ADVERTISEMENT

ವಲಸಿಗರನ್ನು ರವಾಂಡಕ್ಕೆ ಕಳುಹಿಸುವ ಯೋಜನೆ ಕಾನೂನುಬಾಹಿರ: ಬ್ರಿಟನ್‌ ನ್ಯಾಯಾಲಯ

ಎಪಿ
Published 29 ಜೂನ್ 2023, 12:44 IST
Last Updated 29 ಜೂನ್ 2023, 12:44 IST
ಬ್ರಿಟನ್ ಅಧ್ಯಕ್ಷ ರಿಷಿ ಸುನಕ್‌ ( ರಾಯಿಟರ್ಸ್‌ ಚಿತ್ರ)
ಬ್ರಿಟನ್ ಅಧ್ಯಕ್ಷ ರಿಷಿ ಸುನಕ್‌ ( ರಾಯಿಟರ್ಸ್‌ ಚಿತ್ರ)   

‌‌‌‌ಲಂಡನ್ : ಇಂಗ್ಲಿಷ್‌ ಕಾಲುವೆ ಮೂಲಕ ಅಕ್ರಮವಾಗಿ ನುಸುಳಿರುವ ವಲಸಿಗರನ್ನು ರವಾಂಡಕ್ಕೆ ಕಳುಹಿಸುವ ಬ್ರಿಟನ್‌ ಸರ್ಕಾರದ ಯೋಜನೆಯು ಕಾನೂನುಬಾಹಿರ ಎಂದು ಇಲ್ಲಿನ ನ್ಯಾಯಾಲಯವು ಗುರುವಾರ ತೀರ್ಪು ನೀಡಿದೆ.

ವಲಸಿಗರನ್ನು ಕಳುಹಿಸಬಹುದಾದ ‘ಸುರಕ್ಷಿತ ಮೂರನೇ ದೇಶ’ ಎಂದು ರವಾಂಡವನ್ನು ಪರಿಗಣಿಸಲಾಗದು ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ತೀರ್ಪನ್ನು ಪ್ರಶ್ನಿಸಿ ಬ್ರಿಟನ್‌ ಸರ್ಕಾರವು ಸುಪ್ರೀಂ ಕೋರ್ಟ್‌ ಮೊರೆ ಹೋಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ವಲಸಿಗರನ್ನು ದೋಣಿಗಳಲ್ಲಿ ಕರೆತರುವ ಕ್ರಿಮಿನಲ್ ಗ್ಯಾಂಗ್‌ಗಳ ಹಾವಳಿ ತಪ್ಪಿಸಲು ಈ ಯೋಜನೆ ರೂಪಿಸಲಾಗಿದೆ ಎಂದು ಬ್ರಿಟನ್‌ ಸರ್ಕಾರ ಸಮರ್ಥನೆ ನೀಡಿದೆ.

ADVERTISEMENT

ಉತ್ತರ ಫ್ರಾನ್ಸ್‌ನಿಂದ ಬರುವ ವಲಸಿಗರಿರುವ ದೋಣಿಗಳನ್ನು ತಡೆಯುತ್ತೇವೆ ಎಂದು ಪ್ರಧಾನಿ ರಿಷಿ ಸುನಕ್‌ ನೇತೃತ್ವದ ಕನ್ಸರ್ವೇಟಿವ್‌ ಸರ್ಕಾರವು ಈಚೆಗೆ ಘೋಷಿಸಿತ್ತು.

ವಲಸಿಗರನ್ನು ಬ್ರಿಟನ್‌ನಿಂದ 6,400 ‌ಕಿ.ಮೀ. ದೂರದಲ್ಲಿರುವ ರವಾಂಡಗೆ ಕಳುಹಿಸುವುದು ಮನುಷ್ಯತ್ವರಹಿತವಾದ ನಿರ್ಧಾರ ಎಂದು ಮಾನವ ಹಕ್ಕುಗಳ ಪರ ಹೋರಾಟ ನಡೆಸುತ್ತಿರುವ ಸಂಘಟನೆಗಳು ಆರೋಪಿಸಿವೆ. ರವಾಂಡವು ವಲಸಿಗರಿಗೆ ಸುರಕ್ಷಿತವಲ್ಲ ಎಂದು ಹೇಳಿವೆ.

ಸಣ್ಣ ದೋಣಿಗಳಲ್ಲಿ ಬ್ರಿಟನ್‌ಗೆ ತಲುಪುವ ಸ್ವಲ್ಪ ಮಂದಿ ವಲಸಿಗರಿಗೆ ತಮ್ಮ ದೇಶದಲ್ಲಿ ಆಶ್ರಯ ನೀಡುವುದಾಗಿ ರವಾಂಡವು ಕಳೆದ ವರ್ಷವೇ ಬ್ರಿಟನ್‌ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ವಲಸಿಗರನ್ನು ಕಳುಹಿಸುವ ಒಪ್ಪಂದದ ಪ್ರಕಾರ ಬ್ರಿಟನ್‌ ಈಗಾಗಲೇ ರವಾಂಡಕ್ಕೆ ಹಣಕಾಸಿನ ನೆರವು ಕೂಡ ನೀಡಿದೆ.

ಇಂಗ್ಲಿಷ್‌ ಕಾಲುವೆ ಮೂಲಕ 2022ರಲ್ಲಿ 45 ಸಾವಿರಕ್ಕೂ ಹೆಚ್ಚು ವಲಸಿಗರು ಬ್ರಿಟನ್‌ಗೆ ಪ್ರವೇಶಿಸಿದ್ದಾರೆ. ಅಕ್ರಮವಾಗಿ ನುಸುಳಲು ಪ್ರಯತ್ನಿಸುವ ವೇಳೆ ಹಲವು ಮಂದಿ ಮೃತಪಟ್ಟಿದ್ದಾರೆ ಎಂದೂ ವಿವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.