ವಾಷಿಂಗ್ಟನ್: ಅಮೆರಿಕವು ಭಾರತದ ಜತೆ ಶೀಘ್ರದಲ್ಲೇ ‘ಬಹಳ ದೊಡ್ಡ’ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಈ ಮೂಲಕ ಉಭಯ ದೇಶಗಳ ನಡುವಿನ ಬಹುನಿರೀಕ್ಷಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆ ಪ್ರಕ್ರಿಯೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿರುವ ಸುಳಿವು ನೀಡಿದ್ದಾರೆ.
‘ಮುಂದಿನ ದಿನಗಳಲ್ಲಿ ಹಲವು ದೇಶಗಳ ಜತೆ ಒಪ್ಪಂದ ಮಾಡಿಕೊಳ್ಳಲಿದ್ದೇವೆ. ಭಾರತದ ಜತೆ ಬಹಳ ದೊಡ್ಡ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದ್ದೇವೆ’ ಎಂದು ಶ್ವೇತಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅವರು ತಿಳಿಸಿದ್ದಾರೆ.
ಕೇಂದ್ರ ವಾಣಿಜ್ಯ ಇಲಾಖೆಯ ವಿಶೇಷ ಕಾರ್ಯದರ್ಶಿ ರಾಜೇಶ್ ಅಗರವಾಲ್ ಅವರು ಪ್ರಸ್ತಾವಿತ ಒಪ್ಪಂದದ ಬಗ್ಗೆ ಅಮೆರಿಕದ ಅಧಿಕಾರಿಗಳ ಜತೆ ಚರ್ಚಿಸಲು ವಾಷಿಂಗ್ಟನ್‌ಗೆ ಬಂದಿಳಿದ ದಿನವೇ ಟ್ರಂಪ್ ಹೇಳಿಕೆ ಹೊರಬಿದ್ದಿದೆ.
ಚೀನಾ ಜತೆ ಒಪ್ಪಂದಕ್ಕೆ ಸಹಿ:
‘ಅಮೆರಿಕವು ಚೀನಾ ಜತೆ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ’ ಎಂದು ಟ್ರಂಪ್ ಇದೇ ವೇಳೆ ತಿಳಿಸಿದರು. ಆದರೆ, ಚೀನಾದೊಂದಿಗೆ ಸಹಿ ಹಾಕಿರುವ ಒಪ್ಪಂದದ ಕುರಿತ ಹೆಚ್ಚಿನ ವಿವರಗಳನ್ನು ಅವರು ನೀಡಲಿಲ್ಲ. ಚೀನಾ ಜತೆಗಿನ ಒಪ್ಪಂದಕ್ಕೆ ಎರಡು ದಿನಗಳ ಹಿಂದೆ ಸಹಿ ಹಾಕಲಾಗಿದೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೋವರ್ಡ್ ಲುಟ್ನಿಕ್ ಹೇಳಿದ್ದಾರೆ.
ಅಮೆರಿಕಕ್ಕೆ ಅಗತ್ಯವಿರುವ ವಿರಳ ಲೋಹಗಳು ಮತ್ತು ಮ್ಯಾಗ್ನೆಟ್‌ಗಳನ್ನು ಪಡೆಯಲು ಚೀನಾದ ಜತೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಟ್ರಂಪ್ ಎರಡು ವಾರಗಳ ಹಿಂದೆ ಹೇಳಿದ್ದರು. ಇದೀಗ ನಡೆದಿರುವ ಒಪ್ಪಂದವು ಟ್ರಂಪ್ ಘೋಷಿಸಿದ್ದ ಒಪ್ಪಂದಕ್ಕಿಂತ ಭಿನ್ನವಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.