ADVERTISEMENT

ಟರ್ಕಿ, ಸಿರಿಯಾದಲ್ಲಿ ಭೂಕಂಪ: 5,000 ದಾಟಿದ ಮೃತರ ಸಂಖ್ಯೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಫೆಬ್ರುವರಿ 2023, 15:34 IST
Last Updated 7 ಫೆಬ್ರುವರಿ 2023, 15:34 IST
   

ನವದೆಹಲಿ: ಸೋಮವಾರ ಸಂಭವಿಸಿದ ಭೂಕಂಪ ಮತ್ತು ನಂತರದ ಸುಮಾರು 200 ಕಂಪನಗಳ ಪರಿಣಾಮ ಎರಡೂ ರಾಷ್ಟ್ರಗಳಲ್ಲಿ ಭಾರಿ ಹಾನಿಯಾಗಿದೆ. ರಿಕ್ಟರ್ ಮಾಪಕದಲ್ಲಿ ದಾಖಲಾಗಿದ್ದ 7.8 ತೀವ್ರತೆಯ ಭೂಕಂಪದಿಂದ ಸಿರಿಯಾದ ಅಲೆಪ್ಪೊ ಮತ್ತು ಹಮಾ ನಗರ ಹಾಗೂ ಟರ್ಕಿಯ ದಿಯಾರ್‌ಬಕೀರ್‌ವರೆಗೆ ಸಾವಿರಾರು ಕಟ್ಟಡಗಳು ಕುಸಿದಿವೆ. ಟರ್ಕಿಯ ಗಡಿ ಪ್ರದೇಶದಲ್ಲಿ ಸುಮಾರು 6 ಸಾವಿರ ಕಟ್ಟಡಗಳು ನೆಲಸಮವಾಗಿವೆ.

ಟರ್ಕಿ ಮತ್ತು ಸಿರಿಯಾದಲ್ಲಿ ಮೃತಪಟ್ಟವರ ಸಂಖ್ಯೆ 5,000 ದಾಟಿದೆ. ಈ ನಡುವೆ ಭೂಕಂಪ ಸಂಭವಿಸಿರುವ ಟರ್ಕಿಯ 10 ಪ್ರಾಂತ್ಯಗಳಲ್ಲಿ ಅಧ್ಯಕ್ಷ ರೆಸಿಪ್ ತಯಿಪ್ ಎರ್ಡೋಗನ್ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಹತ್ತು ಪ್ರಾಂತ್ಯಗಳಲ್ಲಿ ಈವರೆಗೆ 7,800ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಟರ್ಕಿಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ಓರ್ಹಾನ್ ಟಾಟರ್ ಮಾಹಿತಿ ನೀಡಿದ್ದಾರೆ.

ADVERTISEMENT

ದಕ್ಷಿಣ ಟರ್ಕಿಗೆ 54,000 ಟೆಂಟ್ಸ್, 1,02,000 ಹಾಸಿಗೆಗಳು, 5,000 ಮಂದಿ ಆರೋಗ್ಯ ಸಿಬ್ಬಂದಿಯನ್ನು ಕಳುಹಿಸಲಾಗಿದೆ ಎಂದು ಟರ್ಕಿಯ ಅನದೊಲು ನ್ಯೂಸ್ ವರದಿ ಮಾಡಿದೆ.

ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳಿಂದ ಟರ್ಕಿ ಮತ್ತು ಸಿರಿಯಾಗೆ ನೆರವು ಹರಿದುಬರುತ್ತಿದೆ. ಈ ಎರಡೂ ದೇಶಗಳಲ್ಲಿರುವ ಪಾರಂಪರಿಕ ತಾಣಗಳು ಭೂಕಂಪದಿಂದ ಹಾನಿಗೊಳಗಾಗುವ ಆತಂಕವನ್ನು ಯುನೆಸ್ಕೊ ವ್ಯಕ್ತಪಡಿಸಿದೆ.

ವಿಡಿಯೊ ಒಂದರಲ್ಲಿರುವ ದೃಶ್ಯದ ಪ್ರಕಾರ, ಎರಡನೆಯ ಬಾರಿ ಭೂಮಿ ಕಂಪಿಸಿದಾಗ ಟರ್ಕಿಯ ಸ್ಯಾನ್ಲಿಯುರ್ಫಾದಲ್ಲಿ ಬಹುಮಹಡಿ ಅಪಾರ್ಟ್‌ಮೆಂಟ್‌ ಕಟ್ಟಡ ಧರೆಗುರುಳಿ, ಅವಶೇಷಗಳ ದೂಳು ಮುಗಿಲೆತ್ತರಕ್ಕೆ ಆವರಿಸಿದೆ. ಜನರು ನೆರವಿಗಾಗಿ ಚೀರಾಡುತ್ತಿರುವುದೂ ಕಂಡು ಬಂದಿದೆ.

ಹತಾಯ್‌ ಪ್ರಾಂತ್ಯದಲ್ಲಿ ಹಲವು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ಅವರ ರಕ್ಷಣೆಗೆ ಯಾರೂ ಕೂಡ ಧಾವಿಸಿಲ್ಲವೆಂದು ಸಂತ್ರಸ್ತರ ಸಂಬಂಧಿಕರು ಹೇಳಿರುವುದು ವರದಿಯಾಗಿದೆ.

ಭೂಕಂಪ ಪೀಡಿತ ಎರಡೂ ದೇಶಗಳಲ್ಲಿ ರಕ್ಷಣಾ ಕಾರ್ಯಕ್ಕಾಗಿ ವಿಶೇಷ ತರಬೇತಿ ಪಡೆದ ಶ್ವಾನಗಳು, ವೈದ್ಯಕೀಯ ಸಿಬ್ಬಂದಿ ಸೇರಿ ಎರಡು ಶೋಧ ಮತ್ತು ರಕ್ಷಣಾ ತಂಡಗಳನ್ನು ಕಳುಹಿಸಿರುವುದಾಗಿ ಭಾರತ ಹೇಳಿದೆ.

ಮೈಕೊರೆವ ಚಳಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಭೂಕಂಪದಿಂದ ತೀವ್ರ ಹಾನಿಯಾಗಿರುವ ಸಾನ್ಲಿಉರ್ಫಾದಲ್ಲಿ ಬದುಕುಳಿದಿರುವ ಜನರಲ್ಲಿ ಆಹಾರಕ್ಕಾಗಿ ಹಾಹಾಕಾರ ಶುರುವಾಗಿದೆ.

ಜರ್ಮನಿಯ ಟರ್ಕಿ ಮತ್ತು ಕುರ್ದಿಶ್ ಸಮುದಾಯಗಳು ಸಂತ್ರಸ್ತರಿಗೆ ಹಣ, ಬೆಚ್ಚನೆಯ ಉಡುಪು ಮತ್ತು ಬ್ಲಾಂಕೆಟ್‌ಗಳನ್ನು ವಿತರಿಸಲು ನಿಧಿ ಸಂಗ್ರಹಕ್ಕೆ ಮುಂದಾಗಿವೆ.

30 ಹಾಸಿಗೆಗಳ ಚಿಕಿತ್ಸಾ ಕೇಂದ್ರ ನಿರ್ಮಾಣಕ್ಕೆ ಭಾರತವು ಸೇನೆಯ ಫೀಲ್ಡ್ ಆಸ್ಪತ್ರೆಯನ್ನು ಟರ್ಕಿಗೆ ಕಳುಹಿಸಿದೆ. 45 ಸದಸ್ಯರನ್ನೊಳಗೊಂಡ ಮೆಡಿಕಲ್ ತಂಡದ ಜೊತೆ ವಾಯುಪಡೆಯ ಸಿ17 ವಿಮಾನವು ಟರ್ಕಿಗೆ ತೆರಳಿದೆ. ಇದರಲ್ಲಿ ತುರ್ತು ಚಿಕಿತ್ಸಾ ಸಾಮಗ್ರಿ, ನುರಿತ ವೈದ್ಯರು, ವೆಂಟಿಲೇಟರ್, ಆಪರೇಶನ್ ಥಿಯೇಟರ್ ಮತ್ತು ಇತರ ಸೌಲಭ್ಯಗಳಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪ ಹಾಗೂ ನಂತರದ ಪಶ್ಚಾತ್ ಕಂಪನಗಳಿಂದ ಹಲವು ಕಟ್ಟಡಗಳು ಧರೆಗುಳಿದಿದ್ದು, ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ಮೃತಪಟ್ಟಿದ್ದಾರೆ ಎಂದು ಯುನಿಸೆಫ್ ಹೇಳಿದೆ.

ಕೊರೆವ ಚಳಿಯಲ್ಲಿ ರಾತ್ರಿ ಕಳೆದ ಸಂತ್ರಸ್ತರು

ಟರ್ಕಿಯ ಹತಾಯ್‌ ಪ್ರಾಂತ್ಯ ಮತ್ತು ಗಾಝಿಯಾನ್‌ಟೆಪ್‌ ನಗರದಲ್ಲಿ ನಿರ್ವಸತಿಗರಾದ ಸಾವಿರಾರು ಸಂತ್ರಸ್ತರು ಕ್ರೀಡಾಂಗಣಗಳು, ಮಸೀದಿಗಳು, ಸಮುದಾಯ ಭವನಗಳು, ಶಾಪಿಂಗ್‌ ಮಾಲ್‌ಗಳು ಹಾಗೂ ಬಯಲು ಜಾಗಗಳಲ್ಲಿ ಆಶ್ರಯ ಪಡೆದರು. ಕೊರೆವ ಚಳಿಯಲ್ಲಿ ಕಂಬಳಿ ಹೊದ್ದು, ಬೆಂಕಿಯ ಸುತ್ತ ಕುಳಿತು ಜೀವಭಯದಲ್ಲೇ ರಾತ್ರಿ ಕಳೆದರು.

ಸಿರಿಯಾಕ್ಕೆ ಹೊಂದಿಕೊಂಡಿರುವ ತನ್ನ ಗಡಿಯಲ್ಲಿ ಟರ್ಕಿ ಭಾರಿ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿದೆ. ಶೋಧ ಮತ್ತು ರಕ್ಷಣಾ ಕಾರ್ಯಕ್ಕೆ ಅಂಕಾರಾದ ಮಾನವೀಯ ನೆರವು ದಳ ಮತ್ತು ಸೇನೆಯ ಎಂಟು ತುಕಡಿಗಳನ್ನು ಸಹ ನಿಯೋಜಿಸಲಾಗಿದೆ ಎಂದು ರಕ್ಷಣಾ ಸಚಿವ ಹುಲುಸಿ ಅಕರ್ ಹೇಳಿದ್ದಾರೆ.

ಇಸ್ಕೆಂದೆರುನ್ ನಗರದಲ್ಲಿ ಪ್ರಮುಖ ಆಸ್ಪತ್ರೆ ಕಟ್ಟಡ ಕುಸಿದ ನಂತರ ಬದುಕುಳಿದವರನ್ನು ಹತ್ತಿರದ ಮರ್ಸಿನ್ ನಗರಕ್ಕೆ ಸಾಗಿಸಲು ನೌಕಾಪಡೆಯ ಹಡಗು ಸಮೀಪದ ಬಂದರಿನಲ್ಲಿ ಮಂಗಳವಾರ ಲಂಗರು ಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.