ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಡೊನಾಲ್ಡ್ ಟ್ರಂಪ್ ಅವರು ತಾವು ನೀಡಿರುವ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹಲವು ಮಹತ್ವದ ಕಾರ್ಯಕಾರಿ ಅದೇಶಗಳಿಗೆ ಮೊದಲ ದಿನವೇ ರುಜು ಹಾಕಿದ್ದಾರೆ.
ಕೆಲ ವಿಷಯಗಳ ಕುರಿತು ಜ್ಞಾಪನಾಪತ್ರ ಮತ್ತು ಆದೇಶಗಳಿಗೆ ಸಹಿ ಹಾಕಿರುವ ಟ್ರಂಪ್, ಮಾಜಿ ಅಧ್ಯಕ್ಷ ಜೋ ಬೈಡನ್ ನೇತೃತ್ವದ ಸರ್ಕಾರ ಕೈಗೊಂಡಿದ್ದ ಹಲವಾರು ತೀರ್ಮಾನಗಳನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ.
‘ಕ್ಯಾಪಿಟಲ್’ ಮೇಲೆ 2021ರ ಜನವರಿ 6ರಂದು ನಡೆದಿದ್ದ ದಾಳಿಯಲ್ಲಿ ಭಾಗಿಯಾಗಿದ್ದವರ ಪೈಕಿ ನೂರಾರು ಜನರಿಗೆ ಕ್ಷಮಾದಾನವನ್ನೂ ನೀಡಿದ್ದಾರೆ.
ಪ್ರಮುಖ ನಿರ್ಧಾರಗಳು/ಆದೇಶಗಳು
* 1,500 ಜನರಿಗೆ ಕ್ಷಮಾದಾನ
2020ರ ಚುನಾವಣೆಯಲ್ಲಿ ಜೋ ಬೈಡನ್ ಅವರು ಗೆದ್ದ ನಂತರ, ಅಧಿಕೃತ ಘೋಷಣೆಗಾಗಿ ಅಮೆರಿಕದ ‘ಕ್ಯಾಪಿಟಲ್ ಹಿಲ್’ನಲ್ಲಿ ಸಂಸತ್ ಸಭೆ ನಡೆದಿತ್ತು. ಈ ವೇಳೆ, ‘ಕ್ಯಾಪಿಟಲ್ ಹಿಲ್’ ಮೇಲೆ ದಾಳಿ ನಡೆಸಿದ್ದ ಜನರ ಪೈಕಿ, ಹಲವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿತ್ತು ಹಾಗೂ ಕೆಲವರಿಗೆ ಶಿಕ್ಷೆ ವಿಧಿಸಲಾಗಿತ್ತು. ಚುನಾವಣೆ ಪ್ರಚಾರ ವೇಳೆ ನೀಡಿದ್ದ ಭರವಸೆಯಂತೆ, ಟ್ರಂಪ್ ಅವರು, ಈ ಪ್ರಕರಣಕ್ಕೆ ಸಂಬಂಧಿಸಿ 1,500 ಜನರಿಗೆ ಕ್ಷಮಾದಾನ ನೀಡಿದ್ದಾರೆ. ತಮ್ಮ ಬೆಂಬಲಿಗರ ವಿರುದ್ಧ ಬೈಡನ್ ಆಡಳಿತ ಹೂಡಿದ್ದ ಪ್ರಕರಣಗಳನ್ನು ಮುಕ್ತಾಯಗೊಳಿಸುವಂತೆ ಆದೇಶಿಸಿದ್ದಾರೆ
* ಆರ್ಥಿಕತೆ ಮತ್ತು ಟಿಕ್ ಟಾಕ್
ಹಣದುಬ್ಬರ ನಿಯಂತ್ರಣಕ್ಕೆ ಸಂಬಂಧಿಸಿ ಸರ್ಕಾರದ ಎಲ್ಲ ಸಂಸ್ಥೆಗಳು ಕ್ರಮ ಕೈಗೊಳ್ಳುವಂತೆ ನಿರ್ದೇಶನ. ತೈಲ ಮತ್ತು ನೈಸರ್ಗಿಕ ಅನಿಲ ಉತ್ಪಾದನೆಗೆ ಸಂಬಂಧಿಸಿದ ನಿಯಮಾವಳಿಗಳನ್ನು ಸರಳಗೊಳಿಸುವಂತೆ ಸೂಚನೆ. ಅಲಾಸ್ಕದಲ್ಲಿ ಪಳೆಯುಳಿಕೆ ಇಂಧನ ಉತ್ಪಾದನೆ ಹೆಚ್ಚಳಕ್ಕೆ ಒತ್ತು ಸಾಮಾಜಿಕ ಮಾಧ್ಯಮ ಟಿಕ್ ಟಾಕ್ ಮೇಲೆ ವಿಧಿಸಿದ್ದ ನಿರ್ಬಂಧ ತೆಗೆದು ಹಾಕುವ ಆದೇಶಕ್ಕೆ ಸಹಿ. ಈ ಮೊದಲಿನ ಬೈಡನ್ ಆಡಳಿತ ಈ ನಿರ್ಬಂಧ ವಿಧಿಸಿತ್ತು. ರಾಷ್ಟ್ರೀಯ ಭದ್ರತೆ ಹಿತಾಸಕ್ತಿಗಳನ್ನು ರಕ್ಷಣೆ ಮಾಡಬೇಕು. ಇಂತಹ ಉದ್ಧೇಶದೊಂದಿಗೆ ಟಿಕ್‌ಟಾಕ್ ಅನ್ನು ಅಮೆರಿಕದ ಉದ್ಯಮಿ ಖರೀದಿ ಮಾಡುವುದಕ್ಕೆ ಅವಕಾಶ ನೀಡಲಾಗಿದೆ
ಫೆ.1ರಿಂದ ಅನ್ವಯವಾಗುವಂತೆ, ಕೆನಡಾ ಮತ್ತು ಮೆಕ್ಸಿಕೊದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸಲು ನಿರ್ಧಾರ. ಚೀನಾದಿಂದ ಆಮದಾಗು ಸರಕುಗಳ ಮೇಲಿನ ಸುಂಕ ಕಡಿತಕ್ಕೆ ನಕಾರ
* ‘ಅಮೆರಿಕ ಮೊದಲು’ ನೀತಿ
ಈ ನೀತಿ ಭಾಗವಾಗಿ ವಿದೇಶಗಳಿಗೆ ನೆರವು ಹಾಗೂ ಖರ್ಚು ಕುರಿತು ಸಮಗ್ರ ಮರುಪರಿಶೀಲನೆಗೆ ಆದೇಶ. ‘ಗಲ್ಫ್ ಆಫ್ ಅಮೆರಿಕ’ ಎಂಬುದಾಗಿ ಮರುನಾಮಕರಣ ಮಾಡುವ ಆದೇಶಕ್ಕೆ ಸಹಿ ಹಾಕಲು ಟ್ರಂಪ್ ಯೋಜಿಸಿದ್ದಾರೆ.
ಉತ್ತರ ಅಮೆರಿಕದಲ್ಲಿರುವ ಅತಿ ಎತ್ತರದ ಪರ್ವತ ‘ಡೆನಾಲಿ’ಯನ್ನು ಈ ಮೊದಲಿನಂತೆ ಮೌಂಟ್ ಮ್ಯಾಕ್‌ಕಿನ್ಲೆ ಎಂದು ಕರೆಯುವುದಕ್ಕೆ ಸಂಬಂಧಿಸಿದ ಆದೇಶಕ್ಕೆ ಸಹಿ ಹಾಕಲು ನಿರ್ಧಾರ. ಪರ್ವತದ ಹೆಸರನ್ನು ಈ ಹಿಂದೆ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಬದಲಿಸಿದ್ದರು
* ವಲಸೆ ಮತ್ತು ರಾಷ್ಟ್ರೀಯ ಭದ್ರತೆ
ಜೋ ಬೈಡನ್ ಅವಧಿಯಲ್ಲಿದ್ದ ಹಲವು ಆದೇಶಗಳನ್ನು ಟ್ರಂಪ್ ಹಿಂಪಡೆದಿದ್ದಾರೆ. ವಲಸಿಗರ ಪೈಕಿ ಗಂಭೀರ ಸ್ವರೂಪದ ಅಪರಾಧ ಕೃತ್ಯ ಎಸಗುವವರನ್ನು ‘ರಾಷ್ಟ್ರೀಯ ಭದ್ರತೆಗೆ ಬೆದರಿಕೆ’ ಎಂದು ಪರಿಗಣಿಸಿ ಅವರನ್ನು ಗಡೀಪಾರು ಮಾಡುವದು. ಕಾನೂನುಬಾಹಿರವಾಗಿ ದೇಶದಲ್ಲಿ ನೆಲಸಿರುವವರನ್ನು ಆದ್ಯತೆ ಮೇಲೆ ಗಡೀಪಾರು ಮಾಡುವುದು.
ಅಮೆರಿಕ–ಮೆಕ್ಸಿಕೊ ಗಡಿಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ. ನಿರಾಶ್ರಿತರು ಹಾಗೂ ಆಶ್ರಯ ಕೋರಿ ಬರುವವರ ಮೇಲೆ ನಿರ್ಬಂಧ ಹೇರುವಲ್ಲಿ ವಲಸೆ ಏಜೆಂಟರಿಗೆ ನೆರವಾಗುವುದಕ್ಕಾಗಿ ಸೇನೆ ನಿಯೋಜನೆಗೆ ನಿರ್ಧಾರ. ‘ಅಮೆರಿಕ ನಿರಾಶ್ರಿತರ ಪ್ರವೇಶ ಕಾರ್ಯಕ್ರಮ’ ತಾತ್ಕಾಲಿಕ ಅಮಾನತು.
‘ಜನ್ಮದಿಂದಾಗಿ ಸಿಗುವ ಅಮೆರಿಕ ಪೌರತ್ವದ ಹಕ್ಕು’ ನೀತಿಯನ್ನು ತೆಗೆದು ಹಾಕಲು ಟ್ರಂಪ್ ಯೋಜಿಸಿದ್ದಾರೆ. ಆದರೆ ಈ ಹಕ್ಕು, ಅಮೆರಿಕ ಸಂವಿಧಾನದಲ್ಲಿಯೇ ಅಡಕವಾಗಿರುವ ಕಾರಣ ಇದನ್ನು ರದ್ದುಪಡಿಸುವ ಆದೇಶ ಊರ್ಜಿತವಾಗುವ ಅನುಮಾನವಿದೆ
* ಹವಾಮಾನ ಮತ್ತು ಇಂಧನ
ನಿರೀಕ್ಷೆಯಂತೆ, ಪ್ಯಾರಿಸ್ ಒಪ್ಪಂದಿಂದ ಅಮೆರಿಕ ನಿರ್ಗಮಿಸುವ ಕುರಿತ ಆದೇಶಕ್ಕೆ ಸಹಿ ಹಾಕಿದ್ದಾರೆ. ಅಮೆರಿಕದಲ್ಲಿಯೇ ತೈಲೋತ್ಪನ್ನ ಉತ್ಪಾದನೆ ಹೆಚ್ಚಿಸುವುದಾಗಿ ಭರವಸೆ ನೀಡಿರುವ ಟ್ರಂಪ್, ಎಲೆಕ್ಟ್ರಿಕ್ ವಾಹನಗಳನ್ನು ಕಡ್ಡಾಯಗೊಳಿಸಿದ್ದ ಬೈಡನ್ ಆಡಳಿತದ ನಿರ್ಧಾರವನ್ನು ರದ್ದು ಮಾಡುವುದಾಗಿ ಹೇಳಿದ್ದಾರೆ
* ವೈವಿಧ್ಯ, ಸಮಾನತೆ, ಒಳಗೊಳ್ಳುವಿಕೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳು
ಲಿಂಗತ್ವ ಅಲ್ಪಸಂಖ್ಯಾತರ ನೀಡಿದ್ದ ರಕ್ಷಣೆ ಹಿಂಪಡೆಯುವುದು. ಆಡಳಿತದಲ್ಲಿದ್ದ ವೈವಿಧ್ಯ, ಸಮಾನತೆ ಹಾಗೂ ಒಳಗೊಳ್ಳುವಿಕೆ ತತ್ವ ಆಧಾರಿತ ಕಾರ್ಯಕ್ರಮಗಳನ್ನು ಕೊನೆಗಾಣಿಸುವ ಕುರಿತ ಆದೇಶಗಳಿಗೆ ಟ್ರಂಪ್ ಸಹಿ ಹಾಕಿದ್ದಾರೆ. ಸರ್ಕಾರವು ಪುರುಷ ಮತ್ತು ಮಹಿಳೆ ಎಂಬ ಎರಡು ಲಿಂಗಗಳನ್ನು ಮಾತ್ರ ಸರ್ಕಾರ ಗುರುತಿಸಲಿದೆ ಎಂಬ ಆದೇಶಕ್ಕೆ ಸಹಿ ಹಾಕಿದ್ದಾರೆ
ಡಬ್ಲ್ಯುಎಚ್‌ಒದಿಂದ ಅಮೆರಿಕ ಹೊರಕ್ಕೆ
ವಿಶ್ವ ಆರೋಗ್ಯ ಸಂಸ್ಥೆಯಿಂದ (ಡಬ್ಲ್ಯುಎಚ್‌ಒ) ಅಮೆರಿಕ ನಿರ್ಗಮಿಸಲಿದೆ. ಈ ನಿರ್ಧಾರ ಕಾರ್ಯಗತಗೊಳಿಸುವ ಆದೇಶಕ್ಕೆ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಐದು ವರ್ಷದ ಒಳಗೆ ಎರಡನೇ ಬಾರಿಗೆ ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಯಿಂದ ನಿರ್ಗಮಿಸದಂತಾಗಲಿದೆ. ಈ ಹಿಂದೆ 2020ರಲ್ಲಿ ಕೋವಿಡ್–19 ಪಿಡುಗಿನಿಂದಾಗಿ ವಿಶ್ವವೇ ತಲ್ಲಣಗೊಂಡಿತ್ತು. ಆಗ ಅಧ್ಯಕ್ಷರಾಗಿದ್ದ ಟ್ರಂಪ್ ಅವರು ಡಬ್ಲ್ಯುಎಚ್‌ಒ ಕಾರ್ಯವೈಖರಿ ಟೀಕಿಸಿದ್ದರಲ್ಲದೇ ಅದರಿಂದ ಹೊರಬರುವ ನಿರ್ಧಾರ ಪ್ರಕಟಿಸಿದ್ದರು. ಈ ಕುರಿತ ಆದೇಶಕ್ಕೆ ಸಹಿ ಹಾಕಿದ ನಂತರ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಅದೊಂದು ದೊಡ್ಡ ನಿರ್ಧಾರ’ ಎಂದರು. ‘ನಾನು ಈ ಹಿಂದೆ ಅಧ್ಯಕ್ಷನಾಗಿದ್ದಾಗ ಡಬ್ಲ್ಯುಎಚ್‌ಒಗೆ 500 ದಶಲಕ್ಷ ಡಾಲರ್ ನೀಡಿದ್ದೆವು. 140 ಕೋಟಿ ಜನಸಂಖ್ಯೆ ಹೊಂದಿರುವ ಚೀನಾ 39 ದಶಲಕ್ಷ ಡಾಲರ್ ನೀಡುತ್ತಿತ್ತು. ಇದು ಅನ್ಯಾಯ ಎಂದು ನನಗೆ ಅನಿಸಿತು’ ಎಂದು ವಿವರಿಸಿದರು. ‘ಆಗ ನಾನು ಡಬ್ಲ್ಯುಎಚ್‌ಒದಿಂದ ನಿರ್ಗಮಿಸಿದೆ. 39 ದಶಲಕ್ಷ ಡಾಲರ್ ದೇಣಿಗೆ ನೀಡಿ ಮತ್ತೆ ಸೇರ್ಪಡೆಯಾಗಿ ಎಂದು ಅವರು (ಡಬ್ಲ್ಯುಎಚ್‌ಒ) ಆಹ್ವಾನ ನೀಡಿದರು. ವಾಸ್ತವಿವಾಗಿ ಇದಕ್ಕಿಂತಲೂ ಕಡಿಮೆ ದೇಣಿಗೆ ಪಡೆಯಬೇಕಿತ್ತು. ಆದರೆ ಬೈಡನ್ ಅವರು ಅಧ್ಯಕ್ಷರಾದ ನಂತರ 500 ದಶಲಕ್ಷ ಡಾಲರ್ ನೀಡುವುದರೊಂದಿಗೆ ಮತ್ತೆ ಡಬ್ಲ್ಯುಎಚ್‌ಒಗೆ ಅಮೆರಿಕ ಸೇರ್ಪಡೆ ಮಾಡಿದರು‘ ಎಂದು ಹೇಳಿದರು.
ಉಪಾಧ್ಯಕ್ಷ ವ್ಯಾನ್ಸ್ ಪತ್ನಿ ಉಷಾ ಹೊಗಳಿದ ಟ್ರಂಪ್
ವಾಷಿಂಗ್ಟನ್: ಜೆ.ಡಿ.ವ್ಯಾನ್ಸ್ ಪತ್ನಿ ಭಾರತ ಮೂಲದ ಉಷಾ ಚಿಲಕೂರಿ ವ್ಯಾನ್ಸ್ ಅವರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಗಳಿಸಿದ್ದಾರೆ. ‘ಉಷಾ ಬುದ್ಧಿವಂತೆ. ಆಕೆಯನ್ನೇ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಮೆ ಮಾಡಿಕೊಳ್ಳಬಹುದಿತ್ತು. ಆದರೆ ಪರಂಪರೆ ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಟ್ರಂಪ್ ಹೇಳಿದ್ದಾರೆ. ಉಷಾ ಪಾಲಕರು ಆಂಧಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ವಡ್ಲೂರಿನವರು. ನಂತರ ಅಮೆರಿಕಕ್ಕೆ ವಲಸೆ ಹೋಗಿ ಅಲ್ಲಿಯೇ ನೆಲಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.