ADVERTISEMENT

ಬ್ರಿಟನ್‌ನಲ್ಲಿ ಕೋವಿಶೀಲ್ಡ್‌ ಲಸಿಕೆ ಬಳಕೆಗೆ ಚಾಲನೆ

ಪಿಟಿಐ
Published 4 ಜನವರಿ 2021, 15:29 IST
Last Updated 4 ಜನವರಿ 2021, 15:29 IST
ಬ್ರಿಟನ್‌ ಪ್ರಧಾನಿ ಸಮ್ಮುಖದಲ್ಲೇ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಕೋವಿಶೀಲ್ಡ್‌ ಲಸಿಕೆ ನೀಡುತ್ತಿರುವುದು. ಎಎಫ್‌ಪಿ ಚಿತ್ರ
ಬ್ರಿಟನ್‌ ಪ್ರಧಾನಿ ಸಮ್ಮುಖದಲ್ಲೇ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಕೋವಿಶೀಲ್ಡ್‌ ಲಸಿಕೆ ನೀಡುತ್ತಿರುವುದು. ಎಎಫ್‌ಪಿ ಚಿತ್ರ    

ಲಂಡನ್‌: ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಆಸ್ಟ್ರಾಜೆನೆಕಾ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕೋವಿಶೀಲ್ಡ್‌ ಲಸಿಕೆಯ ಬಳಕೆಗೆ ಬ್ರಿಟನ್‌ನಲ್ಲಿ ಚಾಲನೆ ನೀಡಲಾಗಿದೆ.

ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವ 82 ವರ್ಷ ವಯಸ್ಸಿನ ಬ್ರಯಾನ್‌ ಪಿಂಕರ್‌ ಅವರು ಲಸಿಕೆ ಪಡೆದ ಮೊದಲ ವ್ಯಕ್ತಿ ಎನಿಸಿದ್ದಾರೆ. ಆಕ್ಸ್‌ಫರ್ಡ್‌ ನಿವಾಸಿಯಾಗಿರುವ ಬ್ರಯಾನ್‌ ಅವರಿಗೆ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಆಸ್ಪತ್ರೆಯ (ಒಯುಎಚ್‌) ಮುಖ್ಯ ಶುಶ್ರೂಶಕಿಯೊಬ್ಬರು ಲಸಿಕೆ ನೀಡಿದ್ದಾರೆ.

ಬ್ರಿಟನ್‌ನಲ್ಲಿ ಕೊರೊನಾ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿವೆ. ಸತತ ಆರು ದಿನ 50,000ಕ್ಕಿಂತಲೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗಿವೆ.

ADVERTISEMENT

‘ಇದೊಂದು ಐತಿಹಾಸಿಕ ಕ್ಷಣ. ಲಸಿಕೆಯ ಬಳಕೆಯಿಂದ ಕೊರೊನಾ ಸೋಂಕನ್ನು ಬೇಗನೆ ಹತ್ತಿಕ್ಕಬಹುದಾಗಿದೆ. ಕೋವಿಡ್‌ ನಿರ್ಬಂಧಗಳನ್ನು ಸಡಿಲಿಸಲೂ ಇದು ಸಹಕಾರಿಯಾಗಿದೆ’ ಎಂದು ಆರೋಗ್ಯ ಕಾರ್ಯದರ್ಶಿ ಮ್ಯಾಟ್‌ ಹ್ಯಾಂಕಾಕ್‌ ಹೇಳಿದ್ದಾರೆ.

ಬ್ರಯಾನ್‌ ಅವರ ಜೊತೆಗೆ ಸಂಗೀತ ಶಿಕ್ಷಕರಾಗಿರುವ 88 ವರ್ಷ ವಯಸ್ಸಿನ ಟ್ರೆವೊರ್‌ ಕಾಲೆಟ್‌ ಹಾಗೂ ಪ್ರೊಫೆಸರ್‌ ಆ್ಯಂಡ್ರ್ಯೂ ಪೊಲಾರ್ಡ್‌ ಅವರಿಗೂ ಸೋಮವಾರ ಲಸಿಕೆ ನೀಡಲಾಗಿದೆ.

‘ಆಕ್ಸ್‌ಫರ್ಡ್‌ ಲಸಿಕೆಯನ್ನು ಬಳಕೆಗೆ ತಂದ ಮೊದಲ ರಾಷ್ಟ್ರ ಎಂಬ ಹಿರಿಮೆಗೆ ನಾವು ಭಾಜನರಾಗಿದ್ದೇವೆ. ಇದು ಬ್ರಿಟನ್‌ನ ವಿಜ್ಞಾನಿಗಳ ಗೆಲುವು. ಈ ಲಸಿಕೆಯ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದ್ದ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಹೇಳಿದ್ದಾರೆ.

‘ಮುಂಬರುವ ದಿನಗಳು ಮತ್ತಷ್ಟು ಸವಾಲಿನದ್ದಾಗಿರಲಿವೆ ಎಂಬುದು ಗೊತ್ತಿದೆ. ಈ ವರ್ಷ ಕೊರೊನಾ ಮಹಾಮಾರಿಯನ್ನು ಹತ್ತಿಕ್ಕುವ ವಿಶ್ವಾಸ ಖಂಡಿತ ಇದೆ’ ಎಂದೂ ಅವರು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.