ಇಸ್ಲಾಮಾಬಾದ್: ನಿಷೇಧಿತ ಸಂಘಟನೆ ತೆಹ್ರಿಕ್–ಎ–ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಇತ್ತೀಚೆಗೆ ನಡೆಸಿದ ದಾಳಿಗಳಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರಲ್ಲಿ ಶೇ 70ರಷ್ಟು ಅಫ್ಗಾನಿಸ್ತಾನದ ಪ್ರಜೆಗಳಿದ್ದರು ಎಂದು ಪಾಕಿಸ್ತಾನದ ಅಧಿಕಾರಿಗಳು ಹೇಳಿದ್ದಾರೆ.
ಇತ್ತೀಚೆಗೆ ತಜಿಕಿಸ್ತಾನದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ರಹಸ್ಯ ಸಭೆಯಲ್ಲಿ ಭಾಗಿಯಾಗಿದ್ದ ಅಫ್ಗಾನಿಸ್ತಾನದಲ್ಲಿನ ಪಾಕಿಸ್ತಾನದ ವಿಶೇಷ ಪ್ರತಿನಿಧಿ ಮೊಹಮ್ಮದ್ ಸಾದಿಕ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ‘ಎಕ್ಸ್‌ಪ್ರೆಸ್ ಟ್ರಿಬ್ಯುನ್’ಪತ್ರಿಕೆ ಸೋಮವಾರ ವರದಿ ಮಾಡಿದೆ.
ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ ಅಫ್ಗನ್ ಭಯೋತ್ಪಾದಕರ ಪ್ರಮಾಣ ಶೇ 5ರಿಂದ ಶೇ 10ರಷ್ಟು ಏರಿಕೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಫ್ಗನ್ ಭಯೋತ್ಪಾದಕರ ಸಹಕಾರದೊಂದಿಗೆ ಪಾಕಿಸ್ತಾನದಲ್ಲಿ ಇತ್ತೀಚೆಗೆ ಭಯೋತ್ಪಾದಕ ದಾಳಿಗಳು ಹೆಚ್ಚುತ್ತಿರುವ ಕಾರಣ, ಅಲ್ಲಿನ ಸರ್ಕಾರವು ರಾಜತಾಂತ್ರಿಕ ಮಾರ್ಗದ ಮೂಲಕ ತಾಲಿಬಾನ್ ಮೇಲೆ ಒತ್ತಡ ಹೇರಲು ಮುಂದಾಗಿದೆ. ಈ ಬಗ್ಗೆ ಚರ್ಚಿಸಲು ಸಾದಿಕ್ ಅವರು ಶೀಘ್ರದಲ್ಲಿ ಟೆಹರಾನ್ ಮತ್ತು ಮಾಸ್ಕೊಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇರಾನ್‌ನ ಛಬಹಾರ್ ಬಂದರಿನ ಮೇಲೆ ದಾಳಿ ನಡೆಸಿದ 18 ಮಂದಿಯಲ್ಲಿ 16 ಜನ ಅಫ್ಗಾನ್ ಪ್ರಜೆಗಳು ಇದ್ದರು ಎಂದು ಇರಾನ್‌ನ ಪ್ರತಿನಿಧಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.