ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ವಿಧಿಸುತ್ತಿರುವ ಹೆಚ್ಚುವರಿ ಸುಂಕಗಳು ಜಾಗತಿಕ ವಾಣಿಜ್ಯ ಪಾಲುದಾರರ ಮೇಲೆ ಪರಿಣಾಮ ಬೀರುತ್ತಿದ್ದು, ಅವು ಕಾನೂನುಬಾಹಿರವಾಗಿವೆ ಎಂದು ಅಮೆರಿಕದ ಫೆಡರಲ್ ನ್ಯಾಯಾಲಯ ತೀರ್ಪು ನೀಡಿದೆ. ಆದಾಗ್ಯೂ ಅವೆಲ್ಲ ಜಾರಿಯಲ್ಲಿವೆ.
ಫೆಡರಲ್ ಸರ್ಕ್ಯೂಟ್‌ಗಾಗಿನ ಮೇಲ್ಮನವಿ ನ್ಯಾಯಾಲಯವು, ಟ್ರಂಪ್ ಅವರು ವ್ಯಾಪಕ ಶ್ರೇಣಿಯ ಸುಂಕಗಳನ್ನು ವಿಧಿಸಲು ತುರ್ತು ಆರ್ಥಿಕ ಅಧಿಕಾರ ಬಳಸಿಕೊಳ್ಳುವಲ್ಲಿ ಮಿತಿಯನ್ನು ಮೀರಿದ್ದಾರೆ ಎಂದು ಒತ್ತಿ ಹೇಳಿದೆ. ಆದಾಗ್ಯೂ, ಹೆಚ್ಚುವರಿ ಸುಂಕಗಳು ಅಕ್ಟೋಬರ್ ಮಧ್ಯದವರೆಗೆ ಮುಂದುವರಿಯಲು ಮತ್ತು ಪ್ರಕರಣವನ್ನು ಸುಪ್ರೀಂ ಕೋರ್ಟ್‌ಗೆ ಕೊಂಡೊಯ್ಯಲು ಅವಕಾಶ ನೀಡಿದೆ.
ಈ ತೀರ್ಪು ಟ್ರಂಪ್ ಆಡಳಿತಕ್ಕೆ ದೊಡ್ಡ ಹೊಡೆತ ನೀಡಿದೆ. ಯುರೋಪಿಯನ್ ಒಕ್ಕೂಟದಂತಹ ಪ್ರಮುಖ ಪಾಲುದಾರರೊಂದಿಗೆ ಅಮೆರಿಕ ಮಾಡಿಕೊಂಡಿರುವ ಒಪ್ಪಂದಗಳ ಬಗ್ಗೆಯೂ ಅನುಮಾನ ಮೂಡುವಂತೆ ಮಾಡಿದೆ.
ಅಮೆರಿಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ಟ್ರಂಪ್, ವಾಣಿಜ್ಯ ಪಾಲುದಾರ ರಾಷ್ಟ್ರಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಲು ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯನ್ನು ಬಳಸಿಕೊಂಡಿದ್ದಾರೆ.
'ಘೋಷಿತ ರಾಷ್ಟ್ರೀಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲು ಈ ಕಾಯ್ದೆಯು ಅಧ್ಯಕ್ಷರಿಗೆ ಮಹತ್ವದ ಅಧಿಕಾರವನ್ನು ನೀಡುತ್ತದೆ. ಆದರೆ, ಯಾವುದೇ ಕ್ರಮಗಳು ಸುಂಕ ಹೇರಿಕೆ ಅಧಿಕಾರವನ್ನು ಒಳಗೊಂಡಿಲ್ಲ' ಎಂಬುದನ್ನು ಶುಕ್ರವಾರದ ತೀರ್ಪಿನಲ್ಲಿ ಒತ್ತಿ ಹೇಳಿದೆ.
ಅಮೆರಿಕದ ಅಂತರರಾಷ್ಟ್ರೀಯ ವ್ಯಾಪಾರ ನ್ಯಾಯಾಲಯವು, ಟ್ರಂಪ್ ಅವರು ಜಾಗತಿಕವಾಗಿ ಸುಂಕ ಹೇರುವ ಮೂಲಕ ತಮ್ಮ ಅಧಿಕಾರವನ್ನು ಮೀರಿದ್ದಾರೆ ಎಂದು ಮೇ ತಿಂಗಳಲ್ಲಿ ತೀರ್ಪು ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.