ADVERTISEMENT

ವಿಶ್ವಸಂಸ್ಥೆ ಸಾಮಾನ್ಯ ಸಭೆ | ‘ಅಮೆರಿಕ ಮೊದಲು’: ಟ್ರಂಪ್‌ ವಾದ

ಜಾಗತಿಕ ಸವಾಲುಗಳನ್ನು ಎದುರಿಸಲು ವಿಶ್ವಸಂಸ್ಥೆ ಕರೆಗೆ ಎಲ್ಲ ದೇಶಗಳ ಬೆಂಬಲ

ಏಜೆನ್ಸೀಸ್
Published 24 ಸೆಪ್ಟೆಂಬರ್ 2025, 16:06 IST
Last Updated 24 ಸೆಪ್ಟೆಂಬರ್ 2025, 16:06 IST
ಆಂಟೊನಿಯೊ ಗುಟೆರಸ್
ಆಂಟೊನಿಯೊ ಗುಟೆರಸ್   

ವಿಶ್ವಸಂಸ್ಥೆ: ವಿವಿಧ ರಾಷ್ಟ್ರಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಒಟ್ಟಾಗಿ ಎದುರಿಸಬೇಕು ಎಂಬುದು ಎಲ್ಲ ದೇಶಗಳ ಬಲವಾದ ಪ್ರತಿಪಾದನೆಯಾದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾತ್ರ ತಮ್ಮ ‘ಅಮೆರಿಕವೇ ಮೊದಲು’ ವಿಚಾರಕ್ಕೆ ಒತ್ತು ನೀಡಬೇಕು ಎಂದು ಪ್ರತಿಪಾದಿಸಿದ ಘಟನೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮಂಗಳವಾರ ಸಾಕ್ಷಿಯಾಯಿತು.

ಯುದ್ದ, ಬಡತನ ಹಾಗೂ ಹವಾಮಾನ ಬಲದಾವಣೆಯಿಂದಾಗಿ ಉಂಟಾಗಿರುವ ತೊಂದರೆಗಳು ಸೇರಿ ಜಾಗತಿಕ ಸವಾಲುಗಳನ್ನು ಒಟ್ಟಾಗಿ ಎದುರಿಸಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ ಕರೆ ನೀಡಿದರು.

ಇದಕ್ಕೆ, ಫ್ರಾನ್ಸ್‌ನಿಂದ ಹಿಡಿದು ದಕ್ಷಿಣ ಕೊರಿಯಾ, ದಕ್ಷಿಣ ಆಫ್ರಿಕಾದಿಂದ ಹಿಡಿಸು ಸುರಿನಾಮ್ವರೆಗಿನ ಎಲ್ಲ ದೇಶಗಳ ನಾಯಕರು ಬೆಂಬಲ ಸೂಚಿಸಿದರು. ಆದರೆ, ಟ್ರಂಪ್‌ ಅವರು ಮಾತ್ರ ತಮ್ಮ ಕಾರ್ಯಸೂಚಿಗೇ ಅಂಟಿಕೊಂಡರು.

ADVERTISEMENT

ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳ ಅಧ್ಯಕ್ಷರು, ಪ್ರಧಾನಿಗಳು ಹಾಗೂ ಕೆಲ ದೇಶಗಳ ರಾಜರು ಪಾಲ್ಗೊಂಡಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಗುಟೆರಸ್,‘ಪ್ರತಿಯೊಂದು ದೇಶವೂ ಯುದ್ಧದ ಬದಲಾಗಿ ಶಾಂತಿಯನ್ನು ಆಯ್ಕೆ ಮಾಡಿಕೊಳ್ಳಬೇಕು, ಅರಾಜಕತೆ ಬದಲು ಕಾನೂನು–ಸುವ್ಯವಸ್ಥೆ ಎಲ್ಲರ ಆಯ್ಕೆಯಾಗಬೇಕು, ಸ್ವಹಿತಾಸಕ್ತಿಗಳ ಬದಲಾಗಿ ದೇಶದ ಭವಿಷ್ಯಕ್ಕೆ ಗಮನ ನೀಡಬೇಕು’ ಎಂದು ಮನವಿ ಮಾಡಿದರು.

‘ಜಗತ್ತು ಬಹುಧ್ರುವೀಯ ವ್ಯವಸ್ಥೆಯತ್ತ ಹೊರಳುತ್ತಿದೆ’ ಎಂದ ಗುಟೆರಸ್, ಚೀನಾ ಹಾಗೂ ಭಾರತ ಬೃಹತ್ ಆರ್ಥಿಕ ಶಕ್ತಿಗಳಾಗಿ ಹೊರಹೊಮ್ಮುತ್ತಿವೆ ಎಂದು ಸೂಚ್ಯವಾಗಿ ಹೇಳುವ ಮೂಲಕ ಪರೋಕ್ಷವಾಗಿ ಅಮೆರಿಕವನ್ನು ಕುಟುಕಿದರು.

ಆದರೆ, ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್‌,‘ಅಮೆರಿಕ ಬಲಿಷ್ಠ ಗಡಿಗಳನ್ನು, ಮಿಲಿಟರಿ ವ್ಯವಸ್ಥೆಯ ಜೊತೆಗೆ ಇತರ ರಾಷ್ಟ್ರಗಳೊಂದಿಗೆ ಗಟ್ಟಿಯಾದ ಸ್ನೇಹ ಹೊಂದಿದೆ. ಭೂಮಿ ಮೇಲಿನ ಅತ್ಯಂತ ಬಲಿಷ್ಠ ರಾಷ್ಟ್ರವಾಗಿಯೂ ಅಮೆರಿಕ ಹೊರಹೊಮ್ಮಿದೆ. ನಿಜವಾಗಿಯೂ ಈಗಿನದು ಅಮೆರಿಕ ಪಾಲಿನ ಸುವರ್ಣಯುಗ’ ಎಂದು ಬಣ್ಣಿಸಿದರು.

ಹಲವು ಶಕ್ತಿಗಳಿರುವ ಜಾಗತಿಕ ವ್ಯವಸ್ಥೆಯಿಂದ ಹೆಚ್ಚು ವೈವಿಧ್ಯ ಹಾಗೂ ಚಲನಶೀಲತೆ ಕಾಣಬಹುದು. ಆದರೆ ಅಂತರರಾಷ್ಟ್ರೀಯ ಸಹಕಾರ ಇಲ್ಲದಿದ್ದರೆ ಅರಾಜಕತೆ ಕಂಡುಬರುತ್ತದೆ
ಆಂಟೊನಿಯೊ ಗುಟೆರಸ್ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ
ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂದು 80 ವರ್ಷ ಗತಿಸಿದೆ. ಆದರೆ ನಮ್ಮಲ್ಲಿ ಒಗ್ಗಟ್ಟಿನ ಬದಲು ಪ್ರತ್ಯೇಕತೆ ಮನೆ ಮಾಡಿದೆ. ಜಾಗತಿಕ ವ್ಯವಸ್ಥೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು ಸವಾಲುಗಳನ್ನು ಎದುರಿಸುವುದು ಸಾಧ್ಯವಾಗುತ್ತಿಲ್ಲ
ಇಮ್ಯಾನುಯೆಲ್ ಮ್ಯಾಕ್ರನ್ ಫ್ರಾನ್ಸ್‌ ಅಧ್ಯಕ್ಷ
ಎಲ್ಲ ರಾಷ್ಟ್ರಗಳು ಸಂಘಟಿತವಾಗಿರುವ ಈ ವ್ಯವಸ್ಥೆ ಮನುಕುಲದ ಮಹತ್ವದ ಸಾಧನೆ. ಬದಲಾದ ಸನ್ನಿವೇಶದಲ್ಲಿ ಇಂತಹ ವ್ಯವಸ್ಥೆಯನ್ನು ಸಂರಕ್ಷಿಸುವುದು ಇಂದಿನ ತುರ್ತು
ಜೆನ್ನಿಫರ್ ಗಿರ್ಲಿಂಗ್ಸ್ ಸೈಮನ್ಸ್ ಸುರಿನಾಮ್‌ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.