ADVERTISEMENT

ರಷ್ಯಾ ಜತೆ ಶಸ್ತ್ರಾಸ್ತ್ರ ಒಪ್ಪಂದ ರದ್ದು: ಟ್ರಂಪ್‌

ಪಿಟಿಐ
Published 21 ಅಕ್ಟೋಬರ್ 2018, 16:57 IST
Last Updated 21 ಅಕ್ಟೋಬರ್ 2018, 16:57 IST
   

ವಾಷಿಂಗ್ಟನ್‌: ರಷ್ಯಾ ಜತೆಗಿನ ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದವನ್ನು ರದ್ದುಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

ರಷ್ಯಾ ಈಗಾಗಲೇ ಒಪ್ಪಂದ ಉಲ್ಲಂಘಿಸಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟ್ರಂಪ್‌ಪ್ರತಿಪಾದಿಸಿದ್ದಾರೆ.

ಶಸ್ತ್ರಾಸ್ತ್ರ ನಿಯಂತ್ರಣಗಳ ಕುರಿತಾದ ‘ಅಂತರ ಮಧ್ಯಮ ವ್ಯಾಪ್ತಿಯ ಪರಮಾಣು ಪಡೆ’ (ಐಎನ್‌ಎಫ್‌) ಒಪ್ಪಂದಕ್ಕೆ ಇನ್ನು ಎರಡು ವರ್ಷಗಳ ಕಾಲಾವಕಾಶವಿತ್ತು.

ADVERTISEMENT

1987ರಲ್ಲಿ ಮಾಡಿಕೊಂಡಿದ್ದ ಈ ಒಪ್ಪಂದವನ್ನು ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಭದ್ರತೆ ಕಾಪಾಡುವ ಉದ್ದೇಶದಿಂದ ಕೈಗೊಳ್ಳಲಾಗಿತ್ತು. ಅಂದಿನ ಅಮೆರಿಕ ಅಧ್ಯಕ್ಷರಾಗಿದ್ದ ರೋನಾಲ್ಡ್‌ ರೇಗನ್‌ ಮತ್ತು ಯುಎಸ್‌ಎಸ್‌ಆರ್‌ ಅಧ್ಯಕ್ಷ ಮಿಖಾಯಿಲ್‌ ಗೋರ್ಬಚೇವ್ ಈ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಈ ಒಪ್ಪಂದದ ಅನ್ವಯ ಅಮೆರಿಕ ಮತ್ತು ರಷ್ಯಾ ’ಕ್ರ್ಯೂಸ್‌’ ಕ್ಷಿಪಣಿಗಳನ್ನು ಹೊಂದುವುದು, ತಯಾರಿಸುವುದು ಅಥವಾ ಪರೀಕ್ಷಾರ್ಥ ಹಾರಾಟ ಕೈಗೊಳ್ಳುವುದನ್ನು ನಿಷೇಧಿಸಲಾಗಿತ್ತು. ಜತೆಗೆ ಅಣ್ವಸ್ತ್ರ ಸಿಡಿತಲೆಗಳನ್ನು ಕೊಂಡೊಯ್ಯುವ ನೆಲದಿಂದ ಜಿಗಿಯುವ ಕ್ಷಿಪಣಿಗಳನ್ನು ಹೊಂದದಂತೆಯೂ ಈ ಒಪ್ಪಂದದಲ್ಲಿ ತಿಳಿಸಲಾಗಿತ್ತು.

‘ಒಪ್ಪಂದ ಉಲ್ಲಂಘಿಸಿ ರಷ್ಯಾ ಹೊಸದಾಗಿ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದೆ. ಆದರೆ, ನಮಗೆ ಅವಕಾಶ ನೀಡುತ್ತಿಲ್ಲ. ಹಲವು ವರ್ಷಗಳಿಂದ ಇದೇ ರೀತಿ ನಡೆಯುತ್ತಿದೆ. ಹೀಗಾಗಿ, ಅಮೆರಿಕ ದೃಢವಾದ ನಿರ್ಧಾರ ಕೈಗೊಂಡಿದೆ. ನಾವು ಈಗ ಹೊಸದಾಗಿ ಕ್ಷಿಪಣಿಗಳನ್ನು ತಯಾರಿಸಬೇಕಾಗಿದೆ’ ಎಂದು ಟ್ರಂಪ್‌ ಹೇಳಿದ್ದಾರೆ.

‘ಅಮೆರಿಕ ಮಾತ್ರ ಈ ಒಪ್ಪಂದವನ್ನು ಗೌರವಿಸುತ್ತ ಬಂದಿದೆ. ಆದರೆ, ಈ ವಿಷಯದಲ್ಲಿ ಹಿಂದಿನ ಅಧ್ಯಕ್ಷ ಬರಾಕ್‌ ಒಬಾಮ ಏಕೆ ಮೌನವಹಿಸಿದ್ದರು ಎನ್ನುವುದು ಅರ್ಥವಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ನಿರ್ಧಾರಕ್ಕೆ ರಷ್ಯಾ ಕಟುವಾಗಿಯೇ ಪ್ರತಿಕ್ರಿಯಿಸಿದೆ. ‘ಅಮೆರಿಕ ಜಾಗತಿಕವಾಗಿ ಸೂಪರ್‌ ಪವರ್‌ ರಾಷ್ಟ್ರವಾಗಿ ಹೊರಹೊಮ್ಮುವ ಕನಸು ಕಾಣುತ್ತಿದೆ. ಆದರೆ, ಇದು ನನಸಾಗಲು ಸಾಧ್ಯವಿಲ್ಲ’ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.