
ಇರಾನ್‌ನಲ್ಲಿ ಆಡಳಿತ ವಿರೋಧಿಸಿ ನಡೆದ ಪ್ರತಿಭಟನೆ, ಹಿಂಸಾಚಾರದಲ್ಲಿ ಮೃತಪಟ್ಟವರ ಶವಗಳನ್ನು ಟೆಹರಾನ್‌ನ ಫೋರೆನ್ಸಿಕ್ ಡಯಾಗ್ನೋಸ್ಟಿಕ್ ಮತ್ತು ಪ್ರಯೋಗಾಲಯ ಕೇಂದ್ರದಲ್ಲಿ ಇರಿಸಲಾಗಿದೆ
ದುಬೈ: ಆಡಳಿತ ವಿರೋಧಿ ಪ್ರತಿಭಟನೆಯನ್ನು ಹತ್ತಿಕ್ಕಿ, ಪ್ರತಿಭಟನಕಾರರ ಸಾವಿಗೆ ಕಾರಣವಾಗುತ್ತಿರುವ ಇರಾನ್ ವಿರುದ್ಧ ದಾಳಿ ಮಾಡುವ ಬೆದರಿಕೆ ಹಾಕಿದ ಬೆನ್ನಲ್ಲೇ ಇರಾನ್ ಸಂಧಾನಕ್ಕೆ ಸಿದ್ಧವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
‘ಇರಾನ್ ಕರೆ ಮಾಡಿ, ಮಾತುಕತೆ ನಡೆಸಲು ಬಯಸುತ್ತಿರುವುದಾಗಿ ಹೇಳಿದೆ. ಅವರ ಮನವಿ ಮೇರೆಗೆ ನಾವು ಸಹ ಮಾತುಕತೆಗೆ ಮುಂದಾಗಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.
‘ಆದರೆ, ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಕಾರರು ಸಾವಿಗೀಡಾಗುತ್ತಿದ್ದಾರೆ. ಅಲ್ಲಿನ ಸರ್ಕಾರವು ಪ್ರತಿಭಟನಕಾರರನ್ನು ಬಂಧಿಸುತ್ತಿದೆ. ಈ ಸಮಸ್ಯೆಗಳು ಮೊದಲು ಬಗೆಹರಿಯಬೇಕು. ಈ ನಿಟ್ಟಿನಲ್ಲಿ ಮೊದಲು ಕೆಲಸ ಮಾಡಬೇಕು’ ಎಂದು ಅವರು ಭಾನುವಾರ ತಡರಾತ್ರಿ ಸುದ್ದಿಗಾರರಿಗೆ ಹೇಳಿದ್ದಾರೆ.
ಆದರೆ, ಟ್ರಂಪ್ ಅವರ ಹೇಳಿಕೆಗಳನ್ನು ಇರಾನ್ ತಕ್ಷಣಕ್ಕೆ ಒಪ್ಪಿಕೊಂಡಿಲ್ಲ.
‘ಇರಾನ್‌ನ ಜನರು ಸ್ವಾತಂತ್ರ್ಯಕ್ಕಾಗಿ ಹಿಂದೆಂದೂ ಕೇಳರಿಯದ ರೀತಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಅವರಿಗೆ ಎಲ್ಲ ರೀತಿಯಲ್ಲಿ ಸಹಾಯ ಮಾಡಲು ಅಮೆರಿಕ ಸಿದ್ಧವಿದೆ’ ಎಂದು ಟ್ರಂಪ್ ಶನಿವಾರ ಹೇಳಿದ್ದರು. ಅದಕ್ಕೆ ಭಾನುವಾರ ಪ್ರತಿಕ್ರಿಯಿಸಿದ್ದ ಇರಾನ್, ‘ಅಮೆರಿಕ ದಾಳಿ ನಡೆಸಿದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುವುದಾಗಿ’ ಗುಡುಗಿತ್ತು.
ಇರಾನ್ ಆಡಳಿತವನ್ನು ಪ್ರಶ್ನಿಸಿ ದೇಶವ್ಯಾಪಿ ಎರಡು ವಾರಗಳಿಂದ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 544ಕ್ಕೆ ಏರಿದೆ. ಈ ಪೈಕಿ 496 ಮಂದಿ ಪ್ರತಿಭಟನಕಾರರಾಗಿದ್ದರೆ, 48 ಮಂದಿ ಭದ್ರತಾ ಸಿಬ್ಬಂದಿ ಆಗಿದ್ದಾರೆ.
ಪ್ರತಿಭಟನೆಯನ್ನು ಹತ್ತಿಕ್ಕುತ್ತಿರುವ ಇರಾನ್ ಆಡಳಿತವು, ಇಲ್ಲಿಯವರೆಗೂ 10,600 ಮಂದಿಯನ್ನು ಬಂಧಿಸಿದೆ ಎಂದು ಅಮೆರಿಕ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತರ ಸಂಸ್ಥೆ ವರದಿ ಮಾಡಿದೆ.
ಆದರೆ, ಇರಾನ್ ಸರ್ಕಾರ ಇಲ್ಲಿಯವರೆಗೆ ಯಾವುದೇ ಸಾವು ನೋವಿನ ಅಂಕಿ ಅಂಶಗಳನ್ನು ಪ್ರಕಟಿಸಿಲ್ಲ. ಇಂಟರ್‌ನೆಟ್ ಸ್ಥಗಿತ ಮತ್ತು ದೂರವಾಣಿ ಸಂಪರ್ಕ ಕಡಿತಗೊಂಡಿರುವ ಕಾರಣ ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರತೆಯನ್ನು ಅಳೆಯುವುದು ಇತರ ದೇಶಗಳಿಗೆ ಕಷ್ಟಕರವಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರತಿಭಟನಕಾರರಿಗೆ ಬೆಂಬಲ ಸೂಚಿಸಿದ್ದ ಸೆಲೆಬ್ರಿಟಿಗಳು ಮತ್ತು ಸಾಂಸ್ಕೃತಿಕ ನಾಯಕರರ ಕುರಿತು ಇರಾನ್‌ನ ರೆವಲ್ಯೂಷನರಿ ಗಾರ್ಡ್ ಮಾಹಿತಿ ಪಡೆದುಕೊಳ್ಳುತ್ತಿದೆ. ಅದರ ನಿಯಂತ್ರಣದಲ್ಲಿರುವ ಅರೆ ಸರ್ಕಾರಿ ಸುದ್ದಿ ಸಂಸ್ಥೆ ‘ಫಾರ್ಸ್’ ಈ ನಾಯಕರನ್ನು ಕರೆಸಿ ವಿಚಾರಿಸುತ್ತಿದೆ ಎಂದು ಗೊತ್ತಾಗಿದೆ.
ಇಂಟರ್‌ನೆಟ್ ಸ್ಥಗಿತಗೊಳ್ಳುವ ಮೊದಲು ಪ್ರತಿಭಟನೆಗೆ ಬೆಂಬಲ ನೀಡಿದ್ದ ಬರಹಗಾರರು, ಸಾಂಸ್ಕೃತಿಕ ನಾಯಕರು, ಸೆಲೆಬ್ರಿಟಿಗಳನ್ನು ಈ ಮೂಲಕ ಬೆದರಿಸಲಾಗುತ್ತಿದೆ. ‘ದೇಶದಲ್ಲಿನ ಅಶಾಂತಿಗೆ ನಿಮ್ಮ ಪ್ರಚೋದನೆ ಕಾರಣವಾಗಿದೆ. ಸಾರ್ವಜನಿಕರ ಆಸ್ತಿ ನಾಶ, ಹಿಂಸಾಚಾರದಲ್ಲಿ ಭದ್ರತಾ ಪಡೆ ಸಿಬ್ಬಂದಿಯ ಸಾವಿಗೂ ಕಾರಣರಾಗಿದ್ದೀರಿ ಎಂದು ಆರೋಪಿಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.
ಪ್ರತಿಭಟನೆಗೆ ಮುಂದಾಗುವ ಜನರಿಗೆ ಪೊಲೀಸರು ಎಚ್ಚರಿಕೆಯ ಸಂದೇಶ ರವಾನಿಸಿರುವುದು ಗೊತ್ತಾಗಿದೆ. ಗಲಭೆಕೋರರ ಮೇಲೆ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ನಿಮ್ಮ ಮಕ್ಕಳು, ಕುಟುಂಬದವರು ಪ್ರತಿಭಟನೆಗಳಲ್ಲಿ ಭಾಗವಹಿಸದಂತೆ ಎಚ್ಚರವಹಿಸಿ ಎಂದು ಅದು ಪೋಷಕರಿಗೆ ಸೂಚಿಸಿದೆ.
ಸರ್ಕಾರದ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ತಕ್ಕ ಮಟ್ಟಿಗೆ ಹತೋಟಿಗೆ ಬಂದ ಬೆನ್ನಲ್ಲೇ, ಟೆಹರಾನ್‌ನಲ್ಲಿ ಸರ್ಕಾರಕ್ಕೆ ಬೆಂಬಲ ಸೂಚಿಸಿ ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ರ್‍ಯಾಲಿ ಮಾಡಿದ ಪ್ರತಿಭಟನಕಾರರು, ಸರ್ಕಾರದ ಪರ ಘೋಷಣೆಗಳನ್ನು ಕೂಗಿದ ಫಲಕಗಳನ್ನು ಪ್ರದರ್ಶಿಸಿದರು.
ದೇಶದ ನಡೆಯುತ್ತಿದ್ದ ಪ್ರತಿಭಟನೆಯಿಂದ ಉಂಟಾಗಿದ್ದ ಅಶಾಂತಿ ಈಗ ಇಲ್ಲವಾಗಿದ್ದು ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆಅಬ್ಬಾಸ್ ಅರಾಘ್ಚಿ ಇರಾನ್ ವಿದೇಶಾಂಗ ಸಚಿವ
ಇರಾನ್ ಮತ್ತು ಅಮೆರಿಕ ನಡುವೆ ರಾಜತಾಂತ್ರಿಕ ಸಂಬಂಧಗಳ ಕೊರತೆಯ ಹೊರತಾಗಿಯೂ ವಿಶೇಷ ರಾಯಭಾರಿ ಮೂಲಕ ಸಂವಹನ ಮಾರ್ಗ ಮುಕ್ತವಾಗಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರರು ಸೋಮವಾರ ಹೇಳಿದ್ದಾರೆ. ‘ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ವಿಶೇಷ ರಾಯಭಾರಿಯ ಸಂವಹನ ಮಾರ್ಗ ಮುಕ್ತವಾಗಿದೆ’ ಎಂದು ಸಚಿವಾಲಯದ ವಕ್ತಾಯ ಎಸ್ಮಾಯಿಲ್ ಬಘೈ ಪ್ರತಿಕ್ರಿಯಿಸಿದ್ದಾರೆ. ಅಗತ್ಯವಿದ್ದಾಗ ಎರಡೂ ದೇಶಗಳು ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತವೆ ಎಂದ ಅವರು ‘ಅಮೆರಿಕಕ್ಕೆ ಇರಾನ್‌ನಲ್ಲಿ ಯಾವುದೇ ರಾಜತಾಂತ್ರಿಕ ಉಪಸ್ಥಿತಿ ಇಲ್ಲದಿದ್ದರೂ ಅದರ ಹಿತಾಸಕ್ತಿಗಳನ್ನು ಸ್ವಿಸ್ ರಾಯಭಾರ ಕಚೇರಿ ಪ್ರತಿನಿಧಿಸುತ್ತದೆ’ ಎಂದು ಅವರು ಹೇಳಿದ್ದಾರೆ. ‘ಮಾತುಕತೆಗಳು ಪರಸ್ಪರ ಹಿತಾಸಕ್ತಿ ಕಾಳಜಿಗಳನ್ನು ಗೌರವಿಸುವ ಆಧಾರದಲ್ಲಿರಬೇಕು. ಅದು ಏಕಪಕ್ಷೀಯ ಮತ್ತು ಯಾವುದೇ ನಿರ್ದೇಶನವನ್ನು ಆಧರಿಸಿರಬಾರದು’ ಎಂದಿದ್ದಾರೆ.
ಇರಾನ್‌ನ ಪ್ರತಿಭಟನಕಾರರಿಗೆ ಬೆಂಬಲ ವ್ಯಕ್ತಪಡಿಸಿರುವ ಕೆನಡಾ ಸರ್ಕಾರ ‘ಇರಾನ್ ಆಡಳಿತವು ತನ್ನ ಭಯಾನಕ ದಮನಕಾರಿ ನೀತಿಗೆ ತಡೆ ನೀಡಬೇಕು. ಪ್ರತಿಭಟನಕಾರರನ್ನು ಬೆದರಿಸುವುದನ್ನು ನಿಲ್ಲಿಸಬೇಕು. ನಾಗರಿಕರ ಮಾನವ ಹಕ್ಕುಗಳನ್ನು ಗೌರವಿಸಬೇಕು’ ಎಂದು ಸೋಮವಾರ ಆಗ್ರಹಿಸಿದೆ. ತನ್ನ ನಾಗರಿಕರ ಪ್ರತಿಭಟನೆಯನ್ನು ಹತ್ತಿಕ್ಕುತ್ತಿರುವ ಇರಾನ್ ಕ್ರಮವನ್ನು ಜರ್ಮನ್ ಚಾನ್ಸೆಲರ್ ಫ್ರೆಡರಿಕ್ ಮೆರ್ಜ್ ಖಂಡಿಸಿದ್ದಾರೆ. ‘ಇರಾನ್ ನಾಯಕತ್ವವು ತನ್ನ ಜನರನ್ನು ಬೆದರಿಸುವ ಬದಲಿಗೆ ರಕ್ಷಣೆ ನೀಡಬೇಕು’ ಎಂದು ಅವರು ಹೇಳಿದ್ದಾರೆ.
‘ಅಂತರರಾಷ್ಟ್ರೀಯ ಸಂಬಂಧಗಳಲ್ಲಿನ ಬಲಪ್ರಯೋಗವನ್ನು ವಿರೋಧಿಸುವುದಾಗಿ’ ಚೀನಾ ಹೇಳಿದೆ. ಇರಾನ್ ಸರ್ಕಾರದ ಪ್ರತಿನಿಧಿಗಳು ಮತ್ತು ಅಲ್ಲಿನ ಜನರು ಸಮಸ್ಯೆ ಬಗೆಹರಿಸಿಕೊಳ್ಳಲು ಮತ್ತು ರಾಷ್ಟ್ರೀಯ ಸ್ಥಿರತೆ ಕಾಪಾಡಿಕೊಳ್ಳಲು ಸಮರ್ಥರಿದ್ದಾರೆ’ ಎಂದು ಅದು ಪ್ರತಿಪಾದಿಸಿದೆ ‘ಅನ್ಯ ದೇಶಗಳ ಆಂತರಿಕ ವಿಚಾರದಲ್ಲಿ ಮತ್ತೊಂದು ದೇಶ ಹಸ್ತಕ್ಷೇಪ ಮಾಡಬಾರದು. ಎಲ್ಲ ದೇಶಗಳ ಸಾರ್ವಭೌಮತ್ವ ಮತ್ತು ಭದ್ರತೆಯನ್ನು ಅಂತರರಾಷ್ಟ್ರೀಯ ಕಾನೂನಿನ ಅನ್ವಯ ಪೂರ್ಣವಾಗಿ ರಕ್ಷಿಸಬೇಕು’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಸೋಮವಾರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.