ADVERTISEMENT

ಪರಮಾಣು ಒಪ್ಪಂದಕ್ಕೆ ಬರಲು ಇರಾನ್‌ಗೆ ಎರಡನೇ ಅವಕಾಶ: US ಅಧ್ಯಕ್ಷ ಟ್ರಂಪ್

ಏಜೆನ್ಸೀಸ್
Published 14 ಜೂನ್ 2025, 15:42 IST
Last Updated 14 ಜೂನ್ 2025, 15:42 IST
ಇಸ್ರೇಲ್‌ನ ಟೆಲ್‌ ಅವೀವ್‌ ಪಟ್ಟಣ ಗುರಿಯಾಗಿರಿಸಿಕೊಂಡು ಇರಾನ್‌ ನಡೆಸಿದ ಕ್ಷಿಪಣಿಗಳನ್ನು ಐರನ್‌ ಡೋಮ್‌ ವಾಯು ರಕ್ಷಣಾ ವ್ಯವಸ್ಥೆಯು ಹೊಡೆದುರುಳಿಸಿತು– ಪಿಟಿಐ ಚಿತ್ರ
ಇಸ್ರೇಲ್‌ನ ಟೆಲ್‌ ಅವೀವ್‌ ಪಟ್ಟಣ ಗುರಿಯಾಗಿರಿಸಿಕೊಂಡು ಇರಾನ್‌ ನಡೆಸಿದ ಕ್ಷಿಪಣಿಗಳನ್ನು ಐರನ್‌ ಡೋಮ್‌ ವಾಯು ರಕ್ಷಣಾ ವ್ಯವಸ್ಥೆಯು ಹೊಡೆದುರುಳಿಸಿತು– ಪಿಟಿಐ ಚಿತ್ರ   

ವಾಷಿಂಗ್ಟನ್‌: ‘ಇರಾನ್‌ ತನ್ನ ಪರಮಾಣು ಯೋಜನೆಗಳನ್ನು ಸ್ಥಗಿತಗೊಳಿಸುವ ಸಂಬಂಧ ಶೀಘ್ರ ಒಪ್ಪಂದಕ್ಕೆ ಬರಬೇಕು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಒತ್ತಾಯಿಸಿದ್ದಾರೆ.

ಮಧ್ಯ ಪ್ರಾಚ್ಯದಲ್ಲಿ ಪ್ರಕ್ಷುಬ್ದ ಪ‍ರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ ಹೇಳಿಕೆ ನೀಡಿದ ಟ್ರಂಪ್‌, ‘ಇನ್ನಷ್ಟು ವಿನಾಶವಾಗುವ ಮುನ್ನ ಇರಾನ್‌ ನಾಯಕತ್ವವು ಒಪ್ಪಂದಕ್ಕೆ ಬರಲು ಎರಡನೇ ಅವಕಾಶವಿದೆ. ಒಂದು ಕಾಲದಲ್ಲಿ ಇರಾನ್‌ ಸಾಮ್ರಾಜ್ಯ ಎಂದು ಕರೆಯಲ್ಪಡುತ್ತಿತ್ತು. ಈಗ ಅವರಿಗೂ ಏನೂ ಉಳಿದಿಲ್ಲ’ ಎಂದು ಹೇಳಿದ್ದಾರೆ.

‘ಇರಾನ್‌ನ ಪರಿಸ್ಥಿತಿ ಕುರಿತಂತೆ ರಾಷ್ಟ್ರೀಯ ಭದ್ರತಾ ತಂಡದ ಜೊತೆ ಮಾತುಕತೆ ನಡೆಸಿದ್ದೇನೆ. ದಾಳಿಯಲ್ಲಿ ನಮ್ಮ ದೇಶದ ಯಾವುದೇ ಪಾತ್ರವಿಲ್ಲ. ಆದರೆ, ಇರಾನ್‌ ಮೇಲಿನ ದಾಳಿಗೆ ಅಮೆರಿಕದ ಶಸ್ತ್ರಾಸ್ತ್ರಗಳನ್ನು ಇಸ್ರೇಲ್‌ ಬಳಸಿಕೊಂಡಿದೆ’ ಎಂದು ತಿಳಿಸಿದರು. 

ADVERTISEMENT

‘ಇಡೀ ವಿಶ್ವದಲ್ಲಿಯೇ ಅಮೆರಿಕವು ಅತ್ಯುತ್ತಮ, ಮಾರಕ ಮಿಲಿಟರಿ ಉಪಕರಣಗಳನ್ನು ಹೊಂದಿದ್ದು, ಇಸ್ರೇಲ್‌ ಬಳಿಯೂ ಸಾಕಷ್ಟು ಸಂಗ್ರಹವಿದೆ. ಇನ್ನಷ್ಟು ಶಸ್ತ್ರಾಸ್ತ್ರಗಳು ಇರಾನ್‌ ಮೇಲೆ ಎರಗಬೇಕಿದೆ. ಅದನ್ನು ಯಾವಾಗ ಬಳಸಬೇಕು ಎಂಬುದು ಇಸ್ರೇಲ್‌ಗೂ ಗೊತ್ತಿದೆ’ ಎಂದು ಡೊನಾಲ್ಡ್‌ ಟ್ರಂಪ್‌ ಅವರು ಇರಾನ್‌ ನಾಯಕರಿಗೆ ಸಾಮಾಜಿಕ ಜಾಲತಾಣ ‘ಟ್ರೂಥ್‌’ನಲ್ಲಿ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಮಾತುಕತೆಗೆ ಅರ್ಥವಿಲ್ಲ: ಇಸ್ರೇಲ್‌ ದಾಳಿ ಹಿನ್ನೆಲೆಯಲ್ಲಿ ಅಮೆರಿಕದ ಜೊತೆಗೆ ಇರಾನ್‌ ಪರಮಾಣು ಒಪ್ಪಂದ ನಡೆಯುವುದು ಅನುಮಾನವಾಗಿದೆ. ಅಮೆರಿಕ ಹಾಗೂ ಇರಾನ್‌ ನಡುವೆ ಭಾನುವಾರ ಒಮನ್‌ನಲ್ಲಿ ಈ ಹಿಂದೆ ಸಭೆ ನಿಗದಿಯಾಗಿತ್ತು.

‘ತಮ್ಮ ದೇಶದ ಮೇಲೆ ಇಸ್ರೇಲ್‌ ದಾಳಿ ನಡೆಸಿರುವುದು ಸಮರ್ಥನೀಯವಲ್ಲ. ಈ ವಾರಾಂತ್ಯದಲ್ಲಿ ವಾಷಿಂಗ್ಟನ್‌ ಜೊತೆ ನಿಗದಿಯಾಗಿದ್ದ ಮಾತುಕತೆಗೆ ಯಾವುದೇ ಅರ್ಥವಿಲ್ಲ’ ಎಂದು ಇರಾನ್‌ನ ಉನ್ನತ ರಾಜತಾಂತ್ರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉನ್ನತ ಅಧಿಕಾರಿಗಳ ಸಾವು ಖಚಿತಪಡಿಸಿದ ಇರಾನ್‌: ಇಸ್ರೇಲ್ ನಡೆಸಿದ ದಾಳಿಯಲ್ಲಿ ಸೇನೆಯ ಮತ್ತಿಬ್ಬರು ಅತ್ಯುನ್ನತ ಅಧಿಕಾರಿಗಳು ಮೃತಪಟ್ಟಿರುವುದನ್ನು  ಇರಾನ್‌ ಖಚಿತಪಡಿಸಿದೆ.

ಸೇನೆಯ ಗುಪ್ತಚರ ವಿಭಾಗದ ಉಪ ಮುಖ್ಯಸ್ಥ ಜನರಲ್‌ ಘೊಲಮ್ರೆಝಾ ಮೆಹ್ರಾಬಿ, ಕಾರ್ಯಾಚರಣೆಯ ಉಪ ಮುಖ್ಯಸ್ಥ ಜನರಲ್‌ ಮೆಹ್ದಿ ರಬ್ಬಾನಿ ಕೂಡ ಸತ್ತಿದ್ದಾರೆ ಎಂದು ಇರಾನ್‌ ಸರ್ಕಾರಿ ಟಿವಿ ಚಾನಲ್‌ ವರದಿ ಮಾಡಿದೆ.

ಡೊನಾಲ್ಟ್‌ ಟ್ರಂಪ್‌

‘ಕ್ಷಿಪಣಿ ದಾಳಿ ಮುಂದುವರಿಸಿದರೆ ಟೆಹರಾನ್‌ ಹೊತ್ತಿ ಉರಿಯಲಿದೆ’

‘ಇಸ್ರೇಲ್‌ ಮೇಲೆ ಇರಾನ್‌ ಕ್ಷಿಪಣಿ ದಾಳಿ ಮುಂದುವರಿಸಿದರೆ ಟೆಹರಾನ್‌ ಹೊತ್ತಿ ಉರಿಯಲಿದೆ’ ಎಂದು ಇಸ್ರೇಲ್‌ನ ರಕ್ಷಣಾ ಸಚಿವ ಕಾಟ್ಸ್‌ ಎಚ್ಚರಿಕೆ ನೀಡಿದ್ದಾರೆ.

ಇಸ್ರೇಲ್‌ ದಾಳಿಗೆ ಪ್ರತಿಯಾಗಿ ಇರಾನ್‌ ಪ್ರತಿದಾಳಿ ಆರಂಭಿಸಿದೆ.  ‘ಇರಾನ್‌ನ ಸರ್ವಾಧಿಕಾರಿಯು ತನ್ನ ದೇಶದ ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿದ್ದಾರೆ. ಇಸ್ರೇಲ್‌ ನಾಗರಿಕರ ಮೇಲೆ ನಡೆಸುತ್ತಿರುವ ಕ್ರಿಮಿನಲ್‌ ದಾಳಿಗೆ ಟೆಹರಾನ್‌ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದು ಹೇಳಿಕೆ ನೀಡಿದ್ದಾರೆ.

‘ಇರಾನ್‌ನ ಸರ್ವೋಚ್ಚ ನಾಯಕ ಅಯತೋಲ್ಲಾ ಅಲಿ ಖಮೇನಿ ಕ್ಷಿಪಣಿ ದಾಳಿ ಮುಂದುವರಿಸಿದರೆ ಟೆಹರಾನ್‌ ಪೂರ್ತಿ ಹೊತ್ತಿ ಉರಿಯಲಿದೆ’ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.