ADVERTISEMENT

ಟ್ವಿಟರ್‌ ಮಾಲೀಕತ್ವ ಯಾತನೆದಾಯಕ: ಎಲಾನ್‌ ಮಸ್ಕ್‌

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2023, 14:19 IST
Last Updated 12 ಏಪ್ರಿಲ್ 2023, 14:19 IST
ಎಲಾನ್‌ ಮಸ್ಕ್‌ 
ಎಲಾನ್‌ ಮಸ್ಕ್‌    

ಲಂಡನ್‌ (ಎಪಿ): ಟ್ವಿಟರ್‌ ಸಂಸ್ಥೆಯನ್ನು ಮುನ್ನಡೆಸುವುದು ಸ್ವಲ್ಪಮಟ್ಟಿಗೆ ಯಾತನೆದಾಯಕ ಎಂದು ಟ್ವಿಟರ್‌ ಸಿಇಒ, ಉದ್ಯಮಿ ಎಲಾನ್‌ ಮಸ್ಕ್‌ ಅವರು ಬಿಬಿಸಿಗೆ ಹೇಳಿದ್ದಾರೆ.

ಬಿಬಿಸಿಗೆ ಮಂಗಳವಾರ ಸಂದರ್ಶನ ನೀಡಿರುವ ಅವರು ಸಾಮಾಜಿಕ ಜಾಲತಾಣ ವೇದಿಕೆಯ ಮಾಲೀಕತ್ವ, ಉದ್ಯೋಗ ಕಡಿತ, ಸುಳ್ಳು ಮಾಹಿತಿ ಮತ್ತು ಅವರ ಕಾರ್ಯಶೈಲಿ ಕುರಿತು ಮಾತನಾಡಿದ್ದಾರೆ.

ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೊದ ಕಚೇರಿಯಲ್ಲಿ ಅವರು ಈ ಸಂದರ್ಶನ ನೀಡಿದ್ದಾರೆ. ಟ್ವಿಟರ್‌ ನಿರ್ವಹಣೆ ಬೇಸರದ ಕೆಲಸವಲ್ಲ ಆದರೆ ಇದು ರೋಲರ್‌ಕೋಸ್ಟರ್‌ (ಒಂದು ರೀತಿಯ ಸಾಹಸಿ ಸವಾರಿ) ಪ್ರಯಾಣ ಎಂದು ಹೇಳಿದ್ದಾರೆ.

ADVERTISEMENT

₹3.6 ಲಕ್ಷ ಕೋಟಿ ನೀಡಿ ಟ್ವಿಟರ್‌ಅನ್ನು ಮಸ್ಕ್‌ ಅವರು ಕೊಂಡುಕೊಂಡ ಬಳಿಕ ಭಾರಿ ಸಂಖ್ಯೆಯಲ್ಲಿ ಉದ್ಯೋಗ ಕಡಿತ ಮಾಡಲಾಯಿತು. ಈ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸುಮಾರು 1,500 ಉದ್ಯೋಗಗಳನ್ನು ಕಡಿತಗೊಳಿಸಲಾಯಿತು. ಆದರೆ ಈ ಕ್ರಮ ಕೈಗೊಳ್ಳಲೇಬೇಕಿತ್ತು. ವೆಚ್ಚ ಕಡಿಮೆ ಮಾಡದಿದ್ದರೆ ಸಂಸ್ಥೆಯು ದಿವಾಳಿಯಾಗುತ್ತಿತ್ತು. ಸಂಸ್ಥೆ ಸಂಪೂರ್ಣವಾಗಿ ದಿವಾಳಿಯಾಗಿದ್ದರೆ ಯಾರಿಗೂ ಉದ್ಯೋಗ ನೀಡಲಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಸಂಸ್ಥೆಯನ್ನು ಕೊಂಡುಕೊಂಡು ಪರಿತಪಿಸಿದ್ದು ಇದೆಯೇ ಎಂದು ಪತ್ರಕರ್ತ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಮಾಡಲೇಬೇಕಾದ್ದನ್ನು ಮಾಡಬೇಕು’ ಎಂದಿದ್ದಾರೆ.

ಟ್ವಿಟರ್‌ಅನ್ನು ನಾನು ಸ್ವಾಧೀನಪಡಿಸಿಕೊಂಡ ಬಳಿಕ ಸಂಸ್ಥೆಯಿಂದ ದೂರಾಗಿದ್ದ ಜಾಹೀರಾತುದಾರರು ಈಗ ಪುನಃ ಟ್ವಿಟರ್‌ನತ್ತ ಬಂದಿದ್ದಾರೆ ಎಂದ ಅವರು ಈ ಕುರಿತು ಹೆಚ್ಚಿನ ಮಾಹಿತಿ ನೀಡಲಿಲ್ಲ.‌ ಜೊತೆಗೆ, ಕೆಲವೊಮ್ಮೆ ತಾವು ಕಚೇರಿಯಲ್ಲೇ ಮಲಗುವುದಾಗಿಯೂ ತಿಳಿಸಿದ್ದಾರೆ.

ಮಸ್ಕ್‌ ಅವರು ಟೆಲ್ಸಾ ಮತ್ತು ಸ್ಪೇಸ್‌ಎಕ್ಸ್‌ ಸಂಸ್ಥೆಗಳ ಮಾಲೀಕರೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.