ADVERTISEMENT

ಟರ್ಕಿಯಲ್ಲಿ ಘರ್ಷಣೆ: 6 ಉಗ್ರರು, ಮೂವರು ಪೊಲೀಸರ ಸಾವು

ಏಜೆನ್ಸೀಸ್
Published 29 ಡಿಸೆಂಬರ್ 2025, 15:28 IST
Last Updated 29 ಡಿಸೆಂಬರ್ 2025, 15:28 IST
   

ಅಂಕಾರಾ: ವಾಯುವ್ಯ ಟರ್ಕಿಯಲ್ಲಿ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರರು ಹಾಗೂ ಪೊಲೀಸರ ಮಧ್ಯೆ ಸೋಮವಾರ ನಡೆದ ಘರ್ಷಣೆಯಲ್ಲಿ ಮೂವರು ಪೊಲೀಸರು ಮತ್ತು ಆರು ಉಗ್ರರು ಮೃತಪಟ್ಟಿದ್ದಾರೆ. ಎಂಟು ಪೊಲೀಸರು, ಒಬ್ಬ ಕಾವಲುಗಾರ ಗಾಯಗೊಂಡಿದ್ದಾರೆ.

ಇಸ್ತಾನ್‌ಬುಲ್‌ನ ದಕ್ಷಿಣದಲ್ಲಿರುವ ಯಲೋವಾ ಪ್ರಾಂತ್ಯದ ಎಲ್ಮಾಲಿ ಜಿಲ್ಲೆಯಲ್ಲಿ ಉಗ್ರರು ಅಡಗಿಕೊಂಡಿದ್ದ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದಾಗ ಗುಂಡಿನ ಚಕಮಕಿ ನಡೆದಿದೆ.

‘ದೇಶದಾದ್ಯಂತ 15 ಪ್ರಾಂತ್ಯಗಳಲ್ಲಿ ಐಎಸ್‌ ಶಂಕಿತರ ವಿರುದ್ಧ ಏಕಕಾಲದಲ್ಲಿ ನಡೆಸಿದ ನೂರಕ್ಕೂ ಅಧಿಕ ದಾಳಿಗಳಲ್ಲಿ ಯಲೋವಾದಲ್ಲಿ ನಡೆದ ಕಾರ್ಯಾಚರಣೆಯೂ ಒಂದು. ಉಗ್ರರು ನೆಲೆಗೊಂಡಿದ್ದ ಮನೆಯೊಳಗೆ ಮಹಿಳೆಯರು ಮತ್ತು ಮಕ್ಕಳು ಇದ್ದಿದ್ದರಿಂದ ಈ ಕಾರ್ಯಾಚರಣೆಯನ್ನು ಬಹಳ ಎಚ್ಚರಿಕೆಯಿಂದ ನಡೆಸಲಾಯಿತು. ಐವರು ಮಹಿಳೆಯರು ಮತ್ತು ಆರು ಮಕ್ಕಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ’ ಎಂದು ಗೃಹ ಸಚಿವ ಅಲಿ ಯೆರ್ಲಿಕಾಯ ತಿಳಿಸಿದ್ದಾರೆ.

ADVERTISEMENT

‘ಕಾರ್ಯಾಚರಣೆಯು ಸ್ಥಳೀಯ ಕಾಲಮಾನದ ಪ್ರಕಾರ ಬೆಳಗಿನ ಜಾವ 2 ಗಂಟೆಗೆ ಪ್ರಾರಂಭವಾಗಿದ್ದು, ಬೆಳಿಗ್ಗೆ 9.40ಕ್ಕೆ ಪೂರ್ಣಗೊಂಡಿತು. ನೆರೆಯ ಬುರ್ಸಾ ಪ್ರಾಂತ್ಯದಿಂದಲೂ ವಿಶೇಷ ಪಡೆಗಳನ್ನು ಕಳುಹಿಸಲಾಗಿತ್ತು. ಎಲ್ಲ ಉಗ್ರರು ಟರ್ಕಿಯ ಪ್ರಜೆಗಳಾಗಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.