಯ ಪ್ರಸ್ತಾಪವನ್ನು ಪುಟಿನ್ ತಿರಸ್ಕರಿಸಿದ್ದಾರೆ.

ಮೂರು ವರ್ಷಗಳಿಂದ ನಡೆಯುತ್ತಿರುವ ಯುದ್ಧ ಕೊನೆಗಾಣಿಸಲು ಮೊದಲ ಬಾರಿಗೆ ರಷ್ಯಾ ಮತ್ತು ಉಕ್ರೇನ್ ಶುಕ್ರವಾರ ನೇರ ಶಾಂತಿ ಮಾತುಕತೆ ಆರಂಭಿಸಿವೆ. ಟರ್ಕಿಯ ಮಧ್ಯಸ್ಥಿಕೆಯಲ್ಲಿ ಇಸ್ತಾಂಬುಲ್‌ನಲ್ಲಿ ಎರಡೂ ಕಡೆಯ ಪ್ರಮುಖ ನಾಯಕರು ಸಭೆ ಸೇರಿದ್ದಾರೆ. ಯುದ್ಧವನ್ನು ನಿಲ್ಲಿಸುವ ನಿಟ್ಟಿನಲ್ಲಿ ತಕ್ಷಣಕ್ಕೆ ಯಾವುದೇ ಪ್ರಗತಿ ಸಾಧಿಸಲು ಆಗಿಲ್ಲ ಎಂದು ಅಧಿಕಾರಿಗಳು ಮತ್ತು ವಿಶ್ಲೇಷಕರು ಹೇಳಿದ್ದಾರೆ. 

ಯುದ್ಧ ಕೊನೆಗೊಳಿಸಲು ತ್ವರಿತ ಒಪ್ಪಂದಕ್ಕೆ ಬರುವಂತೆ ಟ್ರಂಪ್ ಎರಡೂ ಕಡೆಯವರ ಮೇಲೆ ಒತ್ತಡ ಹೇರಿದ್ದಾರೆ. ಅಮೆರಿಕ ಪ್ರಸ್ತಾಪಿಸಿರುವ 30 ದಿನಗಳ ಆರಂಭಿಕ ಕದನ ವಿರಾಮದ ಯೋಜನೆಯನ್ನು ಝೆಲೆನ್‌ಸ್ಕಿ ಒಪ್ಪಿದ್ದಾರೆ. ಆದರೆ, ಇದಕ್ಕೆ ರಷ್ಯಾ ಸಹಿ ಹಾಕಿಲ್ಲ. ಅದು ಉಕ್ರೇನ್‌ ಮೇಲೆ ದಾಳಿಯನ್ನು ಮುಂದುವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.